Shiradi Ghat Accident: ಶಿರಾಡಿಘಾಟ್‌ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ, ಗ್ಯಾಸ್ ಸೋರಿಕೆ, ವಾಹನ ಸಂಚಾರ ಸ್ಥಗಿತ
Shiradi Ghat: ಶಿರಾಡಿ ಘಾಟ್‌ನಲ್ಲಿ ಗ್ಯಾಸ್ ಟ್ಯಾಂಕರೊಂದು ಪಲ್ಟಿಯಾಗಿ ಬಿದ್ದಿರುವ ಪರಿಣಾಮ ಗ್ಯಾಸ್ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದ್ದು, ಅದರಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದೆ. ಈ ಕಾರಣದಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಾಹನ ಸಂಚಾರ ನಿಲ್ಲಿಸಲಾಗಿದೆ.
ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ : ಬೆಡ್ ರೂಮ್ನಲ್ಲಿ ಡ್ರಗ್ಸ್ ವಶ
ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪೊಲೀಸರು ವಾಹನಗಳನ್ನು ಬದಲಿ ಮಾರ್ಗದಲ್ಲಿ ತೆರಳುವಂತೆ ಸೂಚಿಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಗ್ಯಾಸ್ ಸೋರಿಕೆ ಉಂಟಾಗಿದ್ದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಂಕಿ ಉರಿಸದಂತೆ , ಬೆಂಕಿ ಕಡ್ಡಿ ಗೀರದಂತೆ ಎಚ್ಚರಿಕೆ ವಹಿಸಲಾಗಿದೆ. ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳು ಬದಲಿ ಮಾರ್ಗದ ಮೂಲಕ ಪೊಲೀಸರು ಕಳುಹಿಸುತ್ತಿದ್ದಾರೆ.
ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಂಗಳೂರಿನ ಎಂಆರ್‌ಪಿಎಲ್ ನಿಂದ ತಜ್ಞರ ತಂಡ ಬರಲಿದೆ. ಭಾರೀ ಪ್ರಮಾಣ ಗ್ಯಾಸ್ ಸೋರಿಕೆಯಾಗಿದ್ದು, ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚಾರಣೆ ಮುಗಿಯುವವರೆಗೆ ಸಂಚಾರ ಬಂದ್ ಮಾಡಲಾಗಿದೆ.
ಬದಲಿ ಮಾರ್ಗ ವ್ಯವಸ್ಥೆ ಇಲ್ಲಿದೆ;
ಮಂಗಳೂರು ಧರ್ಮಸ್ಥಳಕ್ಕೆ ಹೋಗುವವರು ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ಮೂಡಿಗೆರೆ ಮೂಲಕ ತೆರಳಬೇಕು.
ಮಂಗಳೂರಿನಿಂದ ಹಾಸನ ಬೆಂಗಳೂರಿಗೆ ತೆರಳುವವರು ಗುಂಡ್ಯ ಬಿಸ್ಲೆ ಹಾಗೂ ಚಾರ್ಮಾಡಿ ಮಾರ್ಗವಾಗಿ ತೆರಳಬೇಕು.