Ram Mandir Webhack: 264 ಸರ್ಕಾರಿ ವೆಬ್ಸೈಟ್ ಹ್ಯಾಕ್ ಮಾಡಲು ಯತ್ನ : ಪಾಕ್, ಚೀನಾ ಹ್ಯಾಕರ್ ಗಳ ಸಂಚು
ಅಯೋಧ್ಯೆಯ ಶ್ರೀ ರಾಮಮಂದಿರದ ಉದ್ಘಾಟನೆ ಸಮಯದಲ್ಲಿ ಮಂದಿರದ ವೆಬ್‌ಸೈಟ್ ಕೇಂದ್ರ ಸರ್ಕಾರದ ಪ್ರಸಾರ ಭಾರತಿ ಸೇರಿದಂತೆ ಹಲವು ಸರ್ಕಾರಿ ವೆಬ್ ಸೈಟ್ಗಳನ್ನು ಚೀನಾ ಹಾಗೂ ಪಾಕಿಸ್ತಾನಿ ಹ್ಯಾಕರ್‌ಗಳು ಹ್ಯಾಕ್ ಮಾಡಲು ಯತ್ನ ನಡೆಸಿದ್ದರು ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಈ ರೀತಿಯ ದಾಳಿಯನ್ನು ಮೊದಲೇ ನಿರೀಕ್ಷಿಸಿದ್ದ ಭಾರತ ಸರ್ಕಾರವು ಹ್ಯಾಕರ್‌ಗಳ 1244 ಐಪಿ ವಿಳಾಸಗಳನ್ನು ನಿರ್ಬಂಧಿಸಿ ದಾಳಿಗಳನ್ನು ತಡೆಗಟ್ಟಿದೆ. ‘ರಾಮಮಂದಿರ ಉದ್ಘಾಟನೆಗೂ ಮುನ್ನ ಪ್ರಸಾರ ಭಾರತಿ, ರಾಮಮಂದಿರ ವೆಬ್, ಅಯೋಧ್ಯೆ ವಿಮಾನ ನಿಲ್ದಾಣ, ಯುಪಿ ಪೊಲೀಸ್, ಯುಪಿ ಪ್ರವಾಸೋದ್ಯಮ ಮತ್ತು ಪವರ್‌ಗ್ರಿಡ್ ಸೇರಿದಂತೆ 264 ವೆಬ್‌ಸೈಟ್‌ಗಳ ಮೇಲೆ ಚೀನಾ-ಪಾಕ್ ಹ್ಯಾಕರ್ ಗಳು ಕಣ್ಣಿಟ್ಟಿದ್ದರು.
ಇದನ್ನರಿತ ಸರ್ಕಾರ ಮೊದಲು ಹ್ಯಾಕಿಂಗ್‌ಗೆ ಯತ್ನಿಸುತ್ತಿದ್ದ140 ಐಪಿ ಅಡ್ರೆಸ್‌ಗಳಿಗೆ ಇಂಟರ್ನೆಟ್ ಸೌಲಭ್ಯ ನಿಲ್ಲಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು. ಆದರೂ ಹ್ಯಾಕಿಂಗ್ ಯತ್ನ ಹೆಚ್ಚಾದಾಗ 1244 ಐಪಿ ವಿಳಾಸಗಳನ್ನು ನಿರ್ಬಂಧಿಸಲಾಯಿತು. ಆಗ ದಾಳಿ ನಿಂತಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.