ಮುದ್ದೆ ತಿನ್ನುವ ಸ್ಪರ್ಧೆ: ಬರೋಬ್ಬರಿ 12 ಬಡಿದು ಬಾಯಿಗೆ ಹಾಕ್ಕೊಂಡ ತಮ್ಮ, 10 ಮುದ್ದೆ ನುಂಗಿ ಗೆದ್ದ ಅಕ್ಕ!

Share the Article

ಬೊಮ್ಮನಹಳ್ಳಿ: ನಾಟಿಕೋಳಿ ಸಾರು, ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಅಕ್ಕ ಬರೋಬ್ಬರಿ 10 ಮುದ್ದೆ ಮುರಿದರೆ, ತಮ್ಮ 12 ಮುದ್ದೆ ಬಡಿದು ಬಾಯಿಗೆ ಹಾಕ್ಕೊಂಡು ಪ್ರಥಮ ಸ್ಥಾನ ಗಳಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಎಚ್‌ಎಸ್‌ಆ‌ರ್ ಬಡಾವಣೆಯಲ್ಲಿ ನಾಟಿ ಕೋಳಿ ಸಾರು, ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ನಡೆಯಿತು.

ವೈಟ್‌ಫೀಲ್ಡ್‌ನ ಅಜಯ ಕುಮಾರ್ ಎಂಬವರು ಅಸಾಧ್ಯ ಅನ್ನಿಸುವ12 ಮುದ್ದೆ ಉಣ್ಣುವ ಮೂಲಕ ಪ್ರಥಮ ಪಡೆದು ಟಗರನ್ನು ಬಹುಮಾನವಾಗಿ ಪಡೆದರು. ಈತನ ಅಕ್ಕ ಸೌಮ್ಯಾ ಮಹಿಳೆಯರ ವಿಭಾಗದಲ್ಲಿ 10 ಮುದ್ದೆ ತಿಂದು ಸೀರೆ, ಟಿ.ವಿ ಮತ್ತು ₹5000 ನಗದು ಬಹುಮಾನವನ್ನು ಬ್ಯಾಗಿಗೆ ಇಳಿಸಿಕೊಂಡಿದ್ದಾಳೆ.

ಇನ್ನು, ಅತ್ತಿಬೆಲೆಯ ರಮೇಶ್ 9 ಮುದ್ದೆ ತಿಂದು ಎರಡನೇ ಸ್ಥಾನದೊಂದಿಗೆ ಕುರಿಯನ್ನು ಬಹುಮಾನವಾಗಿ ಪಡೆದರು. ಕೋಲಾರದ ಯಶವಂತ ಕುಮಾ‌ರ್ 8½ ಮುದ್ದೆ ಉಂಡು ತೃತೀಯ ಸ್ಥಾನ ಗಳಿಸಿ, ನಾಲ್ಕು ನಾಟಿ ಕೋಳಿಗಳನ್ನು ಬಹುಮಾನವಾಗಿ ಮನೆಗೆ ಒಯ್ದರು. ಅಲ್ಲದೆ, ಮಹಿಳಾ ವಿಭಾಗದಲ್ಲಿ ಚಿಕ್ಕನಾಯಕನಹಳ್ಳಿಯ ಚಂದ್ರಕಲಾ 9 ಮುದ್ದೆ ತಿಂದು ದ್ವಿತೀಯ ಸ್ಥಾನ ಪಡೆದು ಮಿಕ್ಸರ್ ಡ್ರೈಂಡರ್, ₹4,000 ನಗದು, 1 ಸೀರೆಯನ್ನು ಬಹುಮಾನವಾಗಿ ಪಡೆದರು. ಯಲಹಂಕದ ಪುಷ್ಪ 8 ½ ಮುದ್ದೆ ಉಂಡು ತೃತೀಯ ಸ್ಥಾನದೊಂದಿಗೆ ಕಿಚನ್ ಸೆಟ್, ₹3 ಸಾವಿರ ನಗದು ಮತ್ತು ಸೀರೆ ಗಳಿಸಿದರು.

16 ಜನ ಮಹಿಳೆಯರೂ ಸೇರಿ, ಒಟ್ಟು 68 ಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಸ್ಪರ್ಧೆಗೆ ಒಟ್ಟು 45 ನಿಮಿಷದ ಅವಧಿ ನಿಗದಿಮಾಡಲಾಗಿತ್ತು. ಮುದ್ದೆಯ ಜೊತೆಗೆ ನಾಟಿ ಕೋಳಿ ಪ್ರೈ, ಕಬಾಬ್, ಮೊಟ್ಟೆ, ಸಲಾಡ್ ಕೂಡಾ ಬಡಿಸಲಾಗಿತ್ತು. ಸ್ಥಳೀಯ ವಕೀಲ ಅನಿಲ್ ರೆಡ್ಡಿಯವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಕೀಲ ನಾರಾಯಣಸ್ವಾಮಿ, ಸ್ಥಳೀಯ ಕಾಂಗ್ರೆಸ್ ಮುಖಂಡ ಕೂಡ್ಲುಗೇಟ್‌ ರವೀಂದ್ರ, ಕೆಪಿಸಿಸಿ ಸದಸ್ಯ ಸಯ್ಯದ್ ಸರ್ದಾರ್, ಲೋಕಾಯುಕ್ತ ಡಿವೈಎಸ್ಪಿ ಎಲ್.ವೈ.ರಾಜೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಳೆದ ವರ್ಷದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸಿದ್ದೆ. ಈಗಲೂ ಪ್ರಥಮ ಸ್ಥಾನ. ಜೊತೆಗೆ ತಮ್ಮನನ್ನು ಸ್ಪರ್ಧೆಗೆ ಕರೆ ತಂದಿದ್ದೆ. ಅವನೂ ಪ್ರಥಮ ಸ್ಥಾನ ಗಳಿಸಿರುವುದು ಖುಷಿ ತಂದಿದೆ.

  • ಪ್ರಥಮ ಸ್ಥಾನ ಗಳಿಸಿದ ಸೌಮ್ಯ

ರಾಗಿ ಮಹತ್ವ ಸಾರುವ ಪ್ರಯತ್ನ

ಸ್ಪರ್ಧೆಯ ನಂತರ ಬಹುಮಾನ ವಿತರಿಸಿದ ಲೇಖಕ ಶೂದ್ರ ಶ್ರೀನಿವಾಸ್ ‘ಜನಪದ ಸಂಸ್ಕೃತಿ ಮತ್ತು ಸಾಮಾಜಿಕ ಚಿಂತನೆಯಿಂದ ರಾಗಿ ಬೆಳೆದು ಬಂದಿದೆ. ಯುವ ಜನಾಂಗ ಪಾಶ್ಚಾತ್ಯ ತಿನಿಸುಗಳಿಗೆ ಮನಸೋತು ಆರೋಗ್ಯಕರವಾದ ದೇಸಿ ಆಹಾರವನ್ನು ತ್ಯಜಿಸುತ್ತಿರುವುದು ಕಳವಳಕಾರಿ. ಇಂತಹ ಸ್ಪರ್ಧೆಗಳ ಮೂಲಕ ರಾಗಿಯ ಮಹತ್ವವನ್ನು ಸಾರುವ ಕಾರ್ಯ ಶ್ಲಾಘನೀಯ ಎಂದರು.

Comments are closed.