ಭೂ ಸೇನೆಯ ಉನ್ನತ ಹುದ್ದೆ ಅಲಂಕರಿಸಿದ ಕೊಡಗಿನ ಕುವರಿ; ಹುಟ್ಟೂರಿನಲ್ಲಿ ಭಾರಿ ಸಂಭ್ರಮ

ಕೊಡಗು ಜಿಲ್ಲೆ ವೀರ ಯೋಧರ ತವರೂರು. ಹಿಂದಿನಿಂದಲೂ ಕೂಡ ವೀರ ಪರಂಪರೆಯನ್ನು ಮುನ್ನಡೆಸಿ ಕೊಂಡು ಬಂದಿರುವ ಹಿನ್ನೆಲೆ ಹೊಂದಿದ್ದು, ಇಂದಿಗೂ ನೂರಾರು ಪ್ರತಿಭೆಗಳನ್ನು ದೇಶ ಸೇವೆಗೆ ಅಣಿಮಾಡುತ್ತಾ ದೇಶದ ಹಿರಿಮೆಯನ್ನು ಎತ್ತಿ ತೋರಿಸಲು ಸೇನಾ ವಿಭಾಗಕ್ಕೆ ಅನೇಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.

ಈ ಹಿರಿಮೆಯ ಗರಿಗೆ ಮತ್ತೊಂದು ಯಶಸ್ಸಿನ ಪತಾಕೆಯನ್ನು ಏರಿಸಲು ಮಹಿಳೆಯೊಬ್ಬರು ಮುಂದಾಗಿದ್ದಾರೆ.

ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾರಿಕೆ ಲಿಶ್ರಿತ ಇದೀಗ ಅತ್ಯುನ್ನತ ಮೇಜರ್ ಹುದ್ದೆಗೆ ಬಡ್ತಿ ಹೊಂದಿದ್ದು, ಈ ಮೂಲಕ ಹೆಣ್ಣು ಅಬಲೆಯಲ್ಲ ಎಂದು ನಿರೂಪಿಸಿ ಕೊಡಗಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ.

ಇವರು ಬೆಂಗಳೂರಿನ ಎಸ್ಎಂವಿಟಿ ತಾಂತ್ರಿಕ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ. ಭಾಗಮಂಡಲದ ತಾವೂರು ಗ್ರಾಮದ ನಿವಾಸಿಯಾಗಿರುವ ಲಿಶ್ಮಿತ , ಮಡಿಕೇರಿಯಲ್ಲಿ ನೆಲೆಸಿರುವ ಬಾರಿಕೆ ಅಯ್ಯಪ್ಪ ಹಾಗೂ ರತ್ನಶೀಲ ಅವರ ಹೆಮ್ಮೆಯ ಸುಪುತ್ರಿಯಾಗಿದ್ದಾರೆ.

2016ರಲ್ಲಿ ಬಾಂಬೆ ಇಂಜಿನಿಯರಿಂಗ್ ಗ್ರೂಪ್ ರೆಜಿಮೆಂಟ್ ಮೂಲಕ ಲೆಫ್ಟಿನೆಂಟ್ ಆಗಿ ಸೇವೆಗೆ ಸೇರ್ಪಡೆಗೊಂಡ ಲಿಶ್ಚಿತ ಒಟಿಎ ಚೆನ್ನೈನಲ್ಲಿ 11 ತಿಂಗಳು ತರಬೇತಿ ಪಡೆದು ನಂತರ ಕ್ಯಾಪ್ಟನ್ ಆಗಿ ಬಡ್ತಿ ಹೊಂದಿ ರಾಂಚಿಯಲ್ಲಿ ಕರ್ತವ್ಯ ನಿರ್ವಹಿಸಿ, ಬಳಿಕ ದೆಹಲಿಯಲ್ಲಿಸೇವೆ ಸಲ್ಲಿಸಿ ಇದೀಗ ಮೇಜರ್ ಆಗಿ ಬಡ್ತಿಹೊಂದಿ ದಿಮಾಪುರದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.

ಇವರ ಹುಟ್ಟೂರು ಭಾಗಮಂಡಲದ ಬಾರಿಕೆಯ ಜನರ ಮನದಲ್ಲಿ ಸಂತಸ ಮನೆ ಮಾಡಿದೆ. ಸಂತಸ ಈ ಮೂಲಕ ಕೊಡಗಿನ ಕುವರಿ ಸಾಧನೆಯ ಮೆಟ್ಟಿಲನ್ನು ಏರುತ್ತಾ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ.

Leave A Reply

Your email address will not be published.