ISRO: ರಾತ್ರೋರಾತ್ರಿ ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಇಸ್ರೋ!!
ISRO: ಚಂದ್ರಯಾನ -3ರ ಯಶಸ್ವಿ ಮೂಲಕ ಇಡೀ ವಿಶ್ವವೇ ಭಾರತವನ್ನು ಕೊಂಡಾಡುವಂತೆ ಮಾಡಿರುವ ದೇಶದ ಹೆಮ್ಮೆ ಇಸ್ರೋ ಇದೀಗ ಮತ್ತೊಂದು ಮಹಾತ್ಕಾರ್ಯದತ್ತ ದೃಷ್ಟಿ ಹರಿಸಿದೆ. ಈ ಕುರಿತಂತೆ ರಾತ್ರೋರಾತ್ರಿ ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
ಚಂದ್ರಯಾನ-3ರ(Chandrayan-3) ಯಶಸ್ಸಿನ ಬೆನ್ನಲ್ಲೇ ಸೂರ್ಯನ ಬೆನ್ನತ್ತಿ ಹೊರಟ ಇಸ್ರೋ(ISRO) ಅದರಲ್ಲೂ ಯಶಸ್ಸುಕಂಡು ಭಾರತೀಯರೆಲ್ಲರೂ ಹಿರಿ ಹಿರಿ ಹಿಗ್ಗುವಂತೆ ಮಾಡಿದೆ. ಇದಿಷ್ಟು ಸಾಲದಂತೆ ಇದೀಗ ಮತ್ತೆ ಮಂಗಳಯಾನದ(Mangalayana) ಹೊಸ ಯೋಜನೆಯನ್ನು ರೂಪಿಸುತ್ತಿದೆ. ಇಷ್ಟೇ ಅಲ್ಲದೆ ಮಂಗಳನ ಮೇಲೆ ಪುಟ್ಟ ಹೆಲಿಕಾಪ್ಟರ್ ಹಾರಿಸಲೂ ಚಿಂತನೆ ನಡೆಸಿ ಇದರ ತಯಾರಿಯಲ್ಲಿ ಮುಳುಗಿದೆ.
ಹೌದು, ಇನ್ನು ಕೆಲವೇ ಸಮಯದಲ್ಲಿ ಚಂದ್ರಯಾನ-3ರ ರೀತಿ, ಮಂಗಳ ಗ್ರಹದ ಮೇಲೆ ಭಾರತದ ನೌಕೆ ಕಾಲಿಡಲಿದೆ. ಮಂಗಳಯಾನ-2 ಮಿಷನ್‌ನಲ್ಲಿ ಈ ಬಾರಿ ಇಸ್ರೋ ಲ್ಯಾಂಡರ್ ಜೊತೆಗೆ ನಾಸಾ ಕಳಿಸಿದ್ದಂಥ ಇಂಗೆನ್ಯುಟಿ ಹೆಲಿಕಾಪ್ಟರ್‌ಅನ್ನೂ ಕಳಿಸಲಿದೆ. ನಾಸಾದಂತೆಯೇ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕೂಡ ತನ್ನ ಮುಂದಿನ ಮಂಗಳಯಾನ ಕಾರ್ಯಾಚರಣೆಯಲ್ಲಿ ಪುಟ್ಟ ಹೆಲಿಕಾಪ್ಟರ್ ಕಳುಹಿಸಲು ಯೋಜನೆ ರೂಪಿಸಿದೆ. ಈ ಮಿಷನ್ ಬಹುಶಃ 2030 ರ ಸುಮಾರಿಗೆ ಜಾರಿಗೆ ಬರಬಹುದು ಎನ್ನಲಾಗಿದೆ.
ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯದ ವಿಜ್ಞಾನಿ ಜೈದೇವ್ ಪ್ರದೀಪ್ ಇತ್ತೀಚೆಗೆ ವೆಬ್‌ನಾರ್‌ನಲ್ಲಿ ಇಸ್ರೋ ಮಂಗಳ ಗ್ರಹಕ್ಕೆ ಹೆಲಿಕಾಪ್ಟರ್ ಕಳುಹಿಸಲು ಸಿದ್ಧತೆ ನಡೆಸುತ್ತಿದೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಅಂದಹಾಗೆ ಇದಕ್ಕೂ ಮೊದಲು ಭಾರತವು ಮಂಗಳಯಾನವನ್ನು ಅಂದರೆ ಮಾರ್ಸ್ ಆರ್ಬಿಟರ್ ಮಿಷನ್ (MOM) ಅನ್ನು ನವೆಂಬರ್ 2013 ರಲ್ಲಿ ಕಳುಹಿಸಿತ್ತು. ಇದು ಸೆಪ್ಟೆಂಬರ್ 2014 ರಲ್ಲಿ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿತ್ತು. ಈ ನೌಕೆಯು ಮಂಗಳ ಗ್ರಹದ ಸುತ್ತ ಸುತ್ತುವ ಬಾಹ್ಯಾಕಾಶ ನೌಕೆಯಾಗಿತ್ತು. ಇಸ್ರೋ ಇಟ್ಟ ನಿರೀಕ್ಷೆಗಿಂತ ಹೆಚ್ಚು ಕೆಲಸ ಮಾಡಿದ್ದ ಮಾಮ್, 2022ರಲ್ಲಿ ತನ್ನ ಸಂಪರ್ಕವನ್ನು ಕಳೆದುಕೊಂಡಿತು.
ಇನ್ನು ನಾಸಾದ ಹೆಲಿಕಾಪ್ಟರ್ ಫೆಬ್ರವರಿ 2021 ರಲ್ಲಿ ಜೆಜೆರೊ ಕ್ರೇಟರ್‌ನಲ್ಲಿ ಪರ್ಸೆವೆರೆನ್ಸ್ ರೋವರ್‌ನೊಂದಿಗೆ ಇಂಜೆನ್ಯೂಟಿ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಇಳಿದಿತ್ತು. ಇಂಜೆನ್ಯೂಟಿ ತನ್ನ ಸಂಪೂರ್ಣ ಕಾರ್ಯಾಚರಣೆಯಲ್ಲಿ ಒಟ್ಟು ಎರಡು ಗಂಟೆಗಳ ಕಾಲ ಹಾರಾಟ ನಡೆಸಿತು. ಒಟ್ಟಾರೆ 17 ಕಿಲೋಮೀಟರ್ ದೂರವನ್ನು ಕ್ರಮಿಸಿತ್ತು.