Crime: ಹಫ್ತಾ ಕೊಡಲು ನಿರಾಕರಣೆ; ಗುತ್ತಿಗೆದಾರನ ಕೈ ಬೆರಳು ಕಟ್

ಹಫ್ತಾ ಕೊಡಲು ನಿರಾಕರಿಸಿದ ಗುತ್ತಿಗೆದಾರನ ಕೈ ಬೆರಳು ಕತ್ತರಿಸಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿರುವ ಘಟನೆ ಎಚ್ ಎಎಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಮನೆ ಮಾರಲು ಒಪ್ಪದ 74 ರ ಹರೆಯದ ತಂದೆಗೆ ಮಗನಿಂದ ಹತ್ಯೆ ಬೆದರಿಕೆ

ಇಸ್ಲಾಂಪುರದ ನಾಜಿರ್ ಖಾನ್ (39) ಬೆರಳು ಕಳೆದುಕೊಂಡವರು. ಗಾಯಾಳು ನೀಡಿರುವ ದೂರಿನ ಅನ್ವಯ ತುಫೇಲ್ ಅಲಿಯಾಸ್ ಛೋಟಾ ನಾಗೇಶ್ ಹಾಗೂ ಆತನ ಸಹಚರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತುಫೇಲ್ (29)ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪೇಂಟ್ ಗುತ್ತಿಗೆದಾರ ನಾಜಿ‌ರ್ ಖಾನ್, ಪತ್ನಿ ಹಾಗೂ ಮೂವರು ಮಕ್ಕಳ ಜತೆ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ತುಫೇಲ್ ಕಳೆದ ಆರು ತಿಂಗಳಿಂದ ‘ಸ್ವಂತ ಮನೆಯಲ್ಲಿ ವಾಸಿಸುತ್ತಿರುವ ಎಲ್ಲರೂ ಹಫ್ತಾ ನೀಡಬೇಕು’ ಎಂದು ಬೆದರಿಸಿದ್ದ. ಹಫ್ತಾ ಕೊಡಲು ನಿರಾಕರಿಸಿದ್ದಕ್ಕೆ ಎದುರಿಗೆ ಸಿಕ್ಕಾಗಲೆಲ್ಲಾ ನಿಂದಿಸಿ ಜೀವ ಬೆದರಿಕೆ ಹಾಕುತ್ತಿದ್ದ.

“ಫೆ.25ರಂದು ತಡರಾತ್ರಿ ಮನೆ ಮುಂದೆ ಬೀದಿ ನಾಯಿಗಳಿಗೆ ಊಟ ಹಾಕುತ್ತಿರುವಾಗಲೇ ತುಫೇಲ್ ತನ್ನ ಸಹಚರನ ಜತೆ ಬೈಕ್‌ನಲ್ಲಿ ಆಗಮಿಸಿ ಏಕಾಏಕಿ ‘ಹಫ್ತಾ ಕೊಡಲ್ವಾ’ ಎಂದು ನಿಂದಿಸಿ ಲಾಂಗ್‌ನಿಂದ ಬೀಸಿದ್ದ. ತಪ್ಪಿಸಿಕೊಳ್ಳುವ ಸಲುವಾಗಿ ಪಾತ್ರೆ ಅಡ್ಡಹಿಡಿದ ಪರಿಣಾಮ ಲಾಂಗ್ ಏಟು ಬಲಗೈನ ತೋರು ಬೆರಳಿಗೆ ಬಿದ್ದು ತುಂಡಾಗಿ ಬಿದ್ದಿತು.

ಮಧ್ಯದ ಬೆರಳಿಗೂ ಗಾಯವಾಗಿದೆ ಎಂದು ನಾಚೆರ್ ದೂರಿನಲ್ಲಿ ವಿವರಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

“ತುಫೇಲ್‌ನ ಕೃತ್ಯದಿಂದ ಹೆದರಿ ಮನೆಯೊಳಗೆ ಓಡಿಹೋಗಿ ತಪ್ಪಿಸಿಕೊಂಡಿದ್ದ ನಾಜಿರ್ ಬಳಿಕ ಸ್ನೇಹಿತರ ಜತೆಗೂಡಿ ತುಂಡಾಗಿದ್ದ ಬೆರಳಿನ ಸಮೇತ ಆಸ್ಪತ್ರೆಗೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಅವರನ್ನು ಸಂಪರ್ಕಿಸಿ ಕುರಿತು ದೂರು ಪಡೆದು ಪ್ರಕರಣ ದಾಖಲಿಸಲಾಯಿತು. ಜತೆಗೆ, ಕ್ಷಿಪ್ರ ತನಿಖೆ ನಡೆಸಿ ಆರೋಪಿ ತುಫೇಲ್‌ ನನ್ನು ಬಂಧಿಸಲಾಯಿತು,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಗಾಂಜಾ ಮಾರಾಟ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ತುಫೇಲ್ ಭಾಗಿಯಾಗಿದ್ದು, 2023ರ ಅಂತ್ಯದಲ್ಲೂ ಬಂಧಿಸಲಾಗಿತ್ತು.

“ನಾಜಿರ್ ಪೊಲೀಸರಿಗೆ ನನ್ನ ಬಗ್ಗೆ ಮಾಹಿತಿ ನೀಡುತ್ತಿದ್ದ, ಜೈಲಿಗೆ ಹೋಗಲು ಕಾರಣನಾಗಿದ್ದ, ಹೀಗಾಗಿ, ಹಲ್ಲೆ ಮಾಡಿದ್ದೆ. ಹಫ್ತಾಗೆ ಬೇಡಿಕೆ ಇಟ್ಟಿರಲಿಲ್ಲ” ಎಂದು ತುಫೇಲ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

Leave A Reply

Your email address will not be published.