ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆ ಭುಗಿಲೆದ್ದ ಆಕ್ರೋಶ !!| ಗುಂಪು ಘರ್ಷಣೆ ವೇಳೆ 12 ಮಂದಿಗೆ ಗಾಯ, ಸಾವಿರಾರು ಮಂದಿಯ ಮೇಲೆ ಎಫ್ಐಆರ್ ದಾಖಲು
ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಕಾನ್ಪುರದಲ್ಲಿ ನಿನ್ನೆ ಬಹುದೊಡ್ಡ ಘರ್ಷಣೆ ನಡೆದಿದೆ. ಈ ಘರ್ಷಣೆಗೆ ಸಂಬಂಧಿಸಿದಂತೆ ಸಾವಿರಾರು ಮಂದಿ ಮೇಲೆ ಎಫ್ಐಆರ್ ದಾಖಲಾಗಿದ್ದು, 18 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ.
ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿ ಶುಕ್ರವಾರ ಮಧ್ಯಾಹ್ನ ಮುಸ್ಲಿಂ ಸಮುದಾಯದ ಗುಂಪೊಂದು ಕಾನ್ಪುರದ ಪ್ರಸಿದ್ಧ ಮಾರುಕಟ್ಟೆಯೊಂದರ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದೆ. ಈ ವೇಳೆ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲು ನಿರಾಕರಿಸಿದ ಹಿನ್ನೆಲೆ ಎರಡು ಗುಂಪುಗಳ ನಡುವೆ ಹಿಂಸಾಚಾರ ಭುಗಿಲೆದ್ದಿದೆ.
ಬಂದ್‍ಗೆ ಬೆಂಬಲ ನೀಡಲು ನಿರಾಕರಿಸಿದ್ದಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯುಂಟಾಗಿದ್ದು, ಕಲ್ಲು ತೂರಾಟ ನಡೆದಿದೆ. ಕಚ್ಚಾ ಬಾಂಬ್‍ಗಳನ್ನು ಎಸೆಯಲಾಗಿದೆ. ಈ ವೇಳೆ ಕಿಡಿಗೇಡಿಗಳ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಚ್ ನಡೆಸಿದ್ದು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಕಾನ್ಪುರ ಪೊಲೀಸ್ ಕಮಿಷನರ್ ವಿಜಯ್ ಸಿಂಗ್ ಮೀನಾ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾವಿರಾರು ಮಂದಿಯ ಮೇಲೆ ಎಫ್ಐಆರ್ ದಾಖಲಾಗಿದ್ದು, ಈ ಪೈಕಿ 40 ಮಂದಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಇನ್ನೂ 1,000 ಮಂದಿಯ ಗುರುತನ್ನು ಪತ್ತೆಹಚ್ಚಬೇಕಾಗಿದೆ.