Nandi Krushi: ಸಾವಯವ ಕೃಷಿ ಬದಲು ನಂದಿ ಕೃಷಿ ಶಬ್ದ ಬಳಕೆ ಅವಶ್ಯ: ಏಕೆ ಈ ಸ್ಥಿತಿ ಬಂದೊದಗಿದೆ?

Nandi Krushi: ಕಳೆದ ಇಪ್ಪತ್ತು ವರ್ಷಗಳಿಂದ ಸಾವಯವ ಕೃಷಿ(Organic Farming) ಎಂಬ ಶಬ್ದದ ಅಡಿಯಲ್ಲಿ ಕೃಷಿಯಲ್ಲಿ(Agriculture) ಬದಲಾವಣೆ ತರಲು ಹಲವು ರೀತಿಯ ಪ್ರಯತ್ನಗಳು ನಡೆದಿವೆ. ಆದರೂ ಸಹ ಇಂದು ಪ್ರತಿ ಗ್ರಾಮಗಳಲ್ಲಿ(Village) ಕನಿಷ್ಠ ಇಪ್ಪತ್ತು ಜನ ಸಾವಯವ ಕೃಷಿಕರು ನೋಡಲು ಸಿಗುವುದಿಲ್ಲ. ಏಕೆಂದರೆ, ಸಾವಯವ ಕೃಷಿ ಎಂಬ ಶಬ್ದವು ಬಹುಜನ ರೈತರಿಗೆ(Farmers) ಸರಳವಾಗಿ ಅರ್ಥವಾಗದ ಶಬ್ದವಾಗಿ ಉಳಿದಿದೆ ಎಂಬುದು ಸ್ಪಷ್ಟವಾಗುತ್ತದೆ.

ಸಾವಯವ ಕೃಷಿ ಎಂಬ ಶಬ್ದವು ಬಹುಜನ ರೈತರ ಒಳತಿಗೆ ಉಪಯೋಗ ಆಗಿರುವುದಕ್ಕಿಂತ ದುರ್ಬಳಕೆಯಾಗಿರುವುದೇ ಹೆಚ್ಚಾಗಿದೆ. ಉದಾಹರಣೆಗೆ, ರೈತರಿಗೆ ಸಾವಯವ ಪ್ರಮಾಣಪತ್ರ ನೀಡುವ ಯೋಜನೆ ಜಾರಿಗೆ ಬಂದಿತು. ಈ ಯೋಜನೆಯಡಿಯಲ್ಲಿ ಹಲವು ರೈತರು ಹಣ ಖರ್ಚು ಮಾಡಿ ಸಾವಯವ ಪ್ರಮಾಣ ಪತ್ರ ಪಡೆದರೂ ಸಹ ಅದರಿಂದ ಹೆಚ್ಚು ರೈತರು ಒಳ್ಳಯ ಲಾಭ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಸಾವಯವ ಪ್ರಮಾಣ ಪತ್ರದ ಹೆಸರಿನಲ್ಲಿ ಸರ್ಕಾರದ ಹಣವೂ ಕೂಡ ವ್ಯರ್ಥವಾದಂತಾಯಿತು. ಹೀಗೆ ಅನೇಕ ರೀತಿಯ ಯೋಜನೆಗಳು ಮುನ್ನೆಲೆಗೆ ಬಂದರೂ ಸಹ ಅವುಗಳು ತಾತ್ಕಾಲಿಕ ಫಲ ನೀಡಿ ಕಣ್ಮರೆಯಾದ ಹಲವು ಉದಾಹರಣೆಗಳಿವೆ.

ಸಾವಯವ ಕೃಷಿ ಎಂದರೆ ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಗೆ ಇರುವಂತೆ ನೋಡಿಕೊಳ್ಳುವುದು ಎಂದು ಅರ್ಥ. ಯಾವ ರೈತರು ಜೋಡೆತ್ತು, ಆಕಳು, ಎಮ್ಮೆ ಹಾಗೂ ಮೇಕೆಗಳನ್ನು ಹೊಂದಿರುವರೋ ಅವರ ಜಮೀನಿನಲ್ಲಿ ಸಾಮಾನ್ಯವಾಗಿ ಸಾವಯವದ ಅಂಶ ಹೆಚ್ಚಿಗೆ ಇರುತ್ತದೆ. ಜೋಡೆತ್ತು ಕಟ್ಟಿದ ರೈತನಿಗೆ ಒಂದು ಆಕಳು ಅಥವಾ ಎಮ್ಮೆ ಅಥವಾ ಮೇಕೆ ಸಾಕುವುದು ಕಷ್ಟವಾಗುವುದಿಲ್ಲ. ಹಾಗಾಗಿ ಜೋಡೆತ್ತಿನ ಕೃಷಿಕನೇ ಅತೀ ಹೆಚ್ಚು ಸಾವಯವ ಪದಾರ್ಥವನ್ನು ಭೂಮಿಗೆ ಸೇರಿಸುವ ವ್ಯಕ್ತಿಯಾಗಿದ್ದಾನೆ.

ಆದರೆ, ಇಂದು ಸಾವಯವ ಕೃಷಿ ಎಂಬ ಶಬ್ದದ ಮಾಯಾಲೋಕದಲ್ಲಿ ಜೋಡೆತ್ತಿನ ಅಥವಾ ನಂದಿ ಕೃಷಿಕನ ಮಹತ್ವ ಯಾರಿಗೂ ಕೂಡ ಕಾಣದಂತಾಗಿದೆ. ಜೋಡೆತ್ತು ಅಥವಾ ನಂದಿ ಕೃಷಿಕರ ಸಂಖ್ಯೆ ಹೆಚ್ಚಾದಂತೆ ಬಹುಜನ ರೈತರ ಜಮೀನಿನಲ್ಲಿ‌ ಸಾವಯವ ಅಂಶ ಹೆಚ್ಚಾಗಲು ಪ್ರಾರಂಭಿಸುವುದು. ಭೂಮಿಯಲ್ಲಿ ಸಾವಯವದ ಅಂಶ ಹೆಚ್ಚಾದಂತೆ ರಾಸಾಯನಿಕಗಳ ಬಳಕೆಯೂ ಕೂಡ ಕಡಿಮೆಯಾಗುತ್ತಾ ಸಾಗುವುದು. ಅದಕ್ಕಾಗಿ, ಸಾವಯವ ಕೃಷಿ ಶಬ್ದದ ಬದಲು ನಂದಿ ಕೃಷಿ ಎಂಬ ಶಬ್ದವನ್ನು ಮುನ್ನೆಲೆಗೆ ತರುವ ಅವಶ್ಯಕತೆ ಬಂದೊದಗಿದೆ.

ನಂದಿ ಕೃಷಿಯಲ್ಲಿ ಗೋ ಆಧಾರಿತ ಕೃಷಿಯೂ ಕೂಡ ಅಡಕವಾಗಿದೆ. ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಫಾರ್ಮಾಕಲ್ಚರ್ ಹಾಗೂ ಇತರ ಶಬ್ದಗಳ ಆಧಾರಿತವಾಗಿ ಜಾರಿಗೆ ತರುತ್ತಿರುವ ಯೋಜನೆಗಳ ಮೂಲಾಧಾರ ನಂದಿಯೇ ಆಗಿದ್ದಾನೆ.‌ ನಂದಿ ಇಲ್ಲದ ನಿಸರ್ಗಕ್ಕೆ ಪೂರಕವಾದ ಕೃಷಿಯನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಅದಕ್ಕಾಗಿ, ನಿಸರ್ಗಕ್ಕೆ ಪೂರಕವಾದ ವಿವಿಧ ಕೃಷಿಗಳಿಗೆ ನಂದಿಯೇ ಮೂಲಾಧಾರ ಆಗಿದ್ದಾನೆ.

ನಂದಿ ಕೃಷಿ ಶಬ್ದವನ್ನು ಮುನ್ನೆಲೆಗೆ ತಂದು ಜೊಡೆತ್ತಿನ ಕೃಷಿಕರಿಗೆ ಹಾಗೂ ಗೋ ಸಾಕಾಣಿಕೆದಾರರಿಗೆ ಪ್ರೋತ್ಸಾಹ ಧನ ನೀಡುವ ಯೊಜನೆ ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ. ಇದರಿಂದ ಸಾವಯವ ಪದಾರ್ಥ ಉತ್ಪಾದಿಸುವ ರೈತರ ಸಂಖ್ಯೆ‌ ಹೆಚ್ಚಾಗಿ ಭೂಮಿಯ ಫಲವತ್ತತೆ ಹೆಚ್ಚಾಗುವುದು.

ಇಂದು ಸಾವಯವ ಕೃಷಿ ಎಂಬ ಶಬ್ದವು ಬಹುಜನ ರೈತರು ಒಗ್ಗೂಡದಂತೆ ತಡೆ ಹಿಡಿಯುತ್ತಿರುವ ಶಬ್ದವಾಗಿ ಪರಿಣಮಿಸಿದೆ.‌ ಏಕೆಂದರೆ ಬಹುಜನ ರೈತರಿಗೆ ಅರ್ಥವಾಗದೇ ಇರುವ ಶಬ್ದದಿಂದ‌ ರೈತರನ್ನು ಒಗ್ಗೂಡಿಸಲು ಸಾಧ್ಯವಾಗುತ್ತಿಲ್ಲ. ಇಂದಿನ ರೈತ ಸಂಘಗಳು ನಂದಿ ಕೃಷಿಕರ‌ ಆಧಾರಿತವಾಗಿ ಸಂಘಗಳನ್ನು ರಚಿಸಲು ಪ್ರಯತ್ನಿಸಬೇಕಾಗಿದೆ. ಇದರಿಂದ ರೈತ ಸಂಘಟನೆ ಬಲಿಷ್ಠವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಯಾವುದೋ ರೂಪದಲ್ಲಿ, ಸಾವಯವ ಕೃಷಿ ಶಬ್ದ ಬಳಕೆಯ ಮೂಲಕ ಬಹುಜನ ರೈತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆ ಮಾಡಿದಂತಾಗುತ್ತಿದೆ. ರಾಸಾಯನಿಕಗಳನ್ನು ತ್ಯಜಿಸಲು ಹೇಳುವುದರ ಎರಡು ಪಟ್ಟು ನಂದಿ ಕೃಷಿಗೆ ಪ್ರೋತ್ಸಾಹ ನೀಡುವ ಯೋಜನೆಗಳ ಜಾರಿಗಾಗಿ ಪ್ರಯತ್ನಿಸಬೇಕಾದ ಅವಶ್ಯಕತೆ ಬಂದೊದಗಿದೆ. ಅನೇಕ ರೈತರು ನಂದಿ ಕೃಷಿ ಮೂಲಕ ತಮ್ಮ ಜಮೀನಿನಲ್ಲಿ ಸಾವಯವದ ಅಂಶ ಹೆಚ್ಚಿಗೆ ಇಟ್ಟಿದ್ದರೂ ಸಹ ಅವರನ್ನು ಗುರುತಿಸುವ ವ್ಯವಸ್ಥೆ ಇಲ್ಲದಾಗಿದೆ. ಯಾರ ಜಮೀನಿನಲ್ಲಿ ಹೆಚ್ಚಿಗೆ ಸಾವಯವದ ಅಂಶ‌ ಇರುವುದೋ ಅವರನ್ನು ಗುರುತಿಸಿ ಸಮಾಜದಲ್ಲಿ ವಿಶೇಷ ಪ್ರಾಶಸ್ತ್ಯ ನೀಡಬೇಕಾಗಿದೆ. ನಂದಿ ಕೃಷಿಗೆ ಪ್ರೋತ್ಸಾಹ ನೀಡದೆ ಬಹುಜನ ರೈತರ ಜಮೀನುಗಳಲ್ಲಿ ಸಾವಯವದ ಅಂಶವನ್ನು ಹೆಚ್ಚಿಸಲು ಸಾಧ್ಯವಿಲ್ಲ.

ನಂದಿ ಕೃಷಿ ಎಂಬ ಶಬ್ದವನ್ನು ಬಹುಜನರು ಸರಳವಾಗಿ ಅರ್ಥೈಸಿಕೊಳ್ಳಬಹುದಾದ ಶಬ್ದವಾಗಿದೆ. ಜೋಡೆತ್ತಿನ ಕೃಷಿ ಅಥವಾ ನಂದಿ ಕೃಷಿ ಎಂಬ ಶಬ್ದದ ಮೂಲಕ ಗ್ರಾಮದ ಹಿರಿಯ ರೈತರೊಂದಿಗೆ ಚರ್ಚೆಗೆ ಇಳಿದರೆ, ಅನೇಕ ರೀತಿಯ ಕೃಷಿ ಯೋಜನೆಗಳು ರೈತರಿದಂಲೇ ದೊರೆಯಲು ಪ್ರಾರಂಭಿಸುತ್ತವೆ. ಅದಕ್ಕಾಗಿ, ಸಾವಯವ ಕೃಷಿ ಶಬ್ದದ ಬದಲು ನಂದಿ ಕೃಷಿ ಶಬ್ದದ ಬಳಕೆಯ ಮೂಲಕ ನಾವೆಲ್ಲರೂ ಒಗ್ಗೂಡಬೇಕಾದ ಅವಶ್ಯಕತೆ ಬಂದೊದಗಿದೆ.

ಅನೇಕ ದೇವಸ್ಥಾನಗಳಲ್ಲಿ‌ ಪ್ರತಿಷ್ಠಾಪಿಸಿದ ನಂದಿ‌ಯ ಆಧಾರಿತವಾಗಿ ಭಾರತೀಯ ರೈತರನ್ನು ಒಗ್ಗೂಡಿಸಿ ನಂದಿ ಕೃಷಿಗೆ ಪೂರಕವಾದ ಕಾನೂನು ಹಾಗೂ ಯೋಜನೆಗಳ ಜಾರಿಗಾಗಿ ಆಗ್ರಹಿಸಬಹುದಾಗಿದೆ. ವಿವಿಧ ರೈತ ಸಂಘಟನೆಗಳ ಮುಖಂಡರು ವಾಸ್ತವಿಕ ಸತ್ಯವನ್ನು ಅರ್ಥೈಸಿಕೊಂಡು‌ ನಂದಿ ಕೃಷಿಕರ ಆಧಾರಿತವಾಗಿ ಸಂಘಗಳನ್ನು ರಚಿಸಿ ತಮ್ಮ ಸಂಘಟನೆಯನ್ನು ಬಲಪಡಿಸಬೇಕಾಗಿದೆ. ಏಕೆಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಬಹಳ ಮುಖ್ಯವಾಗಿರುತ್ತದೆ. ಯೋಚಿಸಿ!

Leave A Reply

Your email address will not be published.