Harley Davidson : ಭಾರತಕ್ಕೆ ಲಗ್ಗೆ ಇಡಲಿದೆ ಅಮೆರಿಕದ ಬೈಕ್ ಬ್ರಾಂಡ್ ಹಾರ್ಲೆ- ಡೇವಿಡ್ಸನ್!
ಬೈಕ್ ಉತ್ಪಾದನೆಯಲ್ಲಿ 100 ವರ್ಷಗಳ ಅನುಭವ ಹೊಂದಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು, ಇದುವರೆಗೆ ನೂರಾರು ಬಗೆಯ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿ ಸ್ಟೋರ್ಟ್ಸ್ ಬೈಕ್ ಉತ್ಪಾದನೆಯಲ್ಲಿ ತನ್ನದೇ ಆದ ಅಗ್ರ ಸ್ಥಾನ ಪಡೆದುಕೊಂಡಿದೆ.
ಅಮೆರಿಕ ಮೂಲದ ಪ್ರೀಮಿಯಮ್ ಬೈಕ್ ಕಂಪನಿಯಾಗಿರುವ ಹಾರ್ಲೆ-ಡೇವಿಡ್ಸನ್ (Harley- Davidson) ಮರಳಿ ಭಾರತಕ್ಕೆ ಬರಲಿದೆ ಎಂಬ ಮಾಹಿತಿ ಇದೆ. ಈ ಬಾರಿ, ಭಾರತದ ನಂಬರ್ ಒನ್ ದ್ವಿ ಚಕ್ರ ವಾಹನ ತಯಾರಿಕಾ ಕಂಪನಿಯಾಗಿರುವ ಹೀರೊ ಮೋಟೋಕಾರ್ಪ್ ಜೊತೆಗೆ ಜಂಟಿಯಾಗಿ, ಲಕ್ಸುರಿ ಬೈಕ್ ಅನ್ನು ರಸ್ತೆಗಿಳಿಸುವ ಯೋಜನೆಯಲ್ಲಿದೆ. ಹೀರೊ ಮೋಟೋಕಾರ್ಪ್ ಹಾಗೂ ಹಾರ್ಲೆ-ಡೇವಿಡ್ಸನ್ ನಡುವೆ ಮಾತುಕತೆ ನಡೆದು ಒಪ್ಪಂದ ನಡೆದ ಹಿನ್ನೆಲೆಯಲ್ಲಿ, 2024ರ ವೇಳೆಗೆ ಎರಡೂ ಕಂಪನಿಗಳು ಜತೆಯಾಗಿ ಭಾರತದ ಮಾರುಕಟ್ಟೆಗೆ ಐಷಾರಾಮಿ ಬೈಕೊಂದನ್ನು ರಸ್ತೆಗೆ ಇಳಿಸಲಿದೆ ಎನ್ನಲಾಗಿದೆ.
ಹೀರೊ ಮೋಟೊಕಾರ್ಪ್‌ನ ಸಿಎಫ್‌ಒ ನಿರಂಜನ್ ಗುಪ್ತಾ ಅವರು ಇದರ ಕುರಿತಾದ ಸಣ್ಣ ಸುಳಿವು ನೀಡಿದ್ದು, ಭಾರತದ ಪ್ರೀಮಿಯಮ್ ಬೈಕ್ ಮಾರುಕಟ್ಟೆಗೆ ಪ್ರವೇಶ ಪಡೆಯುವ ಯೋಜನೆಯಂತೆ ಹೀರೊ ಕಂಪನಿಯು ಈ ಒಪ್ಪಂದಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.
ಹೊಸ ಒಪ್ಪಂದದ ಪ್ರಕಾರ ಹೀರೊ ಮೋಟೊಕಾರ್ಪ್ ಭಾರತದಲ್ಲಿ ಹಾರ್ಲೆ-ಡೇವಿಡ್ಸನ್ ಬ್ರಾಂಡ್‌ನ ಅಡಿಯಲ್ಲಿ ವಿಭಿನ್ನ ಶ್ರೇಣಿಯ ಬೈಕ್‌ಗಳನ್ನು ಉತ್ಪಾದನೆ ಮಾಡಲಿದ್ದು, ಇದರ ಜೊತೆಗೆ, ಹಾರ್ಲೆ ಬೈಕ್‌ಗಳ ಸರ್ವಿಸ್ ಮತ್ತು ಬಿಡಿಭಾಗಗಳನ್ನೂ ಮಾರಾಟ ಮಾಡಲಿದೆ. ಇಷ್ಟೇ ಅಲ್ಲದೆ, ಹಾರ್ಲೆ ಕಂಪನಿಯ ಆಕ್ಸೆಸರಿಗಳನ್ನೂ ಮಾರಾಟ ಮಾಡಲಿದೆ .
ಹಾರ್ಲೆ ಡೇವಿಡ್ಸನ್ ಕಂಪನಿಯು 2020ರಲ್ಲಿ ಭಾರತದ ಮಾರುಕಟ್ಟೆಯಿಂದ ನಿರ್ಗಮನವಾಗಿದೆ. ಈ ಬಳಿಕ ಹೀರೋ ಜತೆ ಒಪ್ಪಂದ ಮಾಡಿಕೊಂಡು ಅನೇಕ ಹೊಸ ಮಾಡೆಲ್‌ಗಳನ್ನು ಭಾರತದ ಮಾರುಕಟ್ಟೆಯ ಮೂಲಕ ರಸ್ತೆಗಿಳಿಸಿದೆ.
ಹೀರೊ ಮೋಟೊಕಾರ್ಪ್ 100 ಹಾಗೂ 110 ಸಿಸಿ ಬೈಕ್‌ಗಳ ಮಾರುಕಟ್ಟೆಯಲ್ಲಿ ಮುನ್ನಡೆ ಪಡೆದು, ಅಗ್ರ ಸ್ಥಾನ ಪಡೆದಿದೆ. ಅದರೆ, 160 ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿಗಳ ಬೈಕ್‌ಗಳ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿಲ್ಲ . ಹಾಗಾಗಿ, ಹಾರ್ಲೆ-ಡೇವಿಡ್ಸನ್ ಜತೆ ಒಪ್ಪಂದ ಮಾಡಿಕೊಂಡು ಹೊಸ ಮಾದರಿಯ ಜೊತೆಗೆ ಮಾರುಕಟ್ಟೆಯಲ್ಲಿ ಭದ್ರ ಸ್ಥಾನ ಪಡೆಯಲು ಹೀರೋ ಮುಂದಾಗಿದೆ ಎನ್ನಲಾಗುತ್ತಿದೆ.