ಮಂಗಳೂರು : ಕಡಲ ತೀರಕ್ಕೆ ಬರಲಿದೆ ಹೊಸ ಮೆರುಗು | ತಣ್ಣೀರುಬಾವಿ,ಸಸಿಹಿತ್ಲು,ಪಣಂಬೂರು ಬೀಚಿಗೆ ಯೋಜನೆ

ಕೈ ಬೀಸಿ ಜನರನ್ನು ಕರೆಯುವ ಸಮುದ್ರ ತೀರದ ಸೊಬಗು, ಮೇಲೆ ಕೆಳಗೆ ದುಮಿಕ್ಕುತ್ತಾ ಮರಳ ಮೇಲೆ ಚಿತ್ತಾರ ಬರೆಯುವ ಅಲೆಗಳು…ಈ ಸುಂದರ ಕ್ಷಣಗಳನ್ನು ಮತ್ತಷ್ಟು ಸೊಬಗುಗೊಳಿಸಲು ಪ್ರೇಕ್ಷಕರ ಪ್ರೇಕ್ಷಕರಿಗೆ ಮುದ ನೀಡುವ ನಿಟ್ಟಿನಲ್ಲಿ ಕರಾವಳಿ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಕರಾವಳಿ ಪ್ರವಾಸೋದ್ಯಮ ಭಾಗವಾಗಿರುವ ಜಿಲ್ಲೆಯ 3 ಕಡಲ ತೀರಗಳನ್ನು ಆಕರ್ಷಕಗೊಳಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ಈಗಾಗಲೇ ಅತ್ಯಧಿಕ ಜನರನ್ನು ಆಕರ್ಷಿಸುತ್ತಿರುವ ಪಣಂಬೂರು ಕಡಲತೀರದ ಅಭಿವೃದ್ಧಿಗೆ ಪಿಪಿಪಿ ಅಡಿಯಲ್ಲಿ ಯೋಜನೆ ಜಾರಿ ಮಾಡಲಾಗಿದೆ. ಮಂಗಳೂರಿನ ತಣ್ಣೀರುಬಾವಿ ಕಡಲತೀರ ಬ್ಲೂಫ್ಲ್ಯಾಗ್‌ ಯೋಜನೆಯಡಿ ಆಯ್ಕೆಯಾಗಿದ್ದು, ಇನ್ನು ಸರ್ಫಿಂಗ್‌ ಖ್ಯಾತಿಯ ಸಸಿಹಿತ್ಲು ಬೀಚ್‌ನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜಂಗಲ್‌ ಲಾಡ್ಜಸ್‌ ಅಭಿವೃದ್ಧಿ ಮಾಡಲು ಅಣಿಯಾಗಿದೆ.

ಪಣಂಬೂರು ಬೀಚ್‌ಗೆ ವಾಟರ್‌ಸ್ಪೋರ್ಟ್
ಪಣಂಬೂರು ಬೀಚ್‌ ಹೆಚ್ಚು ಮಂದಿಯನ್ನು ಸೆಳೆಯುವ ಬೀಚ್‌ ಆಗಿದ್ದರೂ ಕೆಲವು ವರ್ಷಗಳಿಂದ ನಿರ್ವಹಣೆಯ ಕೊರತೆಯನ್ನು ಎದುರಿಸುತ್ತಿತ್ತು. ಹೀಗಾಗಿ, ಈ ಬಾರಿ ಜಿಲ್ಲಾಡಳಿತ ಇದರ ನಿರ್ವಹಣೆಯ ಹೊಣೆಯನ್ನು ಭಂಡಾರಿ ಬಿಲ್ಡರ್ಗೆ ವಹಿಸಿದೆ. 10 ವರ್ಷಗಳ ಕಾಲ ಈ ಸಂಸ್ಥೆ ಪಣಂಬೂರು ಬೀಚ್‌ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡಲಿದ್ದು, ಮುಖ್ಯವಾಗಿ ಕಯಾಕಿಂಗ್‌, ಜೆಟ್‌ ಸ್ಕೀಯಿಂಗ್‌, ಬನಾನಾ ರೈಡ್‌ ಸಹಿತ ಹಲವು ರೀತಿಯ ಸಮುದ್ರ ಕ್ರೀಡೆಗಳನ್ನು ಪರಿಚಯ ಮಾಡಿಕೊಡುವ ಜೊತೆಗೆ ಸೀಪ್ಲೇನ್‌ ಕೂಡ ಪರಿಚಯಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಸುಸಜ್ಜಿತ ಮಳಿಗೆಗಳು, ಕಾಟೇಜ್‌ಗಳು, ಸಿಸಿ ಕೆಮರಾ, ಹೈಮಾಸ್ಟ್‌ ದೀಪಗಳ ಅಳವಡಿಕೆ, ಗಾರ್ಡ್‌ ಟವರ್‌, ಶೌಚಾಲಯ, ಡ್ರೈನೇಜ್‌ ಸಂಸ್ಕರಣ ಸ್ಥಾವರ ಅಳವಡಿಸಲಾಗುತ್ತದೆ. ಮುಖವಾಗಿ ಪಣಂಬೂರು ಬೀಚ್‌ ಅಪಾಯಕಾರಿಯಾಗಿರುವುದರಿಂದ ಜನರ ಸುರಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಹೀಗಾಗಿ, ಜೀವ ರಕ್ಷಕರ ತಂಡವನ್ನೂ ನಿಯೋಜಿಸಲಾಗುತ್ತದೆ. ಭಂಡಾರಿ ಸಂಸ್ಥೆಗೆ ನವೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗಿದೆ.

ಸಸಿಹಿತ್ಲುಗೆ ಜಂಗಲ್‌ ಲಾಡ್ಜಸ್‌ ಪ್ರವಾಸಿಗರಿಗೆ ಸುವಿಹಾರಿ ವ್ಯವಸ್ಥೆಗಳನ್ನು ಕಲ್ಪಿಸುವ ಜೊತೆಗೆ ಪ್ರವಾಸಿಗರನ್ನು ಕಡಲತೀರಕ್ಕೆ ಸೆಳೆಯುವ ನಿಟ್ಟಿನಲ್ಲಿ ಸಸಿಹಿತ್ಲುವಿನ ಸುಮಾರು 29.5 ಎಕ್ರೆಯಷ್ಟು ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಜಂಗಲ್‌ ಲಾಡ್ಜಸ್‌ ರಿಸಾರ್ಟ್‌ ನಿರ್ಮಾಣಕ್ಕೆ ಮುಂದಾಗಿದ್ದು. 10 ಕೋಟಿ ರೂ. ಯೋಜನೆಗಾಗಿ ಈಗಾಗಲೇ 5 ಕೋಟಿ ರೂ. ಮಂಜೂರಾಗಿದೆ. ಇದರ ಡಿಪಿಆರ್‌ ಇನ್ನಷ್ಟೇ ತಯಾರು ಮಾಡಬೇಕಾಗಿದೆ.

ತಣ್ಣೀರುಬಾವಿ ಕಡಲತೀರದ ಅಭಿವೃದ್ಧಿ ಕಾರ್ಯ ಈಗಾಗಲೇ ಶುರುವಾಗಿದ್ದು, ವೃಕ್ಷೋದ್ಯಾನದ ಜತೆಗೆ ಈ ಕಡಲತೀರ ಹೆಚ್ಚು ಸ್ವಚ್ಚವಾಗಿ ಹಾಗೂ ಬ್ಲೂಫ್ಲ್ಯಾಗ್‌ ಗುರುತಿಸಲು ಪೂರಕ ವಾತಾವರಣ ಹೊಂದಿದ್ದ ಕಾರಣ ಆಯ್ಕೆ ಮಾಡಲಾಗಿದೆ. ಎನ್ನಲಾಗಿದ್ದು, ಅದರ ಅಭಿವೃದ್ಧಿ ಕಾರ್ಯವನ್ನೂ ಕೇಂದ್ರ ಸರಕಾರವೇ ಟೆಂಡರ್‌ ಮೂಲಕ ಬಿವಿಜಿ ಕಂಪೆನಿಗೆ ನೀಡಲಾಗಿದೆ.

ಸೆಪ್ಟಂಬರ್‌ನಲ್ಲಿ ಕಾರ್ಯಾದೇಶ ನೀಡಲಾದ ಬಳಿಕ, ಇದೀಗ, ಈ ಕಡಲತೀರವನ್ನು ಬ್ಲೂಫ್ಲ್ಯಾಗ್‌ ಮಾನದಂಡಗಳಿಗೆ ಅನುಗುಣವಾಗಿ ಪೂರ್ಣವಾಗಿ ಪರಿವರ್ತಿಸುವ ಕಾರ್ಯ ಆರಂಭವಾಗಿದ್ದು, ಯಾವುದೇ ರೀತಿಯಲ್ಲೂ ಕರಾವಳಿ ನಿಯಂತ್ರಣ ವಲಯದ ಮಾರ್ಗಸೂಚಿಯನ್ನು ಉಲ್ಲಂಘಿಸದೆ ಬಿದಿರು ಮುಂತಾದ ಪರಿಸರ ಪೂರಕ ವಸ್ತುಗಳನ್ನು ಬಳಸಿ ಕೊಂಡು ಶೌಚಾಲಯ, ವಸ್ತ್ರ ಬದಲಾವಣೆ ಕೊಠಡಿ, ವೀಕ್ಷಣ ಗೋಪುರ, ಸೋಲಾರ್‌ ಟವರ್‌, ತ್ಯಾಜ್ಯ ಸಂಸ್ಕರಣ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ . 2 ವರ್ಷ ಪೂರ್ಣ ನಿರ್ವ ಹಣೆಯ ಬಳಿಕ ಬಿವಿಜಿ ಕಂಪೆನಿ ಇದನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಲಿದೆ.

ಬ್ಲೂಫ್ಲ್ಯಾಗ್‌ ನಿಗಾ
ತಣ್ಣೀರುಬಾವಿ ಈ ಬಾರಿ ಇಡೀ ದೇಶದಲ್ಲೇ ಬ್ಲೂಫ್ಲ್ಯಾಗ್‌ ಕಾರ್ಯಕ್ರಮದಡಿ ಆಯ್ಕೆಯಾದ ಮೂರು ಬೀಚ್‌ಗಳಲ್ಲಿ ಒಂದು ಎಂಬುದಾಗಿ ಗುರುತಿಸಿಕೊಂಡಿದೆ . ಕರಾವಳಿಯಲ್ಲಿ ಇದೆ ರೀತಿ ಇರುವ ಇನ್ನೊಂದು ಬೀಚ್‌ ಪಡುಬಿದ್ರಿ. ಇದೇ ಕಾರ್ಯಕ್ರಮಕ್ಕೆ ಇಡ್ಯಾ ಬೀಚ್‌ನ ಪ್ರಸ್ತಾವನೆ ಸಲ್ಲಿಸಿದರು ಕೂಡ ಆಯ್ಕೆಯಾಗಿಲ್ಲ. ಸ್ವಚ್ಚತೆ, ಕಡಲ ನೀರಿನ ಸ್ವಚ್ಚತೆ ಅತಿ ಮುಖ್ಯವಾಗಿದ್ದು, ಆಗಾಗ ಅದನ್ನು ತಜ್ಞರ ತಂಡ ಪರಿಶೀಲನೆ ನಡೆಸುವುದಲ್ಲದೆ ಮಾನದಂಡಕ್ಕನುಗುಣವಾಗಿ ಸ್ವಚ್ಛತೆ ಇರಲೇಬೇಕಾಗುತ್ತದೆ.

ಮುಖ್ಯವಾಗಿ ಬ್ಲೂಫ್ಲ್ಯಾಗ್‌ ಬೀಚ್‌ನ ವ್ಯಾಪ್ತಿಯ ಸುಮಾರು 400 ಮೀಟರ್‌ ವ್ಯಾಪ್ತಿಯ ಸಮುದ್ರದಲ್ಲಿ ಮಾಲಿನ್ಯವಾಗ ಬಾರದು ಎಂಬ ಕಾರಣಕ್ಕಾಗಿ ಬೋಟ್‌ ಸಂಚರಿಸುವುದಕ್ಕೂ ಅವಕಾಶ ಕಲ್ಪಿಸಲಾಗುವುದಿಲ್ಲ .


ಪ್ರೇಕ್ಷಕರ ಮನ ಸೆಳೆಯುವಲ್ಲಿ ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಮನರಂಜನೆಯ ಜೊತೆಗೆ ಪ್ರಾಕೃತಿಕ ಸೊಬಗನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುವಲ್ಲಿ ಅಣಿಯಾಗಿದೆ.

Leave A Reply

Your email address will not be published.