Car Insurance : ಕಾರಿನ ಮೇಲೇ ಮರ ಬಿದ್ದರೆ ವಿಮೆ ಸಿಗುತ್ತದೆಯೇ? ನಿಯಮ ಏನು ಹೇಳುತ್ತೆ ಗೊತ್ತಾ?
ಓರ್ವ ವ್ಯಕ್ತಿಯು ವಾರ್ಷಿಕ, ಮಾಸಿಕ ಅಥವಾ ತ್ರೈಮಾಸಿಕವಾಗಿ ಕಂತುಗಳಲ್ಲಿ ಹಣ ಪಾವತಿಸುವ ಮೂಲಕ ಇನ್ಸೂರೆನ್ಸ್ ಕಂಪನಿಯಿಂದ ವಿಮಾ ಪಾಲಿಸಿ ಕೊಳ್ಳುವುದು ಅಥವಾ ವಿಮೆಗಾಗಿ ಪರಸ್ಪರ ಒಪ್ಪಂದ ಮಾಡಿಕೊಳ್ಳುವುದನ್ನು ವಿಮೆ ಅಥವಾ ಇನ್ಸೂರೆನ್ಸ್ ಎಂದು ಪರಿಗಣಿಸಲಾಗುತ್ತದೆ.
ಇದಕ್ಕೆ ಪ್ರತಿಯಾಗಿ ಇನ್ಸೂರೆನ್ಸ್ ಕಂಪನಿಯು ಪಾಲಿಸಿದಾರನಿಗೆ ಭವಿಷ್ಯದಲ್ಲಿ ಉಂಟಾಗಬಹುದಾದ ಯಾವುದೋ ನಷ್ಟ ಅಥವಾ ಅಪಾಯದಿಂದ ಸುರಕ್ಷತೆ ನೀಡುತ್ತದೆ.
ವ್ಯಕ್ತಿಗಳು ವೈಯಕ್ತಿಕವಾಗಿ ಮಾತ್ರವಲ್ಲದೆ, ಸಾರ್ವಜನಿಕ ವಲಯದ ಕಂಪನಿಗಳು ಹಾಗೂ ಖಾಸಗಿ ಕಂಪನಿಗಳು ಸಹ ತಮ್ಮ ನೌಕರರ ಸುರಕ್ಷತೆಗಾಗಿ ವಿಮೆ ಕೊಂಡುಕೊಳ್ಳಬಹುದು.
ಒಟ್ಟಾರೆಯಾಗಿ ವಿಮೆ ಎಂಬುದು ಭವಿಷ್ಯದಲ್ಲಿ ಎದುರಾಗಬಹುದಾದ ನಷ್ಟ, ಅನಾರೋಗ್ಯ ಸಮಸ್ಯೆ, ಸಾವು, ಆಸ್ತಿ ಪಾಸ್ತಿಗಳ ಹಾನಿ ಮುಂತಾದ ಸಂದರ್ಭಗಳಲ್ಲಿ ಅಪಾಯ ನಿರ್ವಹಣೆ ಯೋಜನೆಯಾಗಿ ಕೆಲಸ ಮಾಡುತ್ತದೆ.
ನಷ್ಟದ ಸಂದರ್ಭಗಳಲ್ಲಿ ಹಣಕಾಸಿನ ಮೂಲಕ ನೆರವು ನೀಡಿ ಒತ್ತಡ ಕಡಿಮೆ ಕಡಿಮೆ ಮಾಡುವ ಏಕೈಕ ಹಣಕಾಸು ಯೋಜನೆ ವಿಮೆ ಆಗಿದೆ.ಹೊಸ ಕಾರು ಕೊಳ್ಳುವಾಗಲೇ, ಡೀಲರ್ ಬಳಿಯೇ ವಿಮೆ ಕುರಿತು ಮಾಹಿತಿ ಪಡೆದುಕೊಂಡು, ಅಂದೇ ವಿಮೆ ಮಾಡಿಸುವುದು ಹೆಚ್ಚು ಸೂಕ್ತ.
ಕಾರು ಅಪಘಾತ, ಕಳವು, ಬಿಡಿಭಾಗ ದುರಸ್ತಿ ಮತ್ತು ಅಗ್ನಿ ಅನಾಹುತ ಸಹಿತ ವಿವಿಧ ಕಾರಣಗಳಿಂದ ಕಾರಿಗೆ ಹಾನಿಯಾದರೆ ವಿಮೆ ಪ್ರಯೋಜನಕ್ಕೆ ಬರುತ್ತದೆ. ದುರಂತಕ್ಕೀಡಾದ ಕಾರುಗಳಿಗೆ ವಿಮೆ ಇದ್ದರೆ, ಅದನ್ನು ಕ್ಲೇಮ್ ಮಾಡಬಹುದು ಮತ್ತು ಯಾವ ವಿಧದ ವಿಮೆ ಎನ್ನುವುದರ ಬಗ್ಗೆ ಅದು ಅವಲಂಬಿತವಾಗಿರುತ್ತದೆ.
ಕೆಲವೊಮ್ಮೆ ನಮ್ಮದೇ ತಪ್ಪಿನಿಂದ ಅಪಘಾತ ಸಂಭವಿಸುತ್ತವೆ. ಇನ್ನು ಕೆಲ ಬಾರಿ ನಮ್ಮ ಕೈ ಮೀರಿದ ಸಂದರ್ಭಗಳಲ್ಲಿ ಅಪಘಾತಗಳು ಘಟಿಸುತ್ತವೆ. ಹೀಗೆ ಮಾನವ ಘಟಿತ ಅಥವಾ ಪ್ರಕೃತಿ ವಿಕೋಪ ಎರಡೂ ಸಂದರ್ಭಗಳಲ್ಲಿ ಸುರಕ್ಷತೆ ನೀಡಬಲ್ಲ ಕಾರ್ ವಿಮೆ ಕೊಂಡುಕೊಳ್ಳುವುದು ಉತ್ತಮ.
ಪ್ರಕೃತಿ ವಿಕೋಪಗಳು (Natural Disasters) ಅನಿರೀಕ್ಷಿತ ಪ್ರವಾಹ (Flood) , ಚಂಡಮಾರುತ (Storm), ಭಾರೀ ಮಳೆ (Rain), ಭೂಕಂಪ (Earthquake), ಭೂಕುಸಿತದಂತಹ ವಿಪತ್ತುಗಳು ಆಗಾಗ್ಗೆ ಅಪಾರ ನಷ್ಟವನ್ನು ಉಂಟುಮಾಡುತ್ತವೆ.
ಇಂತಹ ಸಂದರ್ಭದಲ್ಲಿ ಜೀವಕ್ಕೆ ಮಾತ್ರವಲ್ಲದೆ ಮನೆ, ವಾಹನ, ಬೆಂಕಿಗೆ ಆಹುತಿಯಾಗುವ ಪ್ರಕರಣಗಳು ನಡೆದಾಗ ವಿಮೆ ಮಾಡಿಸಿದರೆ ನಷ್ಟದ ಹೊರೆಯನ್ನು ಇಳಿಸಲು ನೆರವಾಗುತ್ತವೆ. ಭವಿಷ್ಯದಲ್ಲಿ ನಡೆಯುವ ವಿಚಾರಗಳನ್ನು ಕೆಲವೊಮ್ಮೆ ನಿರೀಕ್ಷಿಸಲು ಸಾಧ್ಯವಿಲ್ಲ. ಭಾರೀ ಮಳೆ, ಬಿರುಗಾಳಿ ಸಂದರ್ಭದಲ್ಲಿ ಮರಗಳು ಅಥವಾ ಯಾವುದೇ ಗೋಡೆ ಮುರಿದು ಬಿದ್ದು ಅಲ್ಲಿ ನಿಂತಿರುವ ವಾಹನ (Vehicles) ಗಳ ಮೇಲೆ ಬಿದ್ದು ಅಪಾರ ಹಾನಿಯಾಗುತ್ತಿರುವುದು ಕಂಡು ಬರುತ್ತಿದೆ.
ಅಂತಹ ಸಂದರ್ಭಗಳಲ್ಲಿ ಕಾರು ವಿಮೆ (Car Insurance) ಯು ಅಂತಹ ಸಮಸ್ಯೆಗಳನ್ನು ಎದುರಿಸಲು ಷರತ್ತು ಅನ್ವಯವಾಗುತ್ತವೆ.ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವಾಗ ಪ್ರಮುಖ ವಿಷಯಗಳನ್ನು ಕಾಳಜಿ ವಹಿಸುವುದು ಉತ್ತಮ.
ಪಾಲಿಸಿಯನ್ನು ತೆಗೆದುಕೊಳ್ಳುವಾಗ ಅದರಲ್ಲಿ ಒಳಗೊಂಡಿರುವ ಎಲ್ಲಾ ವಿಷಯಗಳನ್ನು ಸಂಪೂರ್ಣವಾಗಿ ಪಾಲಿಸಿ ಏಜೆಂಟ್‌ನಿಂದ ಎಲ್ಲಾ ರೀತಿಯ ಹಾನಿಗಳ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ಮೋಟಾರು ವಾಹನ ಕಾಯ್ದೆ ಪ್ರಕಾರ ಎಲ್ಲ ವಾಹನಗಳ ಮಾಲೀಕರು ಥರ್ಡ್ ಪಾರ್ಟಿ ಒಳಗೊಳ್ಳುವಂತಹ ವಿಮೆ ಮಾಡಿಸಬೇಕು.
ಕಾನೂನಿನ ಪ್ರಕಾರ ವಿಮೆ ಕಡ್ಡಾಯ. ಒಂದು ವೇಳೆ ಅಪಘಾತವಾದಾಗ ವ್ಯಕ್ತಿಯ ಸುರಕ್ಷತೆ ಮತ್ತು ಆತನಿಗೆ ಪರಿಹಾರ ಕೊಡುವುದು ವಿಮೆಯಲ್ಲಿ ಮುಖ್ಯ. ಅಲ್ಲದೆ ಇದರಿಂದ ಮೂರನೇ ವ್ಯಕ್ತಿಗೆ ನೈಸರ್ಗಿಕ ರಕ್ಷಣೆಯೂ ಸಿಗುತ್ತದೆ.
ವಿಮೆಯ ಎರಡು ಪಾಲಿಸಿಗಳು: ಒಂದು ಪರಿಹಾರ ಪಾಲಿಸಿ, ಮತ್ತೊಂದು ಪ್ಯಾಕೇಜ್ ಪಾಲಿಸಿ. ಮೊದಲನೆಯ ಪಾಲಿಸಿಯಲ್ಲಿ ವಿಮೆಯೂ ಅಪಘಾತಕ್ಕೆ ಪರಿಹಾರ ನೀಡುವುದು ಥರ್ಡ್ ಪಾರ್ಟಿಗೆ ಮಾತ್ರ ಸಂಬಂಧಿಸಿರುತ್ತದೆ. ಎರಡನೆ ಪ್ರಕಾರದ ಪಾಲಿಸಿ ವಾಹನಕ್ಕಾಗುವ ನಷ್ಟ ಮತ್ತು ಪರಿಹಾರವನ್ನು ಒದಗಿಸುತ್ತದೆ.
ಪಾಲಿಸಿ ಮಾಡಿಸುವಾಗ ಮಾಡಿಕೊಂಡ ಒಪ್ಪಂದ, ನಿಯಮಾವಳಿ ಹಾಗೂ ನಿರ್ಣಯಿಸಿದ ವೌಲ್ಯವನ್ನು ನಿರ್ಧರಿಸಿದಂತೆ ಪರಿಹಾರವೂ ದೊರಕುತ್ತದೆ.
ಅನೇಕ ಬಾರಿ ಸಾಮಾನ್ಯ ಪಾಲಿಸಿಯು ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ನಷ್ಟವನ್ನು ಭರಿಸುವುದಿಲ್ಲ. ಆದ್ದರಿಂದ ಪಾಲಿಸಿಯನ್ನು ತೆಗೆದುಕೊಳ್ಳುವಾಗ ಆಡ್-ಆನ್‌ಗಳ ಬಗ್ಗೆ ಕೇಳಿಕೊಂಡು ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ಆಡ್ ಆನ್‌ಗಳನ್ನು ಪಾಲಿಸಿಗೆ ಸೇರಿಸಿಕೊಳ್ಳುವುದು ಒಳ್ಳೆಯದು.
ಆಡ್-ಆನ್‌ಗಳು ಮಳೆ, ಬಿರುಗಾಳಿಗಳು, ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ನಷ್ಟವನ್ನು ಭರಿಸಬಲ್ಲವು . ಇದರ ಜೊತೆಗೆ ಈ ಆಡ್ ಆನ್ ಎಂಜಿನ್ ದುರಸ್ತಿ/ಬದಲಿ ಆಯ್ಕೆಯನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.
ಆಡ್ ಆನ್ ಕವರ್ ಅನ್ನು ಮಾನ್ಸೂನ್ ಮೊದಲು ಖರೀದಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪಾಲಿಸಿಯನ್ನು ನವೀಕರಿಸುವಾಗ ಅದನ್ನು ತೆಗೆದುಕೊಳ್ಳಬೇಕು. ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಆಡ್ ಆನ್ ಪ್ಲಾನ್ ಹೊಂದಿರುವುದು ಖಂಡಿತವಾಗಿಯೂ ನಿಮ್ಮ ಪಾಲಿಸಿ ಪ್ರೀಮಿಯಂನಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ.
ಆಡ್-ಆನ್ ಪ್ಯಾಕೇಜ್‌ಗಳು ಪಾವತಿಸಿದ ಪ್ರೀಮಿಯಂನಲ್ಲಿ ಕೆಲವು ನೂರರಿಂದ ಸಾವಿರ ರೂಪಾಯಿಗಳ ವ್ಯತ್ಯಾಸವನ್ನು ಮಾಡುತ್ತವೆ, ಆದರೆ ಭವಿಷ್ಯದಲ್ಲಿ ದೊಡ್ಡ ವೆಚ್ಚವನ್ನು ಭರಿಸಬಹುದಾಗಿದೆ. ಮೋಟಾರು ವಿಮೆಯನ್ನು ತೆಗೆದುಕೊಳ್ಳುವಾಗ, ಕಳ್ಳತನ ಅಥವಾ ಇತರ ಭಾಗಗಳು ಹಾನಿಗೊಳಗಾದಾಗ ಹಾಗೂ ಎಲ್ಲೋ ಹಾನಿಯಾದಾಗ ಅದನ್ನು ಸರಿಪಡಿಸುವ ಬಗ್ಗೆ ಚಿಂತಿಸುವ ಜೊತೆಗೆ ಮಳೆ ಅಥವಾ ಪ್ರವಾಹದಂತಹ ನೈಸರ್ಗಿಕ ವಿಪತ್ತುಗಳ ವಿರುದ್ಧವೂ ರಕ್ಷಣೆ ನೀಡುವಂತಹ ವಿಮೆಯನ್ನು ಖರೀದಿಸಿದರೆ ಒಳ್ಳೆಯದು.
ಒಂದು ವೇಳೆ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿದರೆ, ಅದರ ವಿಮೆಯಲ್ಲಿನ ಹೆಸರನ್ನು ಕಾರು ಖರೀದಿಸಿದವರ ಹೆಸರಿಗೆ ಬದಲಿಸಿಕೊಳ್ಳಬೇಕು.
ಈ ಕುರಿತು ಮಾರಾಟಗಾರನು ಲಿಖಿತರೂಪದಲ್ಲಿ ವಿಮಾ ಸಂಸ್ಥೆಗೆ ತಿಳಿಸಿ, ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ನಂತರ ಹೆಸರು ವರ್ಗಾವಣೆಗೆ ನಿಗದಿಪಡಿಸಿದ ಫೀ ತುಂಬಬೇಕು.
ಈ ಕುರಿತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ವಿಪತ್ತುಗಳಿಂದ ನಿಮ್ಮ ವಾಹನಕ್ಕೆ ಉಂಟಾಗುವ ಪ್ರಮುಖ ಹಾನಿಗಳಿಗೆ ವಿಮೆ ಪಾವತಿಸುವ ಮೂಲಕ ನಷ್ಟದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು.