Dr K Sudhakar: ವಿಜಯೇಂದ್ರ ವಿರುದ್ಧ ಸ್ಫೋಟಗೊಂಡ ಅಸಮಾಧಾನ – ಪಕ್ಷ ಬಿಡಲು ಮುಂದಾದ ಸಂಸದ ಡಾ. ಕೆ ಸುಧಾಕರ್?

Dr K Sudhakar : ರಾಜ್ಯ ಬಿಜೆಪಿಯಲ್ಲಿ ಒಳಜಗಳ ದಿನೇ ದಿನೇ ತಾರಕಕ್ಕೇರುತಿದೆ. ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ದಿನೇ ದಿನೇ ಒಬ್ಬೊಬ್ಬ ಮುಖಂಡರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೀಗ ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್(Dr K Sudhakar )ಅವರು ಬಹಿರಂಗವಾಗಿ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದು, ಪಕ್ಷ ತೊರೆಯುವ ಮಾತನ್ನಾಡಿದ್ದಾರೆ.

ಹೌದು, ಇತ್ತೀಚಿಗಷ್ಟೇ ಶ್ರೀರಾಮುಲು ಅವರು ವಿಜಯೇಂದ್ರ ವಿರುದ್ಧ ಸಿಡಿದೆದ್ದು ಯತ್ನಾಳ್ ಬಣವನ್ನು ಸೇರಿಕೊಂಡಿದ್ದರು. ಇವರ ನಂತರ ಇದೀಗ ವಿಜಯೇಂದ್ರ ವಿರುದ್ಧ ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ. ಕೆ. ಸುಧಾಕರ್ ಬಹಿರಂಗವಾಗಿಯೇ ಗುಡುಗಿದ್ದಾರೆ. ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂದೀಪ್ ಅವರನ್ನು ಆಯ್ಕೆ ಮಾಡಿರುವುದರಿಂದ ಸಿಡಿದೆದ್ದಿರುವ ಸುಧಾಕರ್, ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲಾಧ್ಯಕ್ಷರ ನೇಮಕದಲ್ಲಿ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದ ಆಕ್ರೋಶ ವ್ಯಕ್ತಪಡಿಸಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು ಮಿಸ್ಟರ್ ಬಿ ವೈ ವಿಜಯೇಂದ್ರ ಅವರು ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ ಎಂದು ಸಂಸದ ಡಾ ಕೆ ಸುಧಾಕರ್ ಗಂಭೀರ ಆರೋಪ ಮಾಡಿದ್ದು, ಇಷ್ಟು ದಿನ ಶಾಂತವಾಗಿದ್ದೆ, ಇನ್ನೇನಿದ್ರೂ ಯುದ್ಧ ಎಂದು ಸಂಸದ ಡಾ ಕೆ ಸುಧಾಕರ್, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಚರ್ಚಿಸಲು ಸಮಯಾವಕಾಶ ನೀಡುತ್ತಾರೆ, ಆದರೆ, ಇವರು ಫೋನಿಗೂ ಸಿಗುತ್ತಿಲ್ಲ, ಅರ್ ಎಸ್ ಎಸ್ ನಾಯಕರು ನಮಗೆ ಭೇಟಿಗೆ‌ ಸಮಯ ಕೊಡ್ತಾರೆ, ಆದರೆ ಇವರು ಪತ್ತೆ ಇರಲ್ಲ ಎಂದ ಅವರು, ನನ್ನನ್ನ ತುಳಿಯೋಕೆ, ಸಮಾಧಿ ಮಾಡೋಕೆ‌ ಹೊರಟಿದ್ದೀರಾ ಎಂದು ಪ್ರಶ್ನಿಸಿದರು. ರಮೇಶ್ ಜಾರಕಿಹೊಳಿಯನ್ನು ಮುಗಿಸಿದ್ರಿ,ಯತ್ನಾಳ್ ಸೇರಿದಂತೆ ಅನೇಕರನ್ನು ಮುಗಿಸಿದ್ದೀರಿ, ಆದ್ದರಿಂದ ಇದೀಗ ನನ್ನ ಸರದಿ, ಆದ್ದರಿಂದ ನನ್ನ ಸಮಾಧಾನ ಮುಗೀತು, ಇನ್ನೂ ಏನಿದ್ರು ನಿಮ್ಮ ವಿರುದ್ಧ ಯುದ್ದ, ನೀವು ನೇಮಕ ಮಾಡಿರೋರು ರಿಯಲ್ ಎಸ್ಟೇಟ್ ನಿಂದ ಸ್ವಲ್ಪ ದುಡ್ಡು ತಂದು ಕೊಡಬಹುದು, ಆದರೆ ಅವರಿಂದ ಪಕ್ಷ ಗೆಲ್ಲಲು ಸಾಧ್ಯವಾಗೋದಿಲ್ಲ ಎಂದರು.

ವರಿಷ್ಠರಿಗೆ ಮನವಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಬಳಿಗೆ ಹೋಗಿ ಎಲ್ಲವನ್ನೂ ಹೇಳುತ್ತೇನೆ. ವಿಜಯೇಂದ್ರ ಯಾವ ರೀತಿ ಪಕ್ಷ ಸಂಘಟಿಸುತ್ತಿದ್ದಾರೆ ಎಂದು ವಾಸ್ತವಾಂಶ ತಿಳಿಸುತ್ತೇನೆ. ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಯಡಿಯೂರಪ್ಪ ಅವರ ನಾಯಕತ್ವವೇ ಬೇರೆ ರೀತಿಯಲ್ಲಿದೆ. ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ತಂದೆಯವರ ಯಾವುದೇ ಗುಣ ವಿಜಯೇಂದ್ರ ಅವರಿಗೆ ಬಂದಿಲ್ಲ. ನಾನು ಬಸವರಾಜ ಬೊಮ್ಮಾಯಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದರು.

ಪಕ್ಷ ಬಿಡಲು ತೀರ್ಮಾನ?
ವಿಜಯೇಂದ್ರ ಅವರ ವರ್ತನೆಯಿಂದ ಪಕ್ಷ ಬಿಟ್ಟು ಹೋಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗೊತ್ತಿಲ್ಲ ..ನಾನು ರಾಷ್ಟ್ರೀಯ ನಾಯಕರ ಜೊತೆಗೆ ಮಾತಾಡಬೇಕು, ರಾಜಕೀಯದಲ್ಲಿ ಹೀಗೆ ಆಗುತ್ತೆ ಅಂತ ಹೇಳೋಕೆ ಆಗುತ್ತಾ..? ಏನ್ ಬೇಕಾದರೂ ಆಗಬಹುದು ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ತಿಳಿಸಿದರು. ರಾಷ್ಟ್ರೀಯ ನಾಯಕರ ಜೊತೆ ಚರ್ಚೆಯ ಬಳಿಕ ನಾನು ಪಕ್ಷ ಬಿಟ್ಟು ಹೋಗೋದಾ, ಬೇಡವಾ ಅಂತ ತೀರ್ಮಾನ ಮಾಡುತ್ತೇನೆ ಎಂದರು.

Comments are closed.