ಗ್ರಾಮೀಣ ಭಾಗದಲ್ಲಿ ಅಡಿಕೆ ಹಾಗೂ ಕಾಡುತ್ಪತ್ತಿ ಖರೀದಿ ಮಾಡಿದರೆ ಲೈಸನ್ಸ್ ರದ್ದು – ದಿನೇಶ್ ಮೆದು
ಪುತ್ತೂರು: ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಅಡಿಕೆ ಹಾಗೂ ಕಾಡುತ್ಪತ್ತಿಗಳ ಖರೀದಿಗೆ ವ್ಯವಸ್ಥೆ ಮಾಡಲಾದ ಬೆನ್ನಲ್ಲೇ ಗ್ರಾಮೀಣ ಭಾಗದ ಕೆಲ ವ್ಯಾಪಾರಿಗಳು ಅಡಿಕೆ ಹಾಗೂ ಕಾಡುತ್ಪತ್ತಿ ಖರೀದಿ ಮಾಡುತ್ತಿರುವುದು ಎಪಿಎಂಸಿ ಗಮನಕ್ಕೆ ಬಂದಿದ್ದು, ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಅವರ ವ್ಯಾಪಾರ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ.
ಏ.20 ರಿಂದ ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ರೈತವರ್ಗದ ಆರ್ಥಿಕ ಅನುಕೂಲದ ದೃಷ್ಟಿಯಿಂದ ಖಾಸಗಿ ವರ್ತಕರಿಗೆ ಎಪಿಎಂಸಿಯಲ್ಲಿ ಅಡಿಕೆ ಖರೀದಿ ಮಾಡಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅನುಮತಿ ನೀಡಿತ್ತು. ಇದಕ್ಕಾಗಿ ಎಪಿಎಂಸಿ ವತಿಯಿಂದ ಪಿಕಪ್ ವಾಹನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ದ್ವಿಚಕ್ರದ ವಾಹನಗಳಲ್ಲಿಯೂ ಅಡಿಕೆ ತರಲು ಅವಕಾಶ ನೀಡಿತ್ತು.
ಆದರೆ ಇದರ ದುರ್ಲಾಭ ಪಡೆದುಕೊಂಡ ಗ್ರಾಮೀಣ ಭಾಗದ ಕೆಲವು ಅಡಿಕೆ ವ್ಯಾಪಾರಿಗಳು ಕಡಿಮೆ ದರದಲ್ಲಿ ರೈತರನ್ನು ವಂಚಿಸಿ ಅಡಿಕೆ ಖರೀದಿ ಮಾಡುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ತರಕಾರಿ ಮಾರಾಟ ವಾಹನದಲ್ಲಿ ತರಕಾರಿ ಇಳಿಸಿ ಬಳಿಕ ವಾಪಾಸಾಗುವಾಗ ಲೋಡ್ ಗಟ್ಟಲೆ ಅಡಿಕೆಯನ್ನು ತರಕಾರಿ ವಾಹನದಲ್ಲಿ ಸಾಗಾಟ ಮಾಡುವ ಮತ್ತು ಕೆಲವು ಕಡೆ ಅಂಗಡಿಗಳ ಮುಂದೆ ಗೇರುಬೀಜ ಖರೀದಿ ಎಂದು ಬಿಂಬಿಸಿ, ಒಳಗಿಂದೊಳಗೆ ಅಡಿಕೆ ವ್ಯಾಪಾರ ನಡೆಸುವ ಕುರಿತು ದೂರುಗಳು ಬಂದಿವೆ.
ಈ ನಿಟ್ಟಿನಲ್ಲಿ ಏ.22ರಿಂದ ಎಪಿಎಂಸಿ ವತಿಯಿಂದ ಗ್ರಾಮೀಣ ಭಾಗದಲ್ಲಿ ತಪಾಸಣಾ ಕಾರ್ಯ ನಡೆಯಲಿದೆ. ಅಡಿಕೆ ಖರೀದಿ ಕಂಡು ಬಂದಲ್ಲಿ ಮತ್ತು ಲಾಕ್ಡೌನ್ ಉಲ್ಲಂಘನೆ ಮಾಡುವ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರ ವ್ಯಾಪಾರದ ಪವಾನಿಗೆ ರದ್ದು ಪಡಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ.