ಗ್ರಾಹಕರು ಹಿಡಿದ ಮೀನಿನ ಖಾದ್ಯ ತಯಾರಿಸಿ ಕೊಡುತ್ತೆ ಈ ರೆಸ್ಟೋರೆಂಟ್ | ಅಲ್ಲೇ ಇರೋ ಕೊಳದಲ್ಲಿ ಮೀನು ಹಿಡಿದು ನೀವೇ ಕುಕ್ ಮಾಡೋಕು ಇದೆ ಅವಕಾಶ!
ಸಾಮಾನ್ಯವಾಗಿ ರೆಸ್ಟೋರೆಂಟ್ ಗಳಿಗೆ ಹೋದಾಗ ಅಲ್ಲಿ ಯಾವ ಆಹಾರ ತಯಾರಿರುತ್ತೋ ಅದನ್ನು ನಾವು ತಿನ್ನಬೇಕು. ಅವರು ಮಾಡಿರೋ ವೆರೈಟಿಯಲ್ಲಿ ಆಯ್ಕೆ ಮಾಡಿ ತಿನ್ನಬೇಕು. ಆದ್ರೆ, ಈ ಹೋಟೆಲ್ ಮೀನು ಪ್ರಿಯರಿಗೆ ಸಕ್ಕತ್ ಫೇವರೇಟ್ ಆಗೋದ್ರಲ್ಲಿ ಡೌಟ್ ಯೇ ಇಲ್ಲ. ಯಾಕಂದ್ರೆ ಇಲ್ಲಿ ನೀವೇ ಮೀನು ಹಿಡಿಯುವುದಲ್ಲದೆ ನೀವೇ ಪದಾರ್ಥ ಮಾಡಿಯೂ ತಿನ್ನಬಹುದು.
ಇಂತಹದೊಂದು ವಿಶೇಷವಾದ ರೆಸ್ಟೋರೆಂಟ್ ಇರುವುದು ಜಪಾನ್‌ನಲ್ಲಿ. ಹೌದು. ಇಲ್ಲಿ ಹೋಗಿ ಅಡುಗೆ ತಯಾರಿಸಿ ತಿನ್ನಬಹುದು. ಮಾತ್ರವಲ್ಲದೇ ನೀವು ಕೊಟ್ಟ ಮೀನಿನ ಖಾದ್ಯಗಳನ್ನೇ ಸವಿಯಬಹುದು. ಇಂತಹದೊಂದು ವೈವಿಧ್ಯಮಯ ಸೇವೆಗೆ ಕಾರಣವಾಗಿದೆ ಒಸಾಕಾದಲ್ಲಿರುವ ಝೌವೊ ರೆಸ್ಟೊರೆಂಟ್.
ರೆಸ್ಟೋರೆಂಟ್ ನಲ್ಲಿ ಕೊಳವಿದ್ದು, ಇದರಲ್ಲಿ ಹಲವಾರು ಬಗೆಯ ಮೀನುಗಳು ಇವೆ. ಗ್ರಾಹಕರು ತಮಗೆ ಇಷ್ಟವಾದ ಮೀನನ್ನು ಹಿಡಿಯಬಹುದು. ಬಳಿಕ ಗ್ರಾಹಕರು ಹಿಡಿದ ಮೀನನ್ನು ತಾವೇ ಅಡುಗೆ ತಯಾರಿಸಿ ತಿನ್ನಬಹುದು. ಇಲ್ಲವೇ ಯಾವ ಮೀನನ್ನು ಗ್ರಾಹಕರು ಹಿಡಿಯುತ್ತಾರೆಯೋ ಆ ಮೀನಿನ ಜತೆ ಫೋಟೋ ಕ್ಲಿಕ್ಕಿಸಿ ಅಲ್ಲಿಯ ಸಿಬ್ಬಂದಿ ಬಾಣಸಿಗರಿಗೆ ಕಳುಹಿಸುತ್ತಾರೆ. ನಂತರ ಅದೇ ಮೀನಿನಲ್ಲಿ ಏನು ಪದಾರ್ಥ ಬೇಕು ಎಂದು ಗ್ರಾಹಕರಿಗೆ ಕೇಳಿ ಅವರ ಇಷ್ಟದಂತೆ ಪದಾರ್ಥ ಮಾಡಿಕೊಡುತ್ತಾರೆ.
ರೆಸ್ಟೋರೆಂಟ್‌ನಲ್ಲಿರುವ ಕೊಳದಿಂದ ಮೀನು ಹಿಡಿಯಲು ಮಾತ್ರವಲ್ಲದೇ ದೋಣಿಯಲ್ಲಿ ಕುಳಿತು ಆನಂದಿಸಲು ಕೂಡ ಇಲ್ಲಿ ಅವಕಾಶವಿದೆ. ತಾವು ಹಿಡಿದ ಮೀನನ್ನು ತಿನ್ನುವುದೇ ಒಂತಾರ ಮಜಾ. ಹಾಗಾಗಿ, ಈ ರೆಸ್ಟೋರೆಂಟ್ ನಲ್ಲಿ ಮೀನಿನ ಖಾದ್ಯಕ್ಕೆ ಜನ ಸಾಗರವೇ ಮುಗಿಬೀಳುತ್ತೆಯಂತೆ…