35ವರ್ಷಗಳ ಬಳಿಕ ಹೈಸ್ಕೂಲ್ ಸಹಪಾಠಿಗಳಿಗೆ ಮದುವೆ ಮಾಡಿಸಿದ ಸ್ನೇಹಿತರು
ಎಷ್ಟೇ ಆದರೂ ಮನುಷ್ಯ ಸಂಘ ಜೀವಿ ಆಗಿರಲು ಇಷ್ಟ ಪಡುತ್ತಾನೆ. ಮನುಷ್ಯನ ಒಂಟಿ ಜೀವನ ಆತನಿಗೆ ಒಂದು ದಿನ ಜಿಗುಪ್ಸೆ ಉಂಟು ಮಾಡೇ ಮಾಡುತ್ತದೆ. ಹೌದು ತನ್ನದೇ ಸಂಸಾರ ಕಟ್ಟಿಕೊಂಡು ಜೀವನ ನಡೆಸಬೇಕು ಎಂಬ ಹಂಬಲ ಕೆಲವರಿಗೆ ಇದ್ದರೂ ಸಹ ಸರಿಯಾದ ಒಡನಾಡಿ ಸಿಕ್ಕುವಲ್ಲಿ ಹತಾಶರಾಗಿರುತ್ತಾರೆ.
ಇಲ್ಲೆರಡು ಜೀವಗಳು ತನ್ನ ಸಹಪಾಠಿಗಳ ಸಹಾಯದಿಂದ ಒಂದಾಗಿದ್ದಾರೆ. ಹೈಸ್ಕೂಲ್ ಸಹಪಾಠಿಗಳಿಬ್ಬರು 35 ವರ್ಷಗಳ ಬಳಿಕ ಮದುವೆಯಾಗಿರುವ ವಿನೂತನ ಪ್ರಸಂಗ ಕೇರಳದಲ್ಲಿ ನಡೆದಿದೆ. ಥನಲ್’ ಹೆಸರಿನ ಮರತಮ್ಮಕೂಡು ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪು ಇಬ್ಬರನ್ನು ಒಂದುಗೂಡಿಸಿದೆ.
1986-87ನೇ ಬ್ಯಾಚ್‌ನ ಹೈಸ್ಕೂಲ್ ವಿದ್ಯಾರ್ಥಿಗಳಾಗಿದ್ದ ಹರಿದಾಸನ್ ಮತ್ತು ಸುಮತಿ ಒಂದಾದ ನವಜೋಡಿಗಳು. ಹರಿದಾಸನ್ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಕೇರಳ ವಿದ್ಯಾರ್ಥಿ ಸಂಘದ ನಾಯಕರಾಗಿದ್ದರು. ಸುಮತಿ ಸೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯಕರ್ತೆಯಾಗಿದ್ದರು. ಪ್ರಸ್ತುತ ಹರಿದಾಸನ್ ಕಲಾಮಂದಂಳಂನ ತಿಮಿಲಾ ಪರಿಣಿತರಾಗಿದ್ದಾರೆ. ಸುಮತಿ ಸಿಪಿಎಂ ಪನ್ನಿತ್ತಡಂ ಶಾಖೆಯ ಸದಸ್ಯೆ, ಮಹಿಳಾ ಸಂಘದ ಕಾರ್ಯಕರ್ತೆ ಮತ್ತು ಚೋವನ್ನೂರು ಬ್ಲಾಕ್ ಪಂಚಾಯತ್ ಮಾಜಿ ಅಧ್ಯಕ್ಷೆಯಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಪುನರ್ಮಿಲನದ ಸಂದರ್ಭದಲ್ಲಿ ಇವರಿಬ್ಬರು ಅವಿವಾಹಿತರು ಮತ್ತು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಸಹಪಾಠಿಗಳು ಗಮನಿಸಿದರು. ತಿಂಗಳ ಹಿಂದೆ ಅವರ ಮಾಜಿ ಕ್ಲಾಸ್ ಲೀಡರ್ ಸತೀಶನ್ ಅವರು ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಬಹುದೇ ಎಂದು ಕೇಳಿದರು. ಈ ಸಲಹೆಯನ್ನು ಅವರ ಸಹಪಾಠಿಗಳು ಸಹ ಬೆಂಬಲಿಸಿದರು. ಆದರೆ ಇಬ್ಬರೂ ಯೋಚಿಸದ ಕಾರಣ ನಿರಾಕರಿಸಿದರು. ಆದರೂ ಅವರ ಸ್ನೇಹಿತರು ಒಪ್ಪಿಸುವ ಪ್ರಯತ್ನ ಬಿಡಲಿಲ್ಲ. ಅಂತಿಮವಾಗಿ ಕುನಬತುಕಾಮ ದೇವಿ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಆಶೀರ್ವಾದದೊಂದಿಗೆ ಸೋಮವಾರ ನವೆಂಬರ್ 14 ರಂದು ವಿವಾಹವಾದರು.
ಹರಿದಾಸನ್ ಅಭಿಪ್ರಾಯದಂತೆ ರಾಜಕೀಯ ಮತ್ತು ವೈಯಕ್ತಿಕ ಜೀವನ ಬೇರೆ ಬೇರೆ. ಅವುಗಳನ್ನು ಒಟ್ಟಿಗೆ ಸೇರಿಸುವುದಿಲ್ಲ ಎಂದಿದ್ದಾರೆ. ನಾನು ಮದುವೆಯ ಬಗ್ಗೆ ಎಂದಿಗೂ ಯೋಚಿಸಲಿಲ್ಲ, ಆದರೆ ನಾನು ಒಂಟಿಯಾಗಿರುವ ಬಗ್ಗೆ ದುಃಖಿತನಾಗಿದ್ದೆ. ಈಗ ಸ್ನೇಹಿತರು ಮತ್ತು ಕುಟುಂಬದವರ ನೆರವಿನಿಂದ ನನಗೆ ಓರ್ವ ಒಡನಾಡಿ ಸಿಕ್ಕಿದ್ದಾಳೆ ಎಂದು ಸಂತೋಷ ವ್ಯಕ್ತ ಪಡಿಸಿದ್ದಾರೆ.
ಮದುವೆ ಬಗ್ಗೆ ಮಾತನಾಡಿರುವ ಸುಮತಿ, ಇದನ್ನು ಎಂದೂ ನಿರೀಕ್ಷಿಸಿರಲಿಲ್ಲ. ನಾವು ಒಟ್ಟಿಗೆ ಅಧ್ಯಯನ ಮಾಡಿದ್ದರಿಂದ ಅರ್ಥ ಮಾಡಿಕೊಳ್ಳುವ ಮನೋಭಾವ ಇದೆ ಮತ್ತು ಅದಕ್ಕಾಗಿಯೇ ನಾವು ಮದುವೆಯಾಗಲು ನಿರ್ಧರಿಸಿದ್ದೇವೆ ಎಂದರು.
ಸದ್ಯ ಒಂದಾಗಿರುವ ಜೋಡಿಯನ್ನು ನೋಡಿ ಸಹಪಾಠಿಗಳು ಖುಷಿಯಾಗಿದ್ದರೆ.