BBK 9 : ಕುಡ್ಲದ ಜವನೆ, ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿಗೆ ಅವಾಚ್ಯ ಶಬ್ದಗಳಿಂದ ಬೆದರಿಕೆ – ದೂರು ದಾಖಲು
ಬಿಗ್ ಬಾಸ್ ಕನ್ನಡದ 9 ನೇ ಆವೃತ್ತಿ ಎಲ್ಲಾ ಕಡೆ ಭಾರೀ ಪ್ರಶಂಸೆಯನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಸ್ಪರ್ಧೆಯಲ್ಲಿ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ರೂಪೇಶ್ ಶೆಟ್ಟಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದ್ದು, ಈ ಬಗ್ಗೆ ದೂರು ನೀಡಲಾಗಿದೆ.
ಹೌದು, ಬಿಗ್ಬಾಸ್ ಸ್ಪರ್ಧಿಯಾಗಿರುವ ರೂಪೇಶ್ ಶೆಟ್ಟಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿರುವ ಬಗ್ಗೆ ಅವರ ಕುಟುಂಬ ಸದಸ್ಯರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ರೂಪೇಶ್ ಶೆಟ್ಟಿ ಅವರು ಬಿಗ್ಬಾಸ್ನಲ್ಲಿ ನೀಡಿರುವ ಹೇಳಿಕೆಗಳನ್ನಿಟ್ಟುಕೊಂಡು ಕೆಲವರು ಬೆದರಿಕೆ ಹಾಕಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ರೂಪೇಶ್ ಶೆಟ್ಟಿ ಅವರ ಕುಟುಂಬ ಸದಸ್ಯರು ದೂರು ನೀಡಿದ್ದು, ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 9 ರಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮದ ದಿನ, ರೂಪೇಶ್ ಶೆಟ್ಟಿ, ನಾನು ಗಡಿನಾಡ ಕನ್ನಡಿಗ ಅಂತ ಹೇಳಿದ್ದರು. ತುಳುನಾಡಿನಲ್ಲಿ ಹೆಸರು ಗಳಿಸಿ, ಈಗ ಗಡಿನಾಡ ಕನ್ನಡಿಗ ಅಂತ ಹೇಳಿರುವುದು ತುಳು ಪ್ರೇಮಿಗಳು ಬೇಸರಗೊಂಡಿದ್ದರು. ಹಲವು ತುಳುವರು ರೂಪೇಶ್ ಶೆಟ್ಟಿ ವಿರುದ್ಧ ನಿಂತಿದ್ದಾರೆ.
ರೂಪೇಶ್ ಶೆಟ್ಟಿ ಹೇಳಿದ್ದೇನು?
‘ನಾನು ಕಲಿತದ್ದು ಕನ್ನಡ ಮೀಡಿಯಂನಲ್ಲಿ. ಆದರೆ ನಾನು ಗಡಿನಾಡ ಕನ್ನಡಿಗ. ನಾನು ಹುಟ್ಟಿದ್ದು ಮಂಗಳೂರಿನಿಂದ 30 ಕಿ.ಮೀ ದೂರದ ಕೇರಳದ ಕಾಸರಗೋಡಿನಲ್ಲಿ. ನಾವು ಗಡಿನಾಡ ಕನ್ನಡಿಗರು. ಕನ್ನಡ ಕಲಿಯಲು ಆಸೆ ಇದ್ದರೂ ಅಲ್ಲಿ ಕಲಿಯೋದು ಕಷ್ಟ. ಅಲ್ಲಿ ಶಾಲೆಯಲ್ಲಿ ಕನ್ನಡ ಕಲಿಸೋ ಮಾಸ್ಟರ್ ಇಲ್ಲ. ಆದರೆ ನಾನು ಕೇರಳದಲ್ಲಿ ಇದ್ದರೂ ಕನ್ನಡ ಮೀಡಿಯಂನಲ್ಲಿ ಕಲಿತಿದ್ದು. ಅಷ್ಟು ಆತ್ಮವಿಶ್ವಾಸವನ್ನು ಕನ್ನಡ ಕಲಿಸಿ ಅಲ್ಲಿನ ಶಿಕ್ಷಕರು ನಮಗೆ ಕೊಟ್ಟಿದ್ದಾರೆ’ ಎಂದು ಹೇಳಿದ್ದರು.