UP: ಶಾಲೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ ಶಿಕ್ಷಕ, ನಗಾಡಿದ ವಿದ್ಯಾರ್ಥಿಗೆ ಮನಬಂದಂತೆ ಥಳಿತ

UP: ಉತ್ತರ ಪ್ರದೇಶದ ಝಾನ್ಸಿಯಲ್ಲಿ 2ನೇ ತರಗತಿ ಓದುತ್ತಿರುವ ಮಗುವಿಗೆ ಶಿಕ್ಷಕರೊಬ್ಬರು ಮನಬಂದಂತೆ ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿರುವುದನ್ನು ವಿದ್ಯಾರ್ಥಿ ನೋಡಿ ನಗಾಡಿದ್ದ. ಇದರಿಂದ ಕೋಪಗೊಂಡ ಶಿಕ್ಷಕ 8 ವರ್ಷದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.

 

ಈ ಬಗ್ಗೆ ವಿದ್ಯಾರ್ಥಿಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಈ ಪ್ರಕರಣವು ಜಿಲ್ಲೆಯ ಪೂಂಚ್ ಪೊಲೀಸ್ ಠಾಣೆ ವ್ಯಾಪ್ತಿಯ ಡಿವೈನ್ ಲೈಟ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದಿದೆ. ಶಾಲಾ ಶಿಕ್ಷಕ ಕುಲದೀಪ್ ಯಾದವ್ ತನ್ನ ಎರಡನೇ ತರಗತಿಯಲ್ಲಿ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಲನಚಿತ್ರವನ್ನು ವೀಕ್ಷಿಸುತ್ತಿದ್ದರು. ಇದನ್ನು ನೋಡಿದ ಮಕ್ಕಳು ತರಗತಿಯಲ್ಲಿ ತಮ್ಮ ನಡುವೆ ಮಾತನಾಡಲು ಮತ್ತು ನಗಲು ಪ್ರಾರಂಭಿಸಿದರು. ಇದರಿಂದ ಕೋಪಗೊಂಡ ಶಿಕ್ಷಕ ಕುಲದೀಪ್ ಯಾದವ್ ಮಗನಿಗೆ ಮನಬಂದಂತೆ ಥಳಿಸಿದ್ದಾರೆ.

ವಿದ್ಯಾರ್ಥಿಯ ಕೂದಲನ್ನು ಹಿಡಿದುಕೊಂಡು ಗೋಡೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವರದಿಯಾಗಿದೆ. ಹೊಡೆತದಿಂದ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ವಿದ್ಯಾರ್ಥಿ ಮನೆಗೆ ಬಂದು ಘಟನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದು, ಕೂಡಲೇ ಮಗುವಿನ ತಂದೆ ಮಗುವಿನ ಜೊತೆ ಪೊಲೀಸ್‌ ಠಾಣೆಗೆ ಬಂದಿದ್ದಾರೆ.

ತನ್ನ ಮಗನನ್ನು ಅತ್ಯಂತ ಅಮಾನುಷವಾಗಿ ಥಳಿಸಲಾಗಿದೆ ಎಂದು ವಿದ್ಯಾರ್ಥಿಯ ತಂದೆ ಪೊಲೀಸರಲ್ಲಿ ದೂರು ನೀಡಿದ್ದಾರೆ. ಆರೋಪಿ ಶಿಕ್ಷಕ ಕುಲದೀಪ್ ಯಾದವ್ ತನ್ನ ಕೂದಲನ್ನು ಹಿಡಿದು ಗೋಡೆಗೆ ಹೊಡೆದಿದ್ದಾನೆ, ಇದರಿಂದಾಗಿ ಮಗುವಿನ ಕಿವಿಯಲ್ಲಿ ನೋವು ಉಂಟಾಗಿದೆ ಎಂದು ದೂರು ನೀಡಲಾಗಿದೆ.

ಈ ವೇಳೆ ಪೊಲೀಸರು ದೂರಿನ ಆಧಾರದ ಮೇಲೆ ಆರೋಪಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಪೂಂಛ್ ಪೊಲೀಸ್ ಠಾಣೆಯಲ್ಲಿ ಶಾಲೆಯಲ್ಲಿ ನಡೆದ ಹಲ್ಲೆ ಪ್ರಕರಣ ಗಮನಕ್ಕೆ ಬಂದಿದ್ದು, 8 ವರ್ಷದ ವಿದ್ಯಾರ್ಥಿಗೆ ತರಗತಿ ಶಿಕ್ಷಕ ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಗೋಪಿನಾಥ್ ಸೋನಿ ತಿಳಿಸಿದ್ದಾರೆ. ಈ ಸಂಬಂಧ ಮನೆಯವರಿಂದ ದೂರು ಬಂದಿದ್ದು, ಅದರ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Leave A Reply

Your email address will not be published.