Bharat Bandh: ಫೆಬ್ರವರಿ 16 ರಂದು ಭಾರತ್ ಬಂದ್, ಇಂದು ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆ
Bharat Bandh :ಭಾರತೀಯ ಕಿಸಾನ್ ಯೂನಿಯನ್ ಬಣದ ನಾಯಕ ಜೋಗಿಂದರ್ ಸಿಂಗ್ ಉಗ್ರನ್ ಫೆಬ್ರವರಿ 16 ರಂದು ಭಾರತ್ ಬಂದ್ (Bharat Bandh) ಘೋಷಿಸಿದ್ದಾರೆ. ಪಂಜಾಬ್ ಮತ್ತು ಹರಿಯಾಣದ 26 ರೈತ ಸಂಘಟನೆಗಳು ಫೆಬ್ರವರಿ 13 ರಂದು ದೆಹಲಿ ಮೆರವಣಿಗೆಗೆ ಸಂಪೂರ್ಣ ಸಿದ್ಧತೆ ನಡೆಸಿವೆ. ಪಂಜಾಬ್‌ನ ಹೆಚ್ಚಿನ ಸಂಖ್ಯೆಯ ರೈತರು ಹರಿಯಾಣ ಗಡಿಯಲ್ಲಿ ಸೇರಲು ಪ್ರಾರಂಭಿಸಿದ್ದಾರೆ. ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಎಲ್ಲಾ ರೈತ ಸಂಘಟನೆಗಳು ಹಾಗೂ ಉದ್ಯಮಿಗಳಿಗೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಹರಿಯಾಣ ಸರ್ಕಾರವು ಪಂಜಾಬ್ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ.
15 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. ಇಂದು(ಫೆ.12ರಂದು) ಚಂಡೀಗಢದಲ್ಲಿ ಕೇಂದ್ರ ಸಚಿವರು ಹಾಗೂ ರೈತ ಮುಖಂಡರ ನಡುವೆ ಮಹತ್ವದ ಸಭೆ ನಡೆಯಲಿದೆ. ಈ ಸಭೆಯ ಎರಡನೇ ಸುತ್ತಿನ ಸಭೆಯು ಮಹಾತ್ಮಾ ಗಾಂಧಿ ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್, ಸೆಕ್ಟರ್ -26 ಚಂಡೀಗಢದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.
ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರೈ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ವಿವಿಧ ರೈತ ಸಂಘಟನೆಗಳ 10 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಫೆ.8ರಂದು ರೈತ ಸಂಘಟನೆಗಳು ಹಾಗೂ ಕೇಂದ್ರ ಸಚಿವರ ಸುತ್ತಿನ ಸಭೆ ನಡೆದಿದ್ದು, ಸಭೆಯಲ್ಲಿ ಕೆಲ ಬೇಡಿಕೆಗಳನ್ನು ಅಂಗೀಕರಿಸಲಾಗಿತ್ತಾದರೂ ಎಂಎಸ್‌ಪಿಯನ್ನು ಕಾನೂನನ್ನಾಗಿ ಮಾಡುವುದು ಸೇರಿದಂತೆ ಕೆಲವು ಬೇಡಿಕೆಗಳ ಬಗ್ಗೆ ಒಮ್ಮತಕ್ಕೆ ಬರಲಾಗಲಿಲ್ಲ.
ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ಅಂಗೀಕರಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳು ಸಾಮಾಜಿಕ ಜಾಲತಾಣದಲ್ಲಿ, ‘ಕೇಂದ್ರ ಸರ್ಕಾರವು ರೈತರೊಂದಿಗೆ ಕುಳಿತು ಮಾತನಾಡಲು ನಾನು ವಿನಂತಿಸುತ್ತೇನೆ … ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಒಪ್ಪಿಕೊಳ್ಳಿ … ಪಂಜಾಬ್‌ನ ರೈತರು ದೇಶಕ್ಕೆ ಆಹಾರ ನೀಡುತ್ತಾರೆ … ನಮ್ಮ ಮೇಲೆ ಇಷ್ಟು ದ್ವೇಷವನ್ನು ತೋರಿಸಬೇಡಿ”
ಸಮರಾಳದಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿ ಪಾದಯಾತ್ರೆಯಲ್ಲಿ ರೈತರೊಂದಿಗೆ ಇದ್ದೇನೆ ಎಂದು ಹೇಳಿದರು. 10 ವರ್ಷಗಳಲ್ಲಿ ಮೋದಿ ಸರಕಾರ ರೈತರನ್ನು ಹಾಳು ಮಾಡಿದೆ ಎಂದರು. 2024 ರಲ್ಲಿ ನಮ್ಮ ಸರ್ಕಾರ ರಚನೆಯಾದರೆ, ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗುತ್ತದೆ. ಮೋದಿ ಸರ್ಕಾರ ರೈತರ ಚಳವಳಿಯನ್ನು ಕೊನೆಗಾಣಿಸಲು ಬಯಸಿದೆ ಆದರೆ ಕಾಂಗ್ರೆಸ್ ರೈತರೊಂದಿಗೆ ನಿಂತಿದೆ.