

Bantwala: ವಿಟ್ಲ ಸಮೀಪದ ಪಡಿ ಬಾಗಿಲು ಎಂಬಲ್ಲಿ ಎಡು ರಿಕ್ಷಾಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಈ ಘಟನೆಯಲ್ಲಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಜೊತೆಗೆ ಹಲವರು ಗಾಯಗೊಂಡಿರುವ ಕುರಿತು ವರದಿಯಾಗಿದೆ.
ಭಾನುವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು, ಈ ಘಟನೆ ಸಂಬಂಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಿಕ್ಷಾ ಚಾಲಕ ರವಿ ಕುಮಾರ್ ಅವರ ಅಜಾಗರೂಕತೆಯ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಮತ್ತೊಂದು ಆಟೋ ರಿಕ್ಷಾದಲ್ಲಿದ್ದ ಪ್ರಯಾಣಿಕರೊಬ್ಬರು ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಅಳಿಕೆ ಗ್ರಾಮ ಮತ್ತು ಅಂಚೆ ನಿವಾಸಿ ಶ್ರೀಮತಿ ಶರ್ಮಿಳ ಎಂಬುವವರು ನೀಡಿದ ದೂರಿನಂತೆ ಈ ಪ್ರಕರಣ ದಾಖಲು ಮಾಡಲಾಗಿದೆ. ತನ್ನ ಮಗಳೊಂದಿಗೆ, ಹಮೀದ್ ಎಂಬುವವರ ಆಟೋ ರಿಕ್ಷಾದಲ್ಲಿ ಇತರ ಪ್ರಯಾಣಿಕರ ಜೊತೆ ವಿಟ್ಲ ಕಡೆಗೆ ಬರುತ್ತಿದ್ದಾಗ, ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಪಡಿಬಾಗಿಲು ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು ಚಾಲಕ ರವಿಕುಮಾರ್ ಚಲಾಯಿಸುತ್ತಿದ್ದು, ಇವರ ಅಜಾಗರೂಕತೆ, ಮತ್ತು ದುಡುಕುತನದ ಕಾರಣದಿಂದ ಅಪಘಾತ ಸಂಭವಿಸಿದೆ ಎಂದು ದೂರು ನೀಡಿದ್ದಾರೆ.
ರಿಕ್ಷಾ ಮಗುಚಿ ಬಿದ್ದಿದ್ದು ಅಲ್ಲಿ ಸೇರಿದ್ದವರೆಲ್ಲ ನಂತರ ರಿಕ್ಷಾವನ್ನು ಎತ್ತಿದ್ದು ರಿಕ್ಷಾದೊಳಗಿದ್ದ ಚಾಲಕ ಹಮೀದ್ ಅವರನ್ನು ಸೇರಿ ಉಳಿದ ಪ್ರಯಾಣಿಕರನ್ನೆಲ್ಲ ಉಪಚರಿಸಿದ್ದಾರೆ. ನಂತರ ಗಾಯಗೊಂಡವರನ್ನು ಬೇರೆ ಬೇರೆ ವಾಹನಗಳಲ್ಲಿ ಚಿಕಿತ್ಸೆಗೆಂದು ವಿಟ್ಲ ಸಮುದಾರ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ಅಲ್ಲಿ ವೈದ್ಯರು ಗಾಯಗೊಂಡವರನ್ನೆಲ್ಲ ಪರಿಶೀಲನೆ ಮಾಡಿದ್ದಾರೆ. ತೀವ್ರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆಂದು ಬೇರೆ ಬೇರೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಾಳುಗಳ ಪೈಕಿ ಅಮ್ಮು ಮೂಲ್ಯ ಎಂಬುವವರು ತೀವ್ರ ಗಾಯಗೊಂಡಿದ್ದು ಮೃತ ಹೊಂದಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.













