ಏನಿದು ಅಸಹ್ಯ | ತಿಂಡಿ ಕರಿಯಲು ಇಟ್ಟ ಎಣ್ಣೆಯಲ್ಲಿ ಇಲಿಯ ಸ್ವಿಮ್ಮಿಂಗ್ | ಪಾದದಲ್ಲಿ ಹಿಟ್ಟು ನಾದುತ್ತಿರುವ ಯುವಕರು
ಜನರಿಗೆ ಮನೆಯಲ್ಲಿಯೇ ಆರೋಗ್ಯಕರ ಆಹಾರ ಸೇವಿಸಲು ಸಾಧ್ಯವಿದ್ದರೂ ಕೂಡ ರೋಡ್ ಸೈಡ್ ಸಿಗುವ ಸಮೋಸ, ಗೊಳ್ಗಪ್ಪ, ಮಸಾಲ್ ಪುರಿ, ಪಾನಿಪುರಿ ಹೀಗೆ ಸ್ಟ್ರೀಟ್ ಚಾಟ್ನ ಮೇಲೆ ಎಲ್ಲಿಲ್ಲದ ವ್ಯಾಮೋಹ. ಅವರು ಬಳಸುವ ನೀರು, ಆಹಾರ ಪದಾರ್ಥ ಗುಣಮಟ್ಟದ ಬಗ್ಗೆ ಚೂರು ತಲೆಕೆಡಿಸಿಕೊಳ್ಳದೆ ಹೊಟ್ಟೆ ಪೂಜೆ ಮಾಡಿಕೊಳ್ಳುವುದು ಸಾಮಾನ್ಯ. ಅಕಸ್ಮಾತ್ ತಿಂದ ಕೆಲವೇ ಗಂಟೆಗಳಲ್ಲಿ ಆರೋಗ್ಯದಲ್ಲಿ ಏರುಪೇರಾದರೆ ತಮನ್ನೇ ಹಳಿದುಕೊಳ್ಳುವ ಪರಿಪಾಠ ಹಲವರಿಗಿದೆ.
ಕೆಲವೊಂದು ಸಣ್ಣಪುಟ್ಟ ಅಂಗಡಿಗಳಿಗೆ ಪೂರೈಕೆಯಾಗುವ ಖಾದ್ಯಗಳನ್ನು ಕೊಳಕಾದ, ಜೊತೆಗೆ ಕಾಲಿನಲ್ಲಿ ತುಳಿಯುವ, ಕಳಪೆ ಗುಣಮಟ್ಟ ಬಳಕೆ ಮಾಡಿ ತಯಾರಿಸುವ ವಿಡಿಯೋಗಳು ಸಾಕಷ್ಠಿವೆ. ಅಂತಹ ವಿಡಿಯೋ ತುಣುಕುಗಳು ಕಂಡಾಗ ಮತ್ತೊಮ್ಮೆ ರೋಡ್ ಸೈಡ್ ನಲ್ಲಿ ಏನು ಸೇವಿಸುವುದಿಲ್ಲ ಎಂದು ಮನದಲ್ಲೇ ಶಪಥ ಮಾಡಿಕೊಂಡು , ಮರುದಿನವೇ ರೋಡ್ ಸೈಡ್ ಪಾನಿಪುರಿ ತಿನ್ನುವ ಅಭ್ಯಾಸವು ಹೆಚ್ಚಿನವರಿಗೆ ರೂಢಿಯಾಗಿದೆ. ಸಕ್ಕರೆಯ ಕಂಡಾಗ ಇರುವೆಗಳು ಮುತ್ತಿಕ್ಕುವಂತೆ ಮನಸ್ಸು ರೋಡ್ ಸೈಡ್ ನಲ್ಲಿ ಸಿಗುವ ಚ್ಯಾಟ್ ಮೇಲೆ ಒಲವು ತೋರುವುದು ಸಹಜ. ಹಾಗೆಂದು ಎಲ್ಲ ಅಂಗಡಿಗಳು ಅಥವಾ ಆಹಾರ ತಯಾರಿಕೆಯವರು ಶುಚಿತ್ವದ ಕಡೆ ನಿರ್ಲಕ್ಷ ಧೋರಣೆ ಅನುಸರಿಸುತ್ತಾರೆ ಎಂದು ಹೇಳಲಾಗದು.
ಕಾಶ್ಮೀರದ ಬಡಗಾಮ್ ಜಿಲ್ಲೆಯ ಚಹಾ ಅಂಗಡಿಯೊಂದರಲ್ಲಿ ಇಬ್ಬರು ಯುವಕರು ಹಿಟ್ಟನ್ನು ಪಾದಗಳಿಂದ ತುಳಿದು ಹದ ಮಾಡುತ್ತಿರುವ ದೃಶ್ಯ , ಅಷ್ಟೆ ಅಲ್ಲದೆ, ದೊಡ್ಡ ಬಾಣಲೆಯಲ್ಲಿರುವ ಎಣ್ಣೆಯಲ್ಲಿ ಬಿದ್ದ ಇಲಿ ಹೊರಬರಲು ಆಗದೆ ಬಿದ್ದು ಹೊರಳಾಡುತ್ತಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡಿ ನೋಡುಗರು ಅಸಹ್ಯ ಪಟ್ಟುಕೊಂಡು ಹೊರಗೆ ಆಹಾರ ಸೇವಿಸುವುದಕ್ಕೆ ಗುಡ್ ಬೈ ಹೇಳಲು ಪ್ರೇರೇಪಿಸುವ ರೀತಿಯ ದೃಶ್ಯ ವೈರಲ್ ಆಗಿದೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಚಹಾ ಅಂಗಡಿಯ ಮಾಲೀಕನನ್ನು ಪೊಲೀಸರು ಬಂಧಿಸಿ ಅಂಗಡಿಯನ್ನು ಸೀಲ್ ಮಾಡಿದ್ದಾರೆ. ಆರೋಪಿಯನ್ನು ಬಡಗಾಮ್ನ ಓಂಪುರಾದ ಇಮ್ರಾನ್ ಹೋಟೆಲ್ನ ಇಮ್ರಾನ್ ಹುಸೇನ್ ಹಲ್ವಾಯಿ ಎಂದು ಗುರುತಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳಕು ಪ್ರದೇಶದಲ್ಲಿ ಆಹಾರ ಪದಾರ್ಥ ತಯಾರಿಸುತ್ತಿರುವುದಲ್ಲದೆ , ಕರಿದ ಎಣ್ಣೆಯಲ್ಲಿ ಇಲಿ ಇದ್ದರೂ ಪರಿಗಣಿಸದೆ ನಿರ್ಲಕ್ಷ್ಯ ತೋರಿರುವುದನ್ನು ಗಮನಿಸಿ, ವ್ಯಕ್ತಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಜನತೆಗೆ ಆಹಾರ ಸೇವನೆ ಮಾಡುವಾಗ ಅದರ ಗುಣಮಟ್ಟ, ಕಳಪೆ ಸಾಮಗ್ರಿ ಬಳಸಿರುವುದರಿಂದ ಆರೋಗ್ಯಕ್ಕೆ ಕುತ್ತು ಬಂದು ಅನಾಹುತ ಸಂಭವಿಸಿದರೂ ಅಚ್ಚರಿಯಿಲ್ಲ. ಅಲ್ಲಿನ ಸ್ಥಳೀಯರು ಪೊಲೀಸರ ನಡೆಯನ್ನು ಮೆಚ್ಚಿಕೊಡಿದ್ದಾರೆ.
ಒಂದು ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದು, ನೋಡಿದವರಲ್ಲಿ ಕನಿಷ್ಠ ಶೇ.10 ರಷ್ಟು ಮಂದಿಯಾದರೂ ರೋಡ್ ಬದಿ ಆಹಾರ ಸೇವಿಸುವಾಗ ಮುಂಜಾಗ್ರತೆ ವಹಿಸಿದರೆ ರೋಗಕ್ಕೆ ಆಹ್ವಾನ ನೀಡುವುದು ತಪ್ಪುತ್ತದೆ. ರಸ್ತೆಬದಿಯ ತಿಂಡಿಗಳ ರುಚಿಗೆ ಮಾರುಹೋಗುವವರು ಒಮ್ಮೆ ಆರೋಗ್ಯದ ಬಗ್ಗೆ ಗಮನ ಹರಿಸಿ ಸೇವನೆ ಮಾಡುವುದು ಒಳ್ಳೆಯದು.