Forest Protection: ಅರಣ್ಯ ರಕ್ಷಣೆಗಾಗಿ ದೂರ ಸಂವೇದಿ ತಂತ್ರಜ್ಞಾನ

ಕಾಡ್ಗಿಚ್ಚೆಂಬ ಕೆಂಬೂತವನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ದೂರ ಸಂವೇದಿ ತಂತ್ರಜ್ಞಾನವನ್ನು ಮತ್ತೊಷ್ಟು ಅಭಿವೃದ್ಧಿ ಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇತ್ತೀಚೆಗೆ ಜಾಗತಿಕ ತಾಪಮಾನದಿಂದಾಗಿ ಹೆಚ್ಚುತ್ತಿರುವ ಕಾಡ್ಗಿಚ್ಚು ಲೆಕ್ಕವಿಲ್ಲದಷ್ಟು ಅರಣ್ಯ ಪ್ರದೇಶವನ್ನು ದಹಿಸುತ್ತಿದೆ. ಕಾಡ್ಗಿಚ್ಚಿಗೆ ಬ್ರೇಕ್ ಹಾಕಲು ಅರಣ್ಯ ಇಲಾಖೆ ಅಗ್ನಿವೀರರನ್ನು ಹಾಗೂ ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಸಮಸ್ಯೆಯನ್ನು ಹತೋಟಿಗೆ ತರುವಲ್ಲಿ ದೂರ ಸಂವೇದಿ ತಂತ್ರಜ್ಞಾನವು ಸಹಕಾರಿಯಾಗಲಿದೆ.

2023 ರಲ್ಲಿ ಕೆನಡಾ ದೇಶವು ಅತಿ ಹೆಚ್ಚು ಕಾಡ್ಗಿಚ್ಚಿಗೆ ತುತ್ತಾಗಿರುವ ದೇಶವಾಗಿದೆ. ಸುಮಾರು18 ಮಿಲಿಯನ್ ಹೆಕ್ಟೇರ್ ಪ್ರದೇಶ ನಾಶವಾಗಿದೆ. ಎನ್.ಸಿ.ಇ.ಐ ವರದಿಯ ಅನುಸಾರ 2023 ರ ಸಾಲಿನಲ್ಲಿ ವಿಶ್ವದಾದ್ಯಂತ ಸುಮಾರು 55,571 ಸ್ಥಳಗಳಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಆ ಪೈಕಿ 2,633,636 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಇನ್ನೂ ಕರ್ನಾಟಕವೊಂದರಲ್ಲೇ ಸುಮಾರು 3793.13 SQ ಕಿಲೋಮೀಟರ್ ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಇದರಿಂದ ಸುಮಾರು 2170 ಮೆಗಾಟನ್ ನಷ್ಟು ಇಂಗಾಲ ಹೊರಸುಸುವಿಕೆ ಉಂಟಾಗಿದ್ದು, ಆ ಪೈಕಿ ಶೇ. 22ರಷ್ಟು ಕೆನಡಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಬಿಡುಗಡೆಯಾಗಿದೆ. ಈ ಹಿಂದೆ ಕಾಡ್ಗಿಚ್ಚು ಸಂಭವಿಸಿದರೆ ಅದು ದುಪ್ಪಟ್ಟಾಗುವವರೆಗೂ ಗಮನಕ್ಕೆ ಬರುತ್ತಿರಲಿಲ್ಲ. ಆದರೆ ದೂರ ಸಂವೇದಿ ತಂತ್ರಜ್ಞಾನದಿಂದಾಗಿ ಅತ್ಯಂತ ವೇಗವಾಗಿ ಉಪಗ್ರಹದ ಮೂಲಕ ಕಾಡ್ಗಿಚ್ಚು ಸಂಭವಿಸಿದ ಸ್ಥಳ ಯಾವುದು ಎಂಬ ಮಾಹಿತಿ ಅರಣ್ಯ ಇಲಾಖೆಗೆ ದೊರೆಯುತ್ತದೆ.

ದೂರ ಸಂವೇದಿ ತಂತ್ರಜ್ಞಾನ ಎಂಬುದು ಉಪಗ್ರಹದ ನೆರವಿನಿಂದ ಮಾಹಿತಿ ನೀಡುವ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನವು ಹಲವು ವರ್ಷಗಳಿಂದ ಬಳಕೆಯಾಗುತ್ತಿದೆ. ಈ ಹಿಂದೆ ನಾಸಾದಿಂದ ಕಾಡ್ಗಿಚ್ಚಿನ ಮಾಹಿತಿ ಮೊದಲು ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರಕ್ಕೆ ಬಂದು ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆಗೆ ಬರುತ್ತಿತ್ತು. ನಂತರ ಆಯಾ ರಾಜ್ಯಗಳಿಗೆ ಮಾಹಿತಿ ತಲುಪುತ್ತಿತ್ತು. ಈ ಪ್ರಕಿಯೆ ನಡೆಯಲು ಸಮಯವನ್ನು ತೆಗೆದುಕೊಳ್ಳುತ್ತಿದ್ದರಿಂದ ಶೀಘ್ರವಾಗಿ ಮಾಹಿತಿ ತಿಳಿಯಲು ಕಷ್ಟವಾಗುತ್ತಿತ್ತು. ಆದರೆ ಈಗ ನೇರವಾಗಿ ನಾಸಾದಿಂದ ಇಸ್ರೋದ ಎನ್.ಆರ್.ಎ.ಸಿ ಗೆ ಬಂದ ಮಾಹಿತಿ ಕೆ.ಎಸ್.ಆ.ರ್.ಎಸ್.ಸಿ ಗೆ ಬರುತ್ತದೆ. ನಂತರ ಮಾಹಿತಿ ಶೀಘ್ರವಾಗಿ ಅರಣ್ಯ ಇಲಾಖೆಯ ಸಂಬಂಧಿತ ವಲಯಕ್ಕೆ ರವಾನೆಯಾಗುತ್ತದೆ. ಈ ಮೂಲಕ ತಕ್ಷಣವೇ ಸ್ಪಂದಿಸಿ ಬೆಂಕಿ ನಂದಿಸಲು ಸಾಧ್ಯವಾಗುವ ಮುಖೇನ ಹೆಚ್ಚಿನ ಅರಣ್ಯ ನಾಶವನ್ನು ತಡೆಯುತ್ತದೆ. ಈ ತಂತ್ರಜ್ಞಾನದಲ್ಲಿ ಕಾಡ್ಗಿಚ್ಚಿನ ಅಲರ್ಟ್ ಬಂದ ನಂತರ ಫೀಡ್ ಬ್ಯಾಕ್ ಹಾಕಲು ಅವಕಾಶವಿದೆ. ಅಗ್ನಿಯನ್ನು ನಂದಿಸುತ್ತಿರುವ ಚಿತ್ರಗಳನ್ನು ಸಹ ಅಪ್ಲೋಡ್ ಮಾದುವುದರ ಜೊತೆಗೆ ಅಗ್ನಿ ನಿಯಂತ್ರಣಕ್ಕೆ ಬಂದಿದೆಯೋ ಇಲ್ಲವೋ ಎಂಬ ಮಾಹಿತಿಯು ಲಭ್ಯವಾಗಲಿದೆ ಎಂಬುದು ತಜ್ಞರು ಸ್ಪಷ್ಟಪಡಿಸುತ್ತಾರೆ.

ಈ ತಂತ್ರಜ್ಞಾನದ ಮೂಲಕ ಅರಣ್ಯ ರಕ್ಷಣೆಗೆ ಹೆಚ್ಚಿನ ಸಹಕಾರ ಸಿಗಲಿದ್ದು, ಇದರ ಅಭಿವೃದ್ಧಿ ಕಾರ್ಯ ಶೀಘ್ರವಾಗಿ ನಡೆಯಬೇಕಿದೆ.

Leave A Reply

Your email address will not be published.