ಫೇಸ್ಬುಕ್ ನಿಂದ ಮಹತ್ವದ ನಿರ್ಧಾರ | ಡಿ.1 ರಿಂದ ಬದಲಾಗಲಿದೆ ಈ ನಿಯಮ!!!
ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಡಿಸೆಂಬರ್ 1 ರಿಂದ ಮಹತ್ವದ ಬದಲಾವಣೆ ಜಾರಿಗೆ ತರಲು ಮೆಟಾ ಸಂಸ್ಥೆ ಮುಂದಾಗಿದೆ. ಹೌದು!!.ಬಳಕೆದಾರರು ತಮ್ಮ ಫ್ರೊಫೈಲ್ ಬಯೋದಲ್ಲಿ ಧಾರ್ಮಿಕ ಮಾಹಿತಿ, ರಾಜಕೀಯ ವಿಷಯ, ವಿಳಾಸ ಮತ್ತು ಆಸಕ್ತಿಗಳನ್ನು ಸೂಚಿಸುವ ವಿಷಯಗಳನ್ನು ಹಾಕಿದ್ದರೆ ಸ್ವಯಂಚಾಲಿತವಾಗಿ ತೆಗೆದುಹಾಕುವ ಕ್ರಮಕ್ಕೆ ಮೆಟಾ (Meta) ಸಂಸ್ಥೆ ಮುಂದಾಗಿದೆ.
ಫೇಸ್ಬುಕ್ ಶುರುವಾದಾಗ ಖಾಸಗಿತನದ ರಕ್ಷಣೆ, ಮಾಹಿತಿ ಸೋರಿಕೆಯ ಅಂಶ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರಲಿಲ್ಲ .ಆಗ ಜನರು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಮಾಹಿತಿ ಸೋರಿಕೆ ಹಾಗೂ ಖಾಸಗಿತನವು ಗಂಭೀರ ವಿಚಾರವಾಗಿದೆ ಎಂದು ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಮಾಹಿತಿಯ ದುರ್ಬಳಕೆಯೂ ಹೆಚ್ಚಾಗುತ್ತಿದ್ದು, ಹೀಗಾಗಿ ತೀರಾ ವೈಯಕ್ತಿಕವಾದ ಮಾಹಿತಿಯನ್ನು ಪ್ರೊಫೈಲ್ನಲ್ಲಿ ಸಂಗ್ರಹಿಸದಿರಲು ಸಂಸ್ಥೆಯು ನಿರ್ಧರಿಸಿದೆ. ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಧರ್ಮ, ರಾಜಕೀಯ, ಲೈಂಗಿಕತೆ ಇವೆಲ್ಲವೂ ಕೆಟ್ಟ ರೀತಿಯಲ್ಲಿ ಬಳಕೆ ಆಗುತ್ತಿರುವುದನ್ನು ಕಂಡುಬರುತ್ತಿದೆ. ಇವೆಲ್ಲವೂ ಜನರಿಗೆ ಬೇಕಾಗಿರುವ ಸಂಗತಿಗಳೇ ಆದರು ಕೂಡ ಕೆಲವರು ಈ ವಿಷಯವನ್ನು ಬೇರೆಯದೇ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಮಾರ್ಕ್ ಝುಕರ್ಬರ್ಗ್ ಒಡೆತನದ ಮೆಟಾ ಮಾಹಿತಿ ನೀಡಿದೆ.
ಪ್ರೊಫೈಲ್ (Profile) ಮಾಹಿತಿಯನ್ನು ಯಾರು ನೋಡಬಹುದು ಎಂಬುದನ್ನು ನಿರ್ಧರಿಸುವ ಬಳಕೆದಾರರ ಹಕ್ಕಿನ ಮೇಲೆ ಈ ಹೊಸ ಫೀಚರ್ಸ್ ಬದಲಾವಣೆ ಬೀರುವುದಿಲ್ಲ ಎಂದು ಕಂಪನಿ ಹೇಳಿದ್ದು, ಡಿ. 1 ರಿಂದ ಈ ಬದಲಾವಣೆ ಜಾರಿಗೆ ಬರಲಿದೆ ಎಂದು ಫೇಸ್ಬುಕ್ ತಿಳಿಸಿದ್ದು, ಈ ಬದಲಾವಣೆಯಿಂದ ಪ್ರೊಫೈಲ್ ಸ್ಕ್ರೋಲಿಂಗ್ನ ಉದ್ದವನ್ನು ಕಡಿಮೆ ಮಾಡಿದಂತಾಗುತ್ತದೆ. ಇನ್ನುಳಿದ ಸಾಮಾಜಿಕ ಪ್ಲಾಟ್ಫಾರ್ಮ್ನಲ್ಲಿ ಈ ರೀತಿಯ ವಿಷಯಗಳಿಗೆ ಅವಕಾಶ ಇಲ್ಲದೇ ಇದ್ದುದಲ್ಲದೆ, ಫೇಸ್ಬುಕ್ ಮಾತ್ರ ಈ ವಿಷಯಕ್ಕೆ ಅನುಮತಿ ಸೂಚಿಸಿತ್ತು. ಹಾಗಾಗಿ, ಈ ಅಪವಾದದಿಂದ ಮುಕ್ತವಾಗಲು ಈಗ ಫೇಸ್ಬುಕ್ ಹೊಸ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ.
ಇಷ್ಟೆ ಅಲ್ಲದೆ, ಫೇಸ್ಬುಕ್ನಲ್ಲಿ ಕೆಲವು ಮಾಹಿತಿಯನ್ನು ಬೇಕಾದ ಹಾಗೆ ಬರೆದುಕೊಳ್ಳುವ ಅವಕಾಶಕ್ಕೆ ಅಂತ್ಯ ಹಾಡಿದಂತಾಗಲಿದೆ. ಧರ್ಮ, ಬೇಡದ ವಿಷಯಗಳ ಮೇಲೆ ಕೇಂದ್ರೀಕರಿಸುವವರು ಹೆಚ್ಚಾಗಿ ನಕಲಿ ಪ್ರೊಫೈಲ್ ಅನ್ನೇ ಬಳಕೆ ಮಾಡುವ ಜೊತೆಗೆ ಹಲವಾರು ವಿಧದಲ್ಲಿ ತಪ್ಪು ಮಾಹಿತಿಯನ್ನು ಪಸರಿಸುತ್ತಾರೆ. ಹೀಗಾಗಿಯೇ ಫೇಸ್ಬುಕ್ ಈ ವ್ಯವಸ್ಥೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸಾಮಾಜಿಕ ಬದಲಾವಣೆಯ ಹಾದಿ ಹಿಡಿದಿದೆ ಎನ್ನಲಾಗುತ್ತಿದೆ.