ಹಿಜಾಬ್ ಗಲಾಟೆ : ಬಟ್ಟೆ ಕಳಚಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ ನಟಿ
ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ. 9 ವರ್ಷ ದಾಟಿದ ಹೆಣ್ಣುಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳುವುದು ಇರಾನ್ ನಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.
ಇರಾನ್ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ (Hijab) ಧರಿಸದ ‘ಅಪರಾಧ’ಕ್ಕಾಗಿ ಪೊಲೀಸರು ಇತ್ತೀಚೆಗೆ ಮಹಿಳೆಯೊಬ್ಬರನ್ನು ಬಂಧಿಸಿ, ವ್ಯಾನ್ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಪೊಲೀಸ್ ದೌರ್ಜನ್ಯದಿಂದ ಕುರ್ದಿಸ್ತಾನ್ ಪ್ರಾಂತ್ಯದ 22 ವರ್ಷದ ಮಹ್ಸಾ ಅಮಿನಿ ಎಂಬ ಮಹಿಳೆ ಮೃತಪಟ್ಟ ಘಟನೆಯ ಬಳಿಕ ನೈತಿಕ ಪೊಲೀಸ್ಗಿರಿ ವಿರುದ್ಧ ರೊಚ್ಚಿಗೆದ್ದಿರುವ ಇರಾನ್ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು ಹಿಜಾಬ್ಗಳನ್ನು ಕಿತ್ತೊಗೆದು ಬಿಸಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ.
ಎಲ್ಲಾ ಸಮಯದಲ್ಲೂ ಹಿಜಾಬ್ ಧರಿಸುವುದು ಸೇರಿದಂತೆ ಮಹಿಳೆಯರ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಇರಾನ್ನ ಮೂಲಭೂತವಾದಿ ಅಧ್ಯಕ್ಷ ಇಬ್ರಾಹಿಂ ರೈಸಿ ಆದೇಶಿಸಿದ ಕೆಲವೇ ವಾರಗಳಲ್ಲಿ ಪೊಲೀಸರ ಹಲ್ಲೆಯಿಂದ ಯುವತಿ ಮೃತಪಟ್ಟಿದ್ದಾರೆ.
ಹಿಜಾಬ್ ಧರಿಸದೆ ರಸ್ತೆಗೆ ಬರುವ ಮಹಿಳೆಯರಿಗೆ ಕಠಿಣ ಶಿಕ್ಷೆಗಳನ್ನು ಅಲ್ಲಿನ ಸರ್ಕಾರ ಘೋಷಿಸಿದೆ. ಪ್ರಸ್ತುತ ಇರಾನ್ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಗಲಭೆಕೋರರ ಮೇಲೆ ಅಶ್ರುವಾಯು ಪ್ರಯೋಗಿಸುವ ಜೊತೆಗೆ ಕೆಲವೆಡೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿರುತ್ತಿರುವ ಘಟನೆಯೂ ನಡೆಯುತ್ತಿದೆ.
ಪೋಲಿಸ್ ದೌರ್ಜನ್ಯದ ವಿರುದ್ಧ ಅಲ್ಲಿನ ಮಕ್ಕಳು ಮತ್ತು ಮಹಿಳೆಯರು ದಿನಕ್ಕೊಂದು ರೀತಿ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಇರಾನ್ ನಟಿಯೊಬ್ಬರು ತಾನು ಧರಿಸಿದ್ದ ಬಟ್ಟೆಯನ್ನು ಕಳಚಿ ಆಕ್ರೋಶ ಹೊರಹಾಕಿದ್ದಾರೆ. ನಟಿ ಎಲ್‌ನಾಜ್ ನೈರೋಜಿ ತಾವು ಧರಿಸಿದ್ದ ಹಿಜಾಬ್, ಬುರ್ಕಾ ಮತ್ತು ತಮ್ಮ ಬಟ್ಟೆಗಳನ್ನು ತೆಗೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಈ ವೀಡಿಯೋ ವೈರಲ್ ಆಗಿದೆ.
ಜೊತೆಗೆ ಎಲ್ಲಾ ಮಹಿಳೆಯರಿಗೂ ತಮಗೆ ಇಷ್ಟ ಬಂದಂತೆ ಜೀವಿಸುವ ವಾಕ್ ಸ್ವಾತಂತ್ರ್ಯವಿದ್ದು, ತಮಗೆ ಬೇಕಾದಂತೆ ಬಟ್ಟೆ ತೊಡುವ ಹಕ್ಕಿದೆ ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂಬ ಸಂದೇಶ ರವಾನಿಸಿರುವ ಜೊತೆಗೆ ಹಾಗೇ ತಾನು ನಗ್ನತೆಯನ್ನ ಪ್ರಚಾರ ಮಾಡುವ ಸಲುವಾಗಿ ಬಟ್ಟೆ ಕಳಚಿ ಪ್ರತಿಭಟನೆ ನಡೆಸುತ್ತಿಲ್ಲ ಬದಲಾಗಿ, ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಚಾರ ಮಾಡುತ್ತಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಸರ್ಕಾರ ಎಷ್ಟರಮಟ್ಟಿಗೆ ನಿರ್ಭಂದ ಹೇರಿದೆ ಎನ್ನಲು ನಿದರ್ಶನ ಎಂಬಂತೆ , ನೆಟ್‌ಬ್ಲಾಕ್‌ಗಳು ನೀಡಿದ ಮಾಹಿತಿ ಅನ್ವಯ ಇಲ್ಲಿನ ನಾಗರಿಕರಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸಿರುವುದಲ್ಲದೆ, ವಾಟ್ಸಾಪ್ ಬಳಕೆದಾರರು ಸಂದೇಶವನ್ನು ಟೈಪ್ ಮಾಡುವ ಮೂಲಕ ಮಾತ್ರ ಸಂದೇಶ ರವಾನಿಸಬಹುದಾಗಿದ್ದು , ಫೋಟೋ ಕೂಡ ಕಳುಹಿಸಲು ಸಾಧ್ಯವಿಲ್ಲ ಜೊತೆಗೆ ಕುರ್ದಿಸ್ತಾನ್ ಪ್ರಾಂತ್ಯದಲ್ಲಿ ಇಂಟರ್ನೆಟ್ ಪ್ರವೇಶವನ್ನು ಕಡಿತಗೊಳಿಸಲಾಗಿದೆ.