Video viral : ಬಾನಂಚನ್ನು ಮುಟ್ಟಲು ಹಾರಿದ ನವಿಲು | ಅಪರೂಪದಲ್ಲಿ ಅಪರೂಪ ಈ ಮಯೂರದ ವೀಡಿಯೋ ವೈರಲ್
ನವಿಲೇ …ಪಂಚರಂಗಿ.. ನವಿಲೇ…ಹಚ್ಚ ಹಸಿರಿನ ವನಸಿರಿಯ ನಡುವೆ ಗರಿ ಬಿಚ್ಚಿ ನಲಿಯುವ ಸೌಂದರ್ಯ ಕಣ್ತುಂಬಿಕೊಳ್ಳುವುದೇ ಸೊಗಸು.
ಚೈತ್ರ ಮಾಸದಲ್ಲಿ ಚಿಗುರೆಲೆಗಳ ನಡುವೆ ವರ್ಷ ವೃಷ್ಟಿಯಾಗುವ ಮುನ್ಸೂಚನೆ ದೊರೆತಂತೆ ಸಂತೋಷದಿಂದ ನಲಿದಾಡುವ ಮಯೂರದ ವರ್ಣನೆ ಮಾಡಿದಷ್ಟೂ ಮುಗಿಯದು. ಭಾರತವನ್ನು ಹೊರತುಪಡಿಸಿದರೆ ಆಗ್ನೇಯ ಏಷ್ಯಾ ಮತ್ತು ಆಫ್ರಿಕಾ ಖಂಡದ ಕಾಂಗೋ ಜಲಾನಯನ ಪ್ರದೇಶದಲ್ಲಿ ಕಂಡುಬರುವ ಸುಬ್ರಮಣ್ಯನ ವಾಹನವಾಗಿರುವ ಮಯೂರ ಅದ್ಭುತ ಸೌಂದರ್ಯದ ಗಣಿ.
ಉಳಿದ ಪಕ್ಷಿಗಳಂತೆ ಎಲ್ಲ ಸಮಯದಲ್ಲೂ ಹಾರಡದೆ ಇರುವ ವೈಶಿಷ್ಟ್ಯ ಹೊಂದಿದ್ದು, ಇದರ ಜೀವನ ಕೂಡ ಕುತೂಹಲಕಾರಿಯಾಗಿದೆ. ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ಮಳೆಯಾಗುವ ಸಂದರ್ಭದಲ್ಲೂ ನಲಿದಾಡುವ ನವಿಲು ತನ್ನ ಜೊತೆಗಾರನ ಆಯ್ಕೆ ಮಾಡುವ ಪ್ರಕ್ರಿಯೆ ಕೂಡ ವಿಭಿನ್ನವೆಂದರೆ ತಪ್ಪಾಗದು. ಹಲವಾರು ವೈಶಿಷ್ಟ್ಯ ವಿಶೇಷಗಳು ಪ್ರಕೃತಿಯಲ್ಲಿ ನಡೆದು, ಅಚ್ಚರಿ ಮೂಡಿಸುವುದು ಸಾಮಾನ್ಯ.
ಇದೀಗ ನವಿಲಿನ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಎರಡು ನವಿಲು ನಡೆದುಕೊಂಡು ಹೋಗುತ್ತಿರುವ ದೃಶ್ಯವಲ್ಲದೆ, ಅದರಲ್ಲಿ ಒಂದು ನವಿಲು ಇದ್ದಕ್ಕಿದ್ದಂತೆ ಬಾನೆತ್ತರಕ್ಕೆ ಹಾರುವ ದೃಶ್ಯ ನೋಡುಗರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತಿವೆ. ನವಿಲಿನ ನರ್ತನ, ಸೌಂದರ್ಯ ನೋಡುವುದೇ ಸೊಬಗು. ಅದರಲ್ಲೂ ಮುಗಿಲೆತ್ತರಕ್ಕೆ ಹಾರುವ ನವಿಲಿನ ದೃಶ್ಯವನ್ನು ಬಣ್ಣಿಸುವುದು ಸಾಧ್ಯವೇ ಇಲ್ಲ.
ನವಿಲಿನ ಈ ಅದ್ಭುತ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ @CosmicGaiaX ಎಂಬ ಖಾತೆಯಲ್ಲಿ ಶೇರ್ ಮಾಡಲಾಗಿದ್ದು,’ ಮೆಜೆಸ್ಟಿಕ್ ಫ್ಲೈಟ್’ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಕೇವಲ 10 ಸೆಕೆಂಡ್‌ಗಳ ವೀಡಿಯೋವನ್ನು ಇದುವರೆಗೆ 2.5 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿರುವ ಈ ವಿಡಿಯೋ ತುಣುಕುಗಳು ಸಾಕಷ್ಟು ಟ್ರೆಂಡ್ ಆಗುತ್ತಿದೆ.