‘ತಾಮ್ರ’ ದ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಸಿಗಲಿದೆ ಇಷ್ಟೆಲ್ಲಾ ಪ್ರಯೋಜನ !!!
ದಿನನಿತ್ಯದ ದಿನಚರಿಯ ಜೊತೆಗೆ ಆರೋಗ್ಯದ ಕಾಳಜಿ ಅತ್ಯವಶ್ಯಕವಾಗಿದ್ದು, ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಪೂರ್ವಜರ ಕಾಲದಿಂದಲೂ ತಾಮ್ರದ ಮಡಿಕೆಯಲ್ಲಿ ಕೂಡಿಟ್ಟ ನೀರಿಗೆ ಅಪಾರ ಮಹತ್ವವಿದ್ದು, ಇತ್ತೀಚಿನ ದಿನಗಳಲ್ಲಿ ಈ ಪಾತ್ರೆಗಳನ್ನು ಕಾಣುವುದು ಕೂಡ ಮರೀಚಿಕೆ ಯಾಗಿದೆ.
ತಾಮ್ರವು ದೇಹಕ್ಕೆ ಅಲ್ಪಪ್ರಮಾಣದಲ್ಲಿ ಅಗತ್ಯವಾದ ಖನಿಜಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೇ ಇದು ಕೆಂಪು ರಕ್ತ ಕಣಗಳು ಮತ್ತು ಕೊಲ್ಯಾಜೆನ್ಗಳನ್ನು ನಿರ್ಮಿಸಲು ಅಗತ್ಯವಾಗಿವೆ. ಜೊತೆಗೆ ಆಹಾರದಿಂದ ದೇಹಕ್ಕೆ ಅಗತ್ಯವಿರುವ ಶಕ್ತಿಯ ಉತ್ಪಾದನೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
ನಮ್ಮ ದೇಹದಲ್ಲಿ ತಾಮ್ರವು ನೈಸರ್ಗಿಕವಾಗಿ ಉತ್ಪತ್ತಿಯಾಗದಿರುವುದರಿಂದ ನಮಗೆ ಆಹಾರ ಅಥವಾ ನೀರಿನ ಮೂಲಕವೇ ತಾಮ್ರದ ಪೂರೈಕೆಯಾಗೇಕು. ತಾಮ್ರದ ಅಂಶವಿರುವ ಆಹಾರದ ಸೇವನೆಗಿಂತಲೂ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಉತ್ತಮ ಮಾರ್ಗವಾಗಿದೆ.
ತಾಮ್ರದೊಂದಿಗೆ ನೀರು ಸೇರಿಕೊಳ್ಳುವ ಕಾರಣದಿಂದಾಗಿ ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ತಾಮ್ರವು ಅತಿಸೂಕ್ಷ್ಮಜೀವಿ ನಿರೋಧಕ ಗುಣವನ್ನು ಹೊಂದಿರುವುದರಿಂದ, ಇದು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ ಮತ್ತು ಸೋಂಕಿನ ವಿರುದ್ಧ ಪ್ರಬಲವಾಗಿ ಹೋರಾಡಲು ನೆರವಾಗುತ್ತದೆ.
ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ ರಕ್ತದೊತ್ತಡವನ್ನು ನಿಯಂತ್ರಿಸಲು ಹಾಗೂ ಹೃದಯದ ಬಡಿತವನ್ನು ಕ್ರಮಬದ್ಧಗೊಳಿಸಲು ತಾಮ್ರ ಉತ್ತಮವಾಗಿದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಅಧಿಕ ರಕ್ತದೊತ್ತಡವನ್ನು ತಗ್ಗಿಸಲೂ ಕೂಡ ನೆರವಾಗುತ್ತದೆ.
ಕೆಲವು ಅಧ್ಯಯನದ ವರದಿಯ ಪ್ರಕಾರ ತಾಮ್ರದ ಪಾತ್ರೆಗಳಲ್ಲಿ ಸುಮಾರು ಹದಿನಾರು ಗಂಟೆಗಳ ಕಾಲ ಶೇಖರಿಸಿಟ್ಟ ನೀರಿನಲ್ಲಿ ಸಾಲ್ಮೋನೆಲ್ಲಾ ಮತ್ತು ಈ ಕೊಲೈಗಳಂತಹ ಮಾರಕ ಬ್ಯಾಕ್ಟೀರಿಯಾಗಳು ಇಲ್ಲವಾಗುತ್ತವೆ.
ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ 8 ಗಂಟೆಗಳ ಬಳಿಕ ಕುಡಿಯುವುದರಿಂದ ವಾತ, ಕಫ, ಪಿತ್ತ ನಿವಾರಣೆಯಾಗುತ್ತದೆ. ಸೋಂಕು ನಿವಾರಕವಾಗಿ ಕೆಲಸ ಮಾಡುತ್ತದೆ. ಅತಿಸಾರ, ಭೇದಿ, ಕಾಮಾಲೆ ವಿರುದ್ಧವೂ ಹೋರಾಡುತ್ತದೆ.
ತಾಮ್ರದಲ್ಲಿರುವ ಉರಿಯೂತ ನಿವಾರಕ ಗುಣ ಉರಿಯೂತಕ್ಕೆ ಒಳಗಾದ ಸಂಧುಗಳಿಗೆ ಮತ್ತು ಸಂಧಿವಾತ ಕಡಿಮೆಯಾಗಿಸಲು ನೆರವಾಗುತ್ತದೆ. ತಾಮ್ರದಲ್ಲಿ ಇರಿಸಿದ ನೀರನ್ನು ಕುಡಿಯುವುದರಿಂದ ಯಕೃತ್ತು ಮತ್ತು ಮೂತ್ರಪಿಂಡವನ್ನು ಆರೋಗ್ಯಕರವಾಗಿರಿಸುವುದರ ಜೊತೆಗೆ ದೇಹದ ಆಂತರಿಕ ಶುದ್ಧೀಕರಣವೂ ಆಗುತ್ತದೆ. ಇದಲ್ಲದೆ, ದೇಹದಲ್ಲಿ ಸಂಭವಿಸುವ ಯಾವುದೇ ರೀತಿಯ ಸೋಂಕನ್ನು ತೆಗೆದು ಹಾಕುವಲ್ಲಿ ಸಹ ಇದು ಪರಿಣಾಮಕಾರಿಯಾಗಿದೆ.
ತಜ್ಞರ ಪ್ರಕಾರ ಥೈರಾಯ್ಡ್ ಕಂಡುಬರುವ ಅನೇಕರಲ್ಲಿ ತಾಮ್ರದ ಅಭಾವ ಕಂಡುಬರುತ್ತದೆ. ಹಾಗಾಗಿ ತಾಮ್ರದ ಬಳಕೆಯು ಇದರ ಸೂಕ್ತ ಕಾರ್ಯಕ್ಕೆ ಸಹಕಾರಿ. ಆದರೆ ಅತಿಯಾದ ಬಳಕೆಯೂ ಇಲ್ಲಿ ಮುಳುವಾಗಬಹುದು. ಹಾಗಾಗಿ ಸೂಕ್ತ ಪ್ರಮಾಣದ ಬಳಕೆ ಉತ್ತಮ. ರಕ್ತಹೀನತೆಯ ಸಮಸ್ಯೆಯಲ್ಲಿ, ಈ ಪಾತ್ರೆಯಲ್ಲಿ ಇಟ್ಟಿರುವ ಕುಡಿಯುವ ನೀರು ಪ್ರಯೋಜನಕಾರಿಯಾಗಿದೆ. ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುವುದರಿಂದ ರಕ್ತಹೀನತೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಮೂಳೆಗಳ ಬಲವರ್ಧನೆಗೆ ಕೂಡಾ ಸಹಕಾರಿ. ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಚರ್ಮದ ಗುಳ್ಳೆಗಳನ್ನು ಮತ್ತು ಇತರ ಚರ್ಮದ ಕಾಯಿಲೆಗಳನ್ನು ತಡೆಯಬಹುದು ಮತ್ತು ಚರ್ಮವು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡಲು ನೆರವಾಗುತ್ತದೆ.
ತಾಮ್ರದ ಪಾತ್ರೆಯಲ್ಲಿ ಸಂಗ್ರಹವಾಗಿರುವ ನೀರಿನ ಗರಿಷ್ಠ ಲಾಭವನ್ನು ಪಡೆಯಲು , ನೀರನ್ನು ತಾಮ್ರದ ಪಾತ್ರೆಯಲ್ಲಿ ಕನಿಷ್ಠ ಎಂಟು ಗಂಟೆಗಳ ಕಾಲ ಸಂಗ್ರಹಿಸಬೇಕು. ರಾತ್ರಿಯಲ್ಲಿ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ನಂತರ ಮುಂಜಾನೆ ಕುಡಿಯಬಹುದು. ತಾಮ್ರದ ಪಾತ್ರೆಯಲ್ಲಿ 12 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹವಾಗಿರುವ ನೀರನ್ನು ಕುಡಿಯುವುದು ಒಳ್ಳೆಯದಲ್ಲ.
ನೀರನ್ನು ಹೊರತುಪಡಿಸಿ ಯಾವುದೇ ದ್ರವವನ್ನು ಸಂಗ್ರಹಿಸಬಾರದು.
ನಾವು ಸೇವಿಸುವ ಪ್ರತಿ ಆಹಾರ, ದ್ರವ ಪದಾರ್ಥಗಳ ಬಗ್ಗೆ ತಿಳಿದುಕೊಂಡು, ಅದರ ಬಳಕೆ ಮಾಡುವುದು ಅವಶ್ಯಕವಾಗಿದೆ. ನೀರನ್ನು ಕುಡಿಯುವುದರಿಂದ ಅನೇಕ ರೋಗ ರುಜಿನಗಳಿಂದ ಪರಿಹಾರ ಪಡೆಯಬಹುದು.