Lok Sabha Election 2024: ದಕ್ಷಿಣ ಕನ್ನಡದಲ್ಲಿ ಶಸ್ತ್ರಾಸ್ತ್ರಗಳ ಠೇವಣಿಗೆ ಪೊಲೀಸ್‌ ಆಯುಕ್ತರ ಆದೇಶ

Mangaluru: ಚುನಾವಣೆ ಬಂದಾಗ ಕಾಡುಪ್ರಾಣಿಗಳನ್ನು ಹೆದರಿಸಲೆಂದು ಬಳಸುವ ಶಸ್ತ್ರಾಸ್ತ್ರಗಳ ಕುರಿತು ಕೃಷಿಕರು ಪರವಾನಗಿ ಪಡೆಯುವ ಕುರಿತು ಕೆಲವೊಂದು ಸಂಘರ್ಷ ಏರ್ಪಡುತ್ತದೆ. ಈ ಬಾರಿ ಕೂಡಾ ಈ ಗೊಂದಲ ಏರ್ಪಟ್ಟಿದೆ.

ಹೀಗಾಗಿ ನಗರ ಪೊಲೀಸ್‌ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅನುಪಮ್‌ ಅಗರವಾಲ್‌ ಅವರು ಲೋಕಸಭಾ ಚುನಾವಣೆ (Lok Sabha Election 2024) ಏ.26 ರಂದು ನಡೆಯಲಿರುವ ಕಾರಣ ಮಂಗಳೂರು ಕಮಿಷನರೇಟ್‌ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಆಯುಧ ಪರವಾನಿಗೆ ಹೊಂದಿರುವ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು 2024 ಎ.1 ರೊಳಗೆ ಠೇವಣಿ (Arms Deposit) ಮಾಡಲು ಆದೇಶ ಹೊರಡಿಸಿದ್ದಾರೆ.

ಆದೇಶದಲ್ಲೇನಿದೆ?

1. ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ದಿನಾಂಕ 01-04-2024 ರೊಳಗೆ ನಮೂನ ನಂಬ್ರ 8 ರ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಹಾಗೂ ಮದ್ದುಗುಂಡು ವ್ಯಾಪಾರಿಗಳಲ್ಲಿ ಅಥವಾ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡುವುದು. ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ತಮ್ಮ ಬೆಳೆರಕ್ಷಣೆಗಾಗಿ ಆಯುಧದ ತೀರಾ ಅವಶ್ಯಕತೆ ಇದೆ ಎಂದಾದಲ್ಲಿ ಈ ಆದೇಶ ಹೊರಡಿಸಿದ 25-03-2024 ವಾರದೊಳಗೆ ಪೂರಕ ದಾಖಲೆ/ಮಾಹಿತಿಗಳೊಂದಿಗೆ ಹಾಗೂ ಪರವಾನಿಗೆ ಪ್ರತಿಯೊಂದಿಗೆ ಜಿಲ್ಲಾಮಟ್ಟದ ಸ್ಕಿನಿಂಗ್ ಸಮಿತಿಗೆ ಅಹವಾಲುಗಳನ್ನು ಸಲ್ಲಿಸುವುದು.

2. ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಆತ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿದವರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಆಯುಧಗಳನ್ನು (ರಿವಾಲ್ವರ್/ಪಿಸ್ತೂಲ್/ಎಸ್.ಬಿ.ಬಿ.ಎಲ್.ಡಿ.ಬಿ.ಬಿ.ಎಲ್/ ಎನ್.ಬಿ.ಎಂ.ಎಲ್/ ಡಿ.ಬಿ.ಎಂ.ಎಲ್/ರೈಫಲ್) ಹತ್ತಿರದ ನಮೂನೆ ನಂಬ್ರ 8 ರ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಹಾಗೂ ಮದ್ದುಗುಂಡು ವ್ಯಾಪಾರಿಗಳಲ್ಲಿ ಅಥವಾ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 01-04-2024 ರೊಳಗೆ ಠೇವಣಿ ಇಡುವುದು. ಈ ಬಗ್ಗೆ ಯಾವುದೇ ಆಕ್ಷೇಪಗಳಿದ್ದಲ್ಲಿ ಹಾಗೂ ತಮ್ಮ ಸ್ವರಕ್ಷಣೆಗೆ ಆಯುಧದ ತೀರಾ ಅವಶ್ಯಕತೆ ಇದೆ ಎಂದಾದಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ದಿನಾಂಕ: 25-03-2024 ರೊಳಗಾಗಿ ಸಂಬಂಧಪಟ್ಟ ಪೂರಕ ದಾಖಲೆಗಳೊಂದಿಗೆ ಹಾಗೂ ಪರವಾನಿಗೆ ಪ್ರತಿಯೊಂದಿಗೆ ಜಿಲ್ಲಾಮಟ್ಟದ ಸ್ಕಿನಿಂಗ್ ಸಮಿತಿಗೆ ಇವರಿಗೆ ಅಹವಾಲುಗಳನ್ನು ಸಲ್ಲಿಸುವುದು.

3. ಅಮಾನತಿನ ಅವಧಿ (ದಿನಾಂಕ: 11-06-2024 ರ ನಂತರ) ಮುಗಿದ ತಕ್ಷಣ ಆಯುಧ ಠೇವಣಿ ಪಡೆದ ಅಧಿಕಾರಿಗಳು/ಡೀಲರರು ಅಂತಹ ಆಯುಧಗಳನ್ನು ಠೇವಣಿದಾರರಿಗೆ ಹಿಂತಿರುಗಿಸುವಂತೆಯೂ, ಪರವಾನಿಗೆದಾರರು ಆಯುಧವನ್ನು ಮರು ಪಡೆದುಕೊಳ್ಳಬಹುದಾಗಿದೆ.

4. ಜಿಲ್ಲಾಧಿಕಾರಿಯವರಿಂದ ಮಂಜೂರಾದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆಯುಧ ಪರವಾನಿಗೆದಾರರು ಜಿಲ್ಲಾಧಿಕಾರಿಯವರ ಅಧಿಕಾರ ವ್ಯಾಪ್ತಿಯೊಳಗೆ ಆಯುಧಗಳನ್ನು ಠೇವಣಿ ಇರಿಸತಕ್ಕದ್ದು.

5. ಆತ್ಮ ರಕ್ಷಣೆ ಹಾಗೂ ಕೃಷಿ ರಕ್ಷಣೆಯ ಸಲುವಾಗಿ ಪಡೆದ ಪರವಾನಿಗೆಯಲ್ಲಿರುವ ಎಲ್ಲಾ ಆಯುಧಗಳನ್ನು ದಿನಾಂಕ. 31-03-2024 ರ ಒಳಗೆ ಪರವಾನಿಗೆದಾರರು ಅಧಿಕೃತ ಆಯುಧ ವಿತರಕರಲ್ಲಿ ಅಥವಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸುವಂತೆ ಆದೇಶಿಸಲಾಗಿದೆ. ನ್ಯಾಷನಲ್ ರೈಫಲ್ ಅಸೋಸಿಯೇಷನ್ ಇದರ ಸದಸ್ಯರಾಗಿದ್ದು ಕ್ರೀಡಾ ಉದ್ದೇಶಕ್ಕೆ ಪರವಾನಿಗೆ ಹೊಂದಿರುವವರಿಗೆ ಈ ಆದೇಶ ಅನ್ವಯಿಸುವುದಿಲ್ಲ.
ನಿಗಧಿತ ಅವಧಿಯಲ್ಲಿ ಅಯುಧವನ್ನು ಠೇವಣಿ ಇರಿಸದೇ ಇದ್ದಲ್ಲಿ ಸಂಬಂಧಪಟ್ಟ ಆಯುಧ ಪರವಾನಗಿದಾರರ ವಿರುದ್ಧ ಕಲಂ 188 ಐಪಿಸಿ ರಂತೆ ಠಾಣಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಾಗುವುದು.

Leave A Reply

Your email address will not be published.