Work for people: ಜನರ ಪರ ಕೆಲಸ ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ: ಬೊಮ್ಮಾಯಿ ಎಚ್ಚರಿಕೆ ಕೊಟ್ಟದ್ದು ಯಾರಿಗೆ?

Work for people: ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramayiah) ಅವರು ಪ್ರತಿ ದಿನ ಮೂರು ವರ್ಷ ನಾನೇ ಸಿಎಂ ಅಂತ ಹೇಳುತ್ತಿರುವುದು ನೋಡಿದರೆ ಅವರಿಗೆ ಎಷ್ಟು ಅಭದ್ರತೆ(Insecurity) ಕಾಡುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಸಿಎಂ ಜೊತೆಗೆ ಸರ್ಕಾರವೂ(Govt) ಅಭದ್ರವಾಗಿದ್ದು, ಯಾವುದೇ ಅಭಿವೃದ್ದಿ ಕೆಲಸ ಆಗುತ್ತಿಲ್ಲ, ಜನರ ಪರ ಕೆಲಸ ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಸಂಸದ ಬಸವರಾಜ ಬೊಮ್ಮಾಯಿ(MP Basavaraj Bommai) ಆಗ್ರಹಿಸಿದರು.
ಅವರು ನವದೆಹಲಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಸರ್ಕಾರವೂ ಅಭದ್ರವಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಎಲ್ಲವೂ ನಿಂತು ಹೋಗಿದೆ. ನನಗಿರುವ ಮಾಹಿತಿಯ ಪ್ರಕಾರ ಮಹತ್ವದ ಯಾವುದೇ ಕಡತಗಳಿಗೆ ಸಹಿ ಹಾಕುತ್ತಿಲ್ಲ. ಜನರ ಪರ ಕೆಲಸ ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ರಾಜಿನಾಮೆ ಕೊಡಬೇಕೆಂದರೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರೂ ರಾಜೀನಾಮೆ ನೀಡಬೇಕಾಗುತ್ತದೆ ಎಂದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿ.ಟಿ. ದೇವೇಗೌಡರು ಏನು ಹೇಳಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ವಿಚಾರದಲ್ಲಿ ಅವರ ವಿರುದ್ದ ದೂರು ಕೊಟ್ಟಾಗಲೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ರಾಜ್ಯಪಾಲರು ಪ್ರಾಷಿಕ್ಯೂಷನ್ ಗೆ ಅನುಮತಿ ಕೊಟ್ಟಾಗಲೂ ಕೂಡ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೈಕೋರ್ಟ್ ಬಹಳ ಸ್ಪಷ್ಟವಾಗಿ ಎಲ್ಲೆಲ್ಲಿ ತಪ್ಪುಗಳಾಗಿದೆ, ಎಲ್ಲಿ ಸ್ವಜನ ಪಕ್ಷಪಾತವಾಗಿದೆ ಎನ್ನುವುದು ಹೇಳಿ ತೀರ್ಪು ನೀಡಿದೆ. ಅದಾದ ಬಳಿಕ ಸಿಎಂ ತಮ್ಮ ಅಡಿಯಲ್ಲಿಯೇ ಕೆಲಸ ಮಾಡುವ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸಲು ಸೂಚಿಸುತ್ತಾರೆ ಎಂದರೆ ಅದನ್ನು ಯಾರು ಒಪ್ಪುತ್ತಾರೆ, ಮುಖ್ಯಮಂತ್ರಿ ಗಳಾದವರು ಕರ್ನಾಟಕದ ಜನತೆಯ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮಸಾಕ್ಷಿಯೇ ಅಂತಿಮ ನ್ಯಾಯಾಲಯ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಆತ್ಮಸಾಕ್ಷಿಯನ್ನು ನೋಡುವವರು ಯಾರು ? ಅವರ ಆತ್ಮಸಾಕ್ಷಿ ನಡೆಯಿಂದ ಗೊತ್ತಾಗಬೇಕು. ನುಡಿಯಿಂದ ಅಲ್ಲ ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ವಿರುದ್ದ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪದ ಕುರಿತು ಅಶೋಕ್ ಅವರೇ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಅವರ ಪ್ರಕರಣಕ್ಕೂ ಸಿದ್ದರಾಮಯ್ಯ ಅವರ ಪ್ರಕರಣಕ್ಕೂ ವ್ಯತ್ಯಾಸ ಇದೆ. ಅಶೋಕ್ ಅವರು ಪ್ರಕರಣ ದಾಖಲಾಗುವ ಮುನ್ನವೇ ಜಮೀನು ವಾಪಸ್ ಕೊಟ್ಡಿದ್ದರು. ಶೇ 70 ರಷ್ಟು ಬಿಡಿಎ ಇಟ್ಟುಕೊಂಡು ಹಾಗೂ ಶೇಕಡಾ 30% ರಷ್ಟು ಜಮೀನು ಬಿಟ್ಟುಕೊಡುವ ವ್ಯವಸ್ಥೆ ಇತ್ತು. ಅಶೋಕ್ ಅವರ ವಿರುದ್ದ ಜನಪ್ರತಿನಿಧಿಗಳ ಕೋರ್ಟ್, ಹೈಕೋರ್ಟ್, ವಿಭಾಗೀಯ ಪೀಠ ಗಳಲ್ಲಿ ಅಶೋಕ್ ಅವರ ವಿರುದ್ದ ಆಪಾದನೆಗಳು ಬಂದಿಲ್ಲ. ಇಷ್ಟಾದರೂ ಕೂಡ ಅವರು ನಾನು ನೈತಿಕತೆ ಹೊತ್ತು ರಾಜಿನಾಮೆ ಕೊಡುತ್ತೇನೆ, ನೀವೂ ರಾಜಿನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ ಎಂದು ಹೇಳಿದರು.

Leave A Reply

Your email address will not be published.