Kolkata : ಅತ್ಯಾಚಾರಕ್ಕೊಳಗಾದ ಟ್ರೈನಿ ವೈದ್ಯೆ ಆ ರಾತ್ರಿ ಸೆಮಿನಾರ್ ಹಾಲಲ್ಲೇ ಮಲಗಿದ್ದೇಕೆ ? CBI ತನಿಖೆಯಲ್ಲಿ ಹೊಸ ರಹಸ್ಯ ಬಯಲು
Kolkata: ಕೊಲ್ಕತಾ ನಗರದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ (RG Kar Hospital) ನಡೆದ ವೈದ್ಯೆಯ ಬರ್ಬರ ಅತ್ಯಾಚಾರ ಹಾಗೂ ಕೊಲೆ (Kolkata Doctor Murder Case) ಪ್ರಕರಣ ಇಡೀ ದೇಶಾದ್ಯಂತ ಭಾರೀ ಸದ್ದು ಮಾಡಿದೆ. ಈ ಕೇಸ್ ಕುರಿತು ಇನ್ನಷ್ಟು ಬೀಭತ್ಸ (Kolkata horror) ವಿವರಗಳು ಹೊರಬೀಳುತ್ತಿವೆ. ಅಂತೆಯೇ ಇದೀಗ ನೈಟ್ ಡ್ಯೂಟಿ ಸಮಯದಲ್ಲಿ ಮಹಿಳಾ ವೈದ್ಯೆ ಸೆಮಿನಾರ್ ಹಾಲ್‌ನಲ್ಲಿ ಮಲಗಲು ಕಾರಣವೇನು ಅನ್ನೋದು ಸಿಬಿಐ ತನಿಖೆಯಿಂದ ವಿಷಯ ಬಹಿರಂಗವಾಗಿದೆ.
ಹೌದು, ಸಿಬಿಐ ಮೂಲಗಳಿಂದ ಹಲವು ಮಾಹಿತಿಗಳು ಹೊರಬರುತ್ತಿದ್ದು, ತನಿಖೆ ವೇಳೆ ಸಿಬಿಐಗೆ ಸಂಭವನೀಯ ಕಾರಣಗಳ ಬಗ್ಗೆ ತಿಳಿದು ಬಂದಿದ್ದು, ಸಿಬಿಐ ಮೂಲಗಳ ಪ್ರಕಾರ, ಕೃತ್ಯ ನಡೆದ ದಿನ ರಾತ್ರಿ ಅನೇಕ ರೋಗಿಗಳು ಸ್ಲೀಪಿಂಗ್ ವಾರ್ಡ್‌ನಲ್ಲಿ (ಸ್ಲೀಪ್ ಅಪ್ನಿಯಾ ರೋಗಿಗಳು ತಂಗುವ ಸ್ಥಳದಲ್ಲಿ) ವೀಕ್ಷಣೆಯಲ್ಲಿದ್ದರು. ಅಲ್ಲಿ ರೋಗಿ ಮಲಗುವಾಗ ನಿಗಾದಲ್ಲಿ ಇರಿಸಬೇಕಾಗುತ್ತದೆ. ಆ ವಾರ್ಡಿನಲ್ಲಿ ಸಾಮಾನ್ಯವಾಗಿ ಹೆಚ್ಚು ರೋಗಿಗಳು ಇರದ ಕಾರಣ, ಉಸ್ತುವಾರಿ ವೈದ್ಯರು ಪ್ರತಿ ರಾತ್ರಿ ಮಲಗುತ್ತಾರೆ ಅಥವಾ ವಿಶ್ರಾಂತಿ ಪಡೆಯುತ್ತಾರೆ. ಆದರೆ ಘಟನೆ ನಡೆದ ರಾತ್ರಿ ಆ ವಾರ್ಡ್‌ನಲ್ಲಿ ರೋಗಿಯೊಬ್ಬರು ಇದ್ದ ಕಾರಣ ಯುವ ವೈದ್ಯರು ಸೆಮಿನಾರ್ ಹಾಲ್‌ನಲ್ಲಿ ಮಲಗಿದ್ದರು ಎಂದು ತಿಳಿದು ಬಂದಿದೆ. ಇದೇ ಸೆಮಿನಾರ್ ಹಾಲ್‌ನಲ್ಲಿ ಟ್ರೈನಿ ವೈದ್ಯರ ಮೇಲೆ ದೌರ್ಜನ್ಯ ನಡೆದಿದೆ. ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಲಾಗಿದೆ. ಹೀಗಾಗಿ ಸಿಬಿಐ ತಂಡದ ತನಿಖೆ ಪದೇ ಪದೇ ಸೆಮಿನಾರ್ ಹಾಲ್‌ನ ಸುತ್ತವೇ ನಡೆಯುತ್ತಿದೆ.
ಈ ನಡುವೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಯಿತು. ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಪ್ರತಿಭಟಿಸುವ ವೈದ್ಯರ ಮೇಲೆ ನಿಮ್ಮ ಅಧಿಕಾರವನ್ನು ಪ್ರದರ್ಶಿಸಬೇಡಿ ಎಂದು ಹೇಳಿದೆ. ಕೋರ್ಟ್ ವೈದ್ಯರಿಗೆ ಕೆಲಸವನ್ನು ಪುನರಾರಂಭಿಸಲು ಕೇಳಿದೆ. ವೈದ್ಯರ ಕಳವಳವನ್ನು ಅತ್ಯಂತ ಪ್ರಾಮುಖ್ಯತೆಯೊಂದಿಗೆ ಸ್ವೀಕರಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದ್ದು, ಕಾರ್ಯಪಡೆಯು ತನ್ನ ಮಧ್ಯಂತರ ವರದಿಯನ್ನು ಮೂರು ವಾರಗಳಲ್ಲಿ ಮತ್ತು ಅಂತಿಮ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸಲಿದೆ ಎಂದು ಹೇಳಿದೆ.
ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು ಸೇರಿದಂತೆ ಶಂಕಿತರನ್ನು ಸಿಬಿಐ ತನಿಖೆಗೊಳಪಡಿಸಿದೆ. ನಿನ್ನೆ ಮುಂಜಾನೆ ಪ್ರಕರಣದ ಹಲವಾರು ಶಂಕಿತರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಯಿಂದ ಸರಣಿ ತನಿಖೆಗೆ ಒಳಗಾದರು. ಸುಪ್ರೀಂ ಕೋರ್ಟ್ ಪ್ರಕರಣವನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು, ಆಗಸ್ಟ್ 22ರೊಳಗೆ ತನಿಖೆಯ ಸ್ಥಿತಿಗತಿಯ ವರದಿಯನ್ನು ಸಲ್ಲಿಸುವಂತೆ ಏಜೆನ್ಸಿಯನ್ನು ಕೇಳಿದೆ.
ಇನ್ನು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲನಾದ ಡಾ. ಸಂದೀಪ್ ಘೋಷ್, ಕೋಲ್ಕತ್ತಾ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅನುಪ್ ದತ್ತಾ, ಸಂಜಯ್ ರಾಯ್ ಜೊತೆಗಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ಕೆಲವೇ ದಿನಗಳಲ್ಲಿ ಸಂದೀಪ್ ಘೋಷ್ ರಾಜೀನಾಮೆ ನೀಡಿದ್ದಾನೆ. ಈತ ಘಟನೆಯ ನಂತರ ಸೆಮಿನಾರ್ ಹಾಲ್ ಬಳಿಯ ಕೊಠಡಿಗಳನ್ನು ಕ್ಲೀನ್ ಮಾಡಲು ಆದೇಶಿಸಿದ್ದ. ಅಪರಾಧದ ಹಿಂದೆ ಪಿತೂರಿ ಇದೆಯೇ ಎಂದು ಕಂಡುಹಿಡಿಯಲು ಸಿಬಿಐ ಈತನನ್ನು ಪ್ರಶ್ನಿಸುತ್ತಿದೆ. ಅಂದು ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ಇಂಟರ್ನ್‌ಗಳೊಂದಿಗೆ ಸಂದೀಪ್ ಘೋಷ್ ಅವರ ಉತ್ತರಗಳನ್ನು ಸಿಬಿಐ ಪರಿಶೀಲಿಸುತ್ತಿದೆ.