ಮದುವೆ ಸಮಯದಲ್ಲಿ ಬೈಕ್ ಬೇಕೆಂದು ಹಠ ಹಿಡಿದ ವರ | ನಂತರ ಮಾಡಿದ್ದಾದರೂ ಏನು?
ವರದಕ್ಷಿಣೆ ನಿಷೇಧ ಕಾನೂನು ಇದ್ದರೂ ಕಿಂಚಿತ್ತು ಭಯವೇ ಇಲ್ಲ. ವರದಕ್ಷಿಣೆ ಕೊಡುವುದು ತಪ್ಪು ಮತ್ತು ಈ ರೀತಿಯ ವರದಕ್ಷಿಣೆಯನ್ನು ವಧುವಿನ ತಂದೆ ತಾಯಿಯಿಂದ ಡಿಮ್ಯಾಂಡ್ ಮಾಡಿ ತೆಗೆದುಕೊಳ್ಳುವುದು ಸಹ ತಪ್ಪು ಅಂತ ಗೊತ್ತಿದ್ದರೂ ಸಹ ಕೆಲವರು ತಮಗೆ ಬೇಕಾದಷ್ಟು ವರದಕ್ಷಿಣೆ ಕೇಳುತ್ತಾರೆ. ಹಲವಾರು ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತದೆ. ಇಲ್ಲೊಬ್ಬ ವರನು ತನಗೆ ವರದಕ್ಷಿಣೆಯಾಗಿ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮದುವೆ ಮಂಟಪದಿಂದಲೇ ಓಡಿಹೋದ. ಆದರೆ ಕೊನೆಗೆ ವಧು ತೆಗೆದುಕೊಂಡ ನಿರ್ಧಾರವನ್ನು ನೀವು ಕೇಳಿದರೆ ಶಾಕ್ ಆಗೋದು ಖಂಡಿತ.
ತಿಲಕ್ ಸಮಾರಂಭದ ನಂತರ ವರನು ಮದುವೆ ಮಂಟಪಕ್ಕೆ ಬಂದು ಇದ್ದಕ್ಕಿದ್ದಂತೆ ವರದಕ್ಷಿಣೆಯಾಗಿ ಒಂದು ಮೋಟರ್ ಬೈಕ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದನು. ಆದರೆ ವಧುವಿನ ಮನೆಯವರು ಬೇಡಿಕೆಯನ್ನು ಪೂರೈಸದ ಕಾರಣ ಮದುವೆ ಸಮಾರಂಭದ ವೇಳೆ ಮದುವೆ ಮಂಟಪದಿಂದ ಎದ್ದು ಓಡಿ ಹೋಗಿದ್ದಾನೆ. ಅದರ ನಂತರ, ವಧು ಮತ್ತು ಅವಳ ಕುಟುಂಬದ ಸದಸ್ಯರು ಹುಡುಗನ ಕಡೆಯವರಿಗೆ ಮದುವೆ ಪೂರ್ಣಗೊಳಿಸಲು ಸಾಕಷ್ಟು ಬೇಡಿಕೊಂಡರು, ಆದರೆ ಯಾರೂ ಅವರ ಮಾತನ್ನು ಕೇಳಲಿಲ್ಲ.
ಆದರೆ ಇದನ್ನು ನೋಡಿಕೊಂಡು ಸುಮ್ಮನಿರದ ಹುಡುಗಿ, ಅದೇ ಯುವಕನನ್ನು ಮದುವೆಯಾಗಲು ಪಟ್ಟು ಹಿಡಿದಳು. ಅವಳು ವರ ಮತ್ತು ಅವನ ಕುಟುಂಬ ಸದಸ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದಾಳೆ. ತನ್ನ ಕುಟುಂಬದ ಗೌರವವನ್ನು ಉಳಿಸಲು ಅದೇ ವರನೊಂದಿಗೆ ತನ್ನ ಮದುವೆ ಮಾಡಿಸಿ ಅಂತ ವಧು ಎಸ್‌ಪಿ ಬಳಿ ಮನವಿ ಮಾಡಿಕೊಂಡಳು. ಹೀಗೆ ಪೊಲೀಸ್ ಕೇಸ್ ಹಾಕಿ ತನ್ನನ್ನೇ ಮದುವೆಯಾಗಬೇಕು ಅಂತ ಹಠ ಹಿಡಿದು ಕುಳಿತ ವಧುವಿನ ಹಠಕ್ಕೆ ಕೊನೆಗೂ ಫಲ ಸಿಕ್ಕಿದೆ.
ಮದುವೆ ಬೇಡ ಅಂತ ಹೋದ ವರನು ಎರಡು ದಿನಗಳ ನಂತರ ಮತ್ತೆ ಬಂದು ವರದಕ್ಷಿಣೆಯ ಆಸೆಗೆ ಅವಳನ್ನು ಬಿಟ್ಟುಹೋದ ಅದೇ ಮದುವೆ ಮಂಟಪದಲ್ಲಿ ಮದುವೆಯಾದನು. ಬಾರಾಬಂಕಿಯ ಜಹಾಂಗೀರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಟಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ವರ ಮತ್ತು ಅವನ ತಂದೆ ನಂತರ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ವಧುವನ್ನು ತಮ್ಮ ಮನೆ ತುಂಬಿಸಿಕೊಳ್ಳಲು ಸಂತೋಷ ಪಡುತ್ತೇವೆ ಅಂತ ಹೇಳಿದರು.