Crime News: ಗೆಳೆಯನ ಜೊತೆ ಫಾರಿನ್ ಟೂರ್ ಹೋಗಲು ಕಿಡ್ನಾಪ್ ನಾಟಕವಾಡಿದ ಮಗಳು; 30 ಲಕ್ಷಕ್ಕೆ ತಂದೆಯ ಬಳಿ ಬೇಡಿಕೆ! ಮಗಳ ನಕಲಿ ನಾಟಕ ಪತ್ತೆಯಾಗಿದ್ದು ಹೀಗೆ…
ಮಧ್ಯಪ್ರದೇಶದ 21 ವರ್ಷದ ಯುವತಿಯೋರ್ವಳು ತಾನು ಕಿಡ್ನ್ಯಾಪ್ ಆಗಿರುವುದಾಗಿ ಸುಳ್ಳು ಹೇಳಿ, ಮೂವತ್ತು ಲಕ್ಷಕ್ಕೆ ಬೇಡಿಕೆ ಇಟ್ಟ ಘಟನೆಯೊಂದು ನಡೆದಿದೆ. ವಿದೇಶ ಪ್ರವಾಸಕ್ಕೆ ಹೋಗಲೆಂದು ಯುವತಿ ಈ ರೀತಿಯ ನಾಟಕವಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಇದನ್ನು ತಿಳಿದ ಪೋಷಕರು ನಿಜಕ್ಕೂ ಶಾಕ್‌ಗೊಳಗಾಗಿದ್ದಾರೆ.
ಏನಿದು ಘಟನೆ?
ಕಾವ್ಯ (21ವರ್ಷ) ಈಕೆ ತನ್ನ ಪೋಷಕರ ಬಳಿ ನೀಟ್ ಪರೀಕ್ಷಾ ತಯಾರಿ ಮಾಡುವುದಾಗಿ ಹೇಳಿ ತನ್ನ ತಾಯಿಯ ಜೊತೆ ರಾಜಸ್ಥಾನದ ಕೋಟಕ್ಕೆ ಬಂದಿದ್ದು, ಅಲ್ಲಿನ ಹಾಸ್ಟೆಲ್‌ವೊಂದರಲ್ಲಿ ತಂಗಿದ್ದಳು. ಇದಾದ ನಂತರ ತಾಯಿ ಊರಿಗೆ ಬಂದಿದ್ದಾರೆ. ಆದರೆ ಕಾವ್ಯ ಕೇವಲ ಮೂರು ದಿನ ಮಾತ್ರ ಅಲ್ಲಿದ್ದು, ನಂತರ ತನ್ನ ಸ್ನೇಹಿತರೊಂದಿಗೆ ಇಂದೋರ್‌ಗೆ ಹೋಗಿದ್ದಾಳೆ. ಅಲ್ಲಿ ತನ್ನ ಸ್ನೇಹಿತರ ಜೊತೆ ಉಳಿದುಕೊಂಡು ಆರಾಮದ ಜೀವನ ನಡೆಸುತ್ತಿದ್ದಳು. ನಂತರ ಇವರೆಲ್ಲ ಸೇರಿ ವಿದೇಶಕ್ಕೆ ಪ್ರವಾಸ ಹೋಗುವ ಕುರಿತು ಪ್ಲ್ಯಾನ್ ಮಾಡಿದ್ದಾರೆ. ಇದಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಹಾಗಾಗಿ ಈಕೆ ಮತ್ತು ಈಕೆಯ ಸ್ನೇಹಿತರು ಸೇರಿ ಅಪಹರಣದ ನಾಟಕವಾಡಿದ್ದಾರೆ.
ಇದನ್ನೂ ಓದಿ: Praveen Nettaru: ಪ್ರವೀಣ್ ನೆಟ್ಟಾರು ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ
ಇದರ ಮುಂದುವರಿದ ಭಾಗವಾಗಿ ಕಾವ್ಯ ತನ್ನನ್ನು ಹಗ್ಗದಿಂದ ಕಟ್ಟಿದ ರೀತಿಯಲ್ಲಿ ಫೋಟೋ ತೆಗೆದು ತನ್ನ ತಂದೆ ರಘುವೀರ ಧಕಡ್ ಅವರ ವಾಟ್ಸಪ್‌ಗೆ ಕಳುಹಿಸಿದ್ದಾಳೆ. ನಂತರ ನಿಮ್ಮ ಮಗಳ ಅಪಹರಣವಾಗಿದೆ. ಆಕೆ ವಾಪಸ್ಸು ಬೇಕಾದರೆ ನಮಗೆ 30 ಲಕ್ಷ ಹಣ ನೀಡಬೇಕು ಎಂದು ಮೆಸೇಜ್ ಮಾಡಿದ್ದಾರೆ.
ತನ್ನ ಮಗಳ ಅಪಹರಣವಾಗಿದೆ ಎಂದು ಆಘಾತಗೊಂಡ ತಂದೆ ಸೀದಾ ಮಧ್ಯಪ್ರದೇಶದಲ್ಲಿರುವ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡಿದ್ದಾರೆ. ನಂತರ ಪೊಲೀಸರು ರಾಜಸ್ಥಾನದ ಪೊಲೀಸ್ ಠಾಣೆಗೆ ಈ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಅಲ್ಲಿನ ಪೊಲೀಸರು ಆಕೆಯ ಪತ್ತೆಗೆ ಬಲೆ ಬೀಸಿದ್ದಾರೆ. ಆಕೆ ವಾಸವಿದ್ದ ಹಾಸ್ಟೆಲ್‌ಗೆ ಭೇಟಿ ನೀಡಿ ವಿಚಾರಣೆ ಮಾಡಿದ್ದಾರೆ. ಆಗ ಆಕೆ ಹಾಸ್ಟೆಲ್ ಈ ಮೊದಲೇ ಬಿಟ್ಟಿರುವುದು ಬೆಳಕಿಗೆ ಬಂದಿದೆ.
ನಂತರ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಅಪಹರಣವಾಗುವ ಮೂರು ಗಂಟೆಯ ಮೊದಲು ಜೈಪುರದ ದುರ್ಗಾಪುರದಲ್ಲಿರುವ ರೈಲು ನಿಲ್ದಾಣದಲ್ಲಿ ಆಕೆ ಇರುವುದು ಕಾಣಿಸಿದೆ. ಕೂಡಲೇ ಪೊಲೀಸರು ಆಕೆಯ ಸ್ನೇಹಿತರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಎಲ್ಲಾ ಸತ್ಯ ಹೇಳಿದ್ದಾರೆ.