Curry Leaves : ದಟ್ಟ ಕೂದಲಿಗೆ ಕರಿಬೇವಿನ ಎಲೆಯನ್ನು ಈ ರೀತಿ ಉಪಯೋಗಿಸಿ!

ಕಪ್ಪು ಹಾಗೂ ದಟ್ಟತೆಯಿಂದ ಕೂಡಿದ ಕೂದಲುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರು ತಪ್ಪಾಗಲಾರದು. ಕೂದಲಿನ ಬಗ್ಗೆ ಎಲ್ಲರೂ ವಿಶೇಷ ಕಾಳಜಿಯನ್ನು ವಹಿಸುತ್ತಾರೆ. ತಮ್ಮ ಕೂದಲು ದಟ್ಟವಾಗಿರಬೇಕು, ಕಪ್ಪಾಗಿರಬೇಕು, ರೇಷ್ಮೆಯಂತೆ ನುಣುಪಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಶ್ಯಾಂಪು, ಸೋಪ್, ಎಣ್ಣೆಗಳನ್ನು ಹಾಕಿ ಕೂದಲನ್ನು ಪೋಷಿಸುತ್ತಾರೆ. ಆದರೆ ನಿಮಗೆ ತಿಳಿದಿದೆಯಾ? ಕೂದಲಿನ ಅನೇಕ ಸಮಸ್ಯೆಗಳಿಗೆ ಕರಿಬೇವಿನ ಎಲೆಗಳು ರಾಮಬಾಣ!!

ಹೌದು, ಇದು ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದರ ಸಹಾಯದಿಂದ ಕೂದಲಿನ ಅನೇಕ ಸಮಸ್ಯೆಗಳು ಬಗೆಹರಿಯುತ್ತದೆ. ಜನರ ಕೂದಲು ಉದುರುತ್ತಿರುವುದಕ್ಕೆ ಕಾರಣ ನೀರಿನಲ್ಲಿ ಟಿಡಿಎಸ್ ಪ್ರಮಾಣ ಹೆಚ್ಚಾಗಿದ್ದರಿಂದ ಎಂದು ಕೆಲ ದಿನಗಳ ಹಿಂದೆ ಮಾಧ್ಯಮ ವರದಿಯಲ್ಲಿ ಹೇಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇದಲ್ಲದೆ, ಅನೇಕ ಜನರು ತಲೆಹೊಟ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸಲು, ನೀವು ಕರಿಬೇವಿನ ಎಲೆಗಳನ್ನು ಮಾತ್ರ ಬಳಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ತಲೆಹೊಟ್ಟು ಸಮಸ್ಯೆಯೂ ಕೊನೆಗೊಳ್ಳುತ್ತದೆ.

ಕೂದಲಿನ ಬೆಳವಣಿಗೆ:- ಒಂದು ಹಿಡಿ ಕರಿಬೇವಿನ ಎಲೆಗಳಿಗೆ ಸಮಾನ ಪ್ರಮಾಣದ ಮೆಂತ್ಯ ಎಲೆಗಳನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ನೆಲ್ಲಿಕಾಯಿಯನ್ನು ಸೇರಿಸಿ ರುಬ್ಬಿಕೊಳ್ಳಿ. ನೀವು ಇಲ್ಲಿ ಆಮ್ಲಾ ಪುಡಿಯನ್ನು ಸಹ ಬಳಸಬಹುದು. ಇದನ್ನು ರುಬ್ಬಲು ಅರ್ಧ ಟೀಚಮಚ ನೀರನ್ನು ಮಿಶ್ರಣ ಮಾಡಿ. ಕೂದಲಿನ ಮೇಲೆ ಅರ್ಧ ಘಂಟೆಯವರೆಗೆ ಇರಿಸಿ ಮತ್ತು ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಬಹಳ ಬೇಗನೆ ಬೆಳವಣಿಗೆ ಹೊಂದುತ್ತದೆ.

ತಲೆಹೊಟ್ಟು:- ಕರಿಬೇವಿನ ಎಲೆಗಳು ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದ್ದೂ, ಕೂದಲಿನ ಡ್ಯಾಂಡ್ರಫ್ ಅನ್ನು ತೆಗೆದುಹಾಕುತ್ತದೆ. ಇದಕ್ಕಾಗಿ ಸ್ವಲ್ಪ ಕರಿಬೇವಿನ ಎಲೆಗಳ ಪುಡಿ ಮತ್ತು 2 ಚಮಚ ಮೊಸರು ಮಿಶ್ರಣ ಮಾಡಿ. ಇದನ್ನು 15 ರಿಂದ 20 ನಿಮಿಷಗಳ ಕಾಲ ತಲೆಯ ಮೇಲೆ ಇರಿಸಿ ನಂತರ ತೊಳೆಯಿರಿ.

ಒಣಗಿದ ಕೂದಲು:- ನಿಮ್ಮ ಕೂದಲು ತುಂಬಾ ಒಣಗಿದ್ದರೆ, ನಿರ್ಜೀವ ಮತ್ತು ಹಾನಿಗೊಳಗಾಗಿದ್ದರೆ, ನೀವು ಕರಿಬೇವಿನ ಎಲೆಗಳನ್ನು ಬಳಸಬಹುದು. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಬಿಸಿ ತೆಂಗಿನ ಎಣ್ಣೆಗೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಕರಿಬೇವಿನ ಸೊಪ್ಪು ಬೆಂದು ಕಪ್ಪಾಗುವಾಗ ಗ್ಯಾಸ್ ಆಫ್ ಮಾಡಿ ಎಣ್ಣೆ ತಣ್ಣಗಾಗಲು ಬಿಡಿ. ಸ್ನಾನಕ್ಕೆ ಒಂದು ಗಂಟೆ ಮೊದಲು ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಮಸಾಜ್ ಮಾಡಿ ತಲೆ ತೊಳೆಯಿರಿ.

ಕೂದಲು ಉದುರುವುದು:- ನಿಮ್ಮ ಕೂದಲು ನಿರಂತರವಾಗಿ ಉದುರುತ್ತಿದ್ದರೆ, ಈ ಸಮಸ್ಯೆಯನ್ನು ನಿವಾರಿಸಲು ನೀವು ಕರಿಬೇವಿನ ಎಲೆಗಳಿಂದ ತಯಾರಿಸಿದ ಎಣ್ಣೆಗಳನ್ನು ಬಳಸಬಹುದು. ಕರಿಬೇವಿನ ಎಲೆಗಳನ್ನು ತೆಂಗಿನೆಣ್ಣೆಯೊಂದಿಗೆ ಕುದಿಸಿ ಅದಕ್ಕೆ ಮೆಂತ್ಯ ಕಾಳುಗಳನ್ನು ಸೇರಿಸಿ, ನಂತರ ಈ ಎಣ್ಣೆಯಿಂದ ನಿಮ್ಮ ನೆತ್ತಿಗೆ ವಾರಕ್ಕೊಮ್ಮೆ ಮಸಾಜ್ ಮಾಡಿ ಮತ್ತು ಒಂದರಿಂದ ಒಂದೂವರೆ ಗಂಟೆಗಳ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಬೇಕಿದ್ದರೆ ರಾತ್ರಿಯೂ ಇದನ್ನು ಹಾಕಿ ಮಲಗಬಹುದು.

ಈ ಮನೆಮದ್ದನ್ನೊಮ್ಮೆ ಟ್ರೈ ಮಾಡಿ, ನಿಮ್ಮ ಕೂದಲು ದಟ್ಟವಾಗಿ ಬೆಳೆಯುತ್ತದೆ ಮತ್ತು ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ.

Leave A Reply

Your email address will not be published.