Arecanut Cultivation: ಅಡಿಕೆಯ ರೋಗಗಳು ಮತ್ತು ಹತೋಟಿ ಕ್ರಮಗಳು!!

ನಮ್ಮ ಅಡಿಕೆ ಬೆಳೆಗಾರರು ಸದ್ಯಕ್ಕೆ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಟ್ಟಿರುವಂತೆ ಕಾಣುತ್ತದೆ . ಆಧುನಿಕ ಯಂತ್ರೋಪಕರಣಗಳು ಔಷಧಿಗಳ ಬಳಕೆ ಯಿಂದ ರೋಗರುಜಿನಗಳ ಹತೋಟಿ ಕೆಲವೆಡೆ ಸಾಧ್ಯವಾಗಿದೆ. ಕೆಲವೆಡೆ ಸಾಧ್ಯವಾಗಿಲ್ಲ. ನಮ್ಮ ರೈತರು ರಸಗೊಬ್ಬರಗಳನ್ನು ಬಳಸುತ್ತಿರುವುದರಿಂದ ರೋಗರುಜಿನಗಳು ಹೆಚ್ಚುತ್ತಿವೆ, ಎಂದು ಹೇಳಬಹುದಾ? ಅಥವಾ ಭೂಮಿಯ ಸಮಸ್ಯೆಯೆ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ವ್ಯವಸಾಯಕರಲ್ಲಿ ಕಾಡುತ್ತವೆ.

ಇದನ್ನೂ ಓದಿ: Kukke Subramanya: ಕುಕ್ಕೇ ಸೇರಿದ ನಾಗಲಿಂಗ!! ಅಯೋಧ್ಯೆಗೆ ಸಸಿ ಕಳುಹಿಸಿದ್ದ ವಿನೇಶ್ ಪೂಜಾರಿಯಿಂದ ಕುಕ್ಕೆಗೆ ಸಸಿ ವಿತರಣೆ

ಅಡಿಕೆಗೆ ಸಾಮಾನ್ಯವಾಗಿ 4 -5 ತರಹದ ರೋಗಗಳು ಕಂಡು ಬರುತ್ತದೆ. ಅಡಿಕೆಗೆ ಸಹಜವಾಗಿ ಕೀಟಗಳಿಂದ ಮತ್ತು ಶಿಲೀಂದ್ರ ಗಳಿಂದ ರೋಗಗಳು ಬರುವ ಸಾಧ್ಯತೆ ಇರುತ್ತದೆ . ಸಾಮಾನ್ಯವಾಗಿ ಅಡಿಕೆಗೆ ಬರುವ ರೋಗಗಳು ಎಂದರೆ, ಎಲೆಚುಕ್ಕೆ ರೋಗ, ಸಿಂಗಾರ ಒಣಗುವ ರೋಗ, ಸುಳಿ ಕೊಳೆ ರೋಗ , ಚಂಡಿ ಕೊಳೆರೋಗ, ಅಣಬೆ ರೋಗ ಮುಂತಾದವುಗಳು ಸಹಜವಾಗಿ ರೈತರನ್ನು ಸಂಕಷ್ಟಕ್ಕೆ ದೂಡಿವೆ …. ಈ ರೋಗಗಳ ಲಕ್ಷಣಗಳು ಮತ್ತು ಹತೋಟಿ ಕ್ರಮಗಳನ್ನು ತಿಳಿಯೋಣ.

ಎಲೆಚುಕ್ಕೆ ರೋಗ : ಅಡಿಕೆಯ ಗರಿ ಅಥವಾ ಎಲೆಯ ಮೇಲೆ ಬೂದು ಮಿಶ್ರಿತ ಸಣ್ಣ ಸಣ್ಣ ಚುಕ್ಕಿಗಳು ಕಂಡುಬರುತ್ತದೆ. ಕೆಲದಿನಗಳಲ್ಲಿ ಸಣ್ಣ ಸಣ್ಣ ಚುಕ್ಕಿಗಳು ಕಲೆತು ಗರಿ ಒಣಗುವ ಸಾಧ್ಯತೆ ಇರುತ್ತದೆ. ಈ ರೋಗ ಹೆಚ್ಚಾದರೆ ಗಿಡದ ಎಲ್ಲಾ ಗರಿಗಳು ಒಣಗಿ ಹೋಗುತ್ತವೆ.

1 ಲೀಟರ್ ನೀರಿಗೆ 2 ಗ್ರಾಂ ಮೈಕೋ ಜಾಬ್ ಔಷಧವನ್ನು ಗರಿಗಳಿಗೆ ಸಿಂಪಡಿಸಿ ಅಥವಾ ಒಂದು ಲೀಟರ್ ನೀರಿಗೆ 3 ಗ್ರಾಂ ಕಾಪರ್ ಆಕ್ಸಿ ಕ್ಲೋರೈಡ್ ಅನ್ನು ಬಳಸಿ ಸಿಂಪಡಿಸಿ. ರೋಗ ಹತೋಟಿ ಯಾಗುತ್ತದೆ.

ಅಡಿಕೆ ಸಿಂಗಾರ ಒಣಗುವ ರೋಗ : ಈ ರೋಗವು ಸಾಮಾನ್ಯವಾಗಿ ಗಿಡಗಳ ಸಿಂಗಾರ ಅಥವಾ ಹೊಂಬಾಳೆಯ ಚೀಲ ಕಳಚದೆ ಒಣಗಿರುತ್ತದೆ. ಜೊತೆಗೆ ಗಿಡದಲ್ಲಿ ಫಸಲಿನ ಪ್ರಮಾಣ ಸಹ ಕಡಿಮೆಯಾಗಿರುತ್ತದೆ. ಇಂತಹ ಸಮಸ್ಯೆ ಕಂಡರೆ ಒಣಗಿದ ಸಿಂಗಾರವನ್ನು ಸುಟ್ಟುಹಾಕಬೇಕು. ಇದರಿಂದ ರೋಗ ಹರಡುವುದು ಸಹ ತಡೆಯಬಹುದು. 1 ಲೀಟರ್ ನೀರಿಗೆ 2 ಗ್ರಾಂ ಪ್ಯಾಪಿಕೊನೋಜಾಲ್ ನೀರಿಗೆ ಸೇರಿಸಿ ಸಿಂಪಡಿಸಿ ಅಥವಾ 4 ಗ್ರಾಂ ಜೈನಾಬ್ 1 ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಿ..

ಸುಳಿ ಕೊಳೆ ರೋಗ, ಚೆಂಡಿ ಕೊಳೆರೋಗ : ಈ ರೋಗವು ಸಾಮಾನ್ಯವಾಗಿ ಕಂಡುಬರುವ ರೋಗವಾಗಿದೆ. ಕಾಯಿ ಮರದಿಂದ ಉದುರುವುದು, ಅಡಿಕೆಕಾಯಿಯ ಮೇಲೆ ಬಿಳಿ ಬಣ್ಣದ ಸಿಲಿಂದ್ರ ಬೆಳೆದಿರುತ್ತದೆ ಮತ್ತು ಇಳುವರಿ ಕುಂಠಿತಗೊಳ್ಳುತ್ತದೆ. ಗಿಡದ ಬೆಳವಣಿಗೆ ಸಹ ಕುಂಠಿತಗೊಂಡಿರುತದೆ. ಮಳೆಗಾಲಕ್ಕೆ ಮುನ್ನ ಒಂದುಬಾರಿ ನಂತರ ಎರಡು ಬಾರಿ ಬೋರ್ಡೋ ದ್ರಾವಣವನ್ನು ಗಿಡದ ಹಸಿರು ಭಾಗಗಳಿಗೆ ಸಿಂಪಡಿಸುವುದು ಸೂಕ್ತ.

ಅಣಬೆ ರೋಗ : ಈ ರೋಗವು ಅತ್ಯಂತ ಅಪಾಯಕಾರಿ. ಇಡೀ ತೋಟವನ್ನು ನಾಶಪಡಿಸುವ ರೋಗವಾಗಿದೆ. ಮರದ ಕಾಂಡದಲ್ಲಿ ಅಣಬೆ ಬೆಳೆದಿರುತ್ತದೆ. ಇದು ಶಿಲೀಂದ್ರದಿಂದ ಬರುವ ರೋಗ.

ಜೊತೆಗೆ ಅಧಿಕ ತೇವಾಂಶ ಇರುವ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮರದ ಗರಿಗಳು ಬಾಗಿರುತ್ತದೆ. ಸ್ವಚ್ಛತೆ ಇಲ್ಲದ ತೋಟಗಳಲ್ಲಿ ಮತ್ತು ಹಳೆಯ ತೋಟಗಳಲ್ಲಿ ಹೆಚ್ಚಾಗಿರುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದು ಸಹ ಅಣಬೆ ರೋಗಕ್ಕೆ ಕಾರಣ. ಮರದ ಸುತ್ತ 2 , 3 ಅಡಿ ದೂರದಲ್ಲಿ ಒಂದು ಕಾಲುವೆ ಮಾಡಿ ರೋಗಕ್ಕೆ ತುತ್ತಾದ ಗಿಡಗಳ ನೀರು ಬೇರೆ ಗಿಡಗಳಿಗೆ ಹೋಗದಂತೆ ಮಾಡಬೇಕು. ಸಾಧ್ಯವಾದರೆ ಹಸುವಿನ ಗಂಜಲ ಬುಡಕ್ಕೆ ಸಿಂಪಡಿಸಬಹುದು . ಮುಖ್ಯವಾದ ವಿಚಾರವೆಂದರೆ , ಕಾಂಡದಲ್ಲಿ ಅಣಬೆ ಬಂದ ಮೇಲೆ ಗಿಡಕ್ಕೆ ಯಾವುದೇ ಔಷಧಿ ನೀಡಿದರು ಸಹ ಗುಣಮುಖವಾಗಲು ಸಾಧ್ಯವಿಲ್ಲ. ಏಕೆಂದರೆ ಬೇರುಗಳು ಸಂಪೂರ್ಣವಾಗಿ ಕೊಳೆತ ನಂತರ ಕಾಂಡದಲ್ಲಿ ಅಣಬೆ ಹೇಳುತ್ತದೆ . ಈ ಕಾರಣದಿಂದ ಅಣಬೆ ರೋಗವನ್ನು ಒಂದರಿಂದ ಮತ್ತೊಂದು ಗಿಡಕ್ಕೆ ಹರಡದಂತೆ ಸ್ವಲ್ಪಮಟ್ಟಿಗೆ ತಡೆಯಬಹುದು. ಕ್ಯಾಲಿಗೆನ್ ಮಿಶ್ರಣವನ್ನು ರೋಗ ಬಂದಿರುವ ಗಿಡದ ಸುತ್ತ ಹಾಕಬೇಕು . ಬೇವಿನ ಹಿಂಡಿ ಕೊಡಬೇಕು . ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದರೆ ಮಾತ್ರ ಅಣಬೆ ರೋಗವನ್ನು ನಿಯಂತ್ರಿಸಲು ಸಾಧ್ಯ…

ಇವು ಪ್ರಮುಖವಾಗಿ ಅಡಿಕೆ ತೋಟದಲ್ಲಿ ಕಂಡುಬರುವ ರೋಗಗಳಾಗಿವೆ. ಈ ಎಲ್ಲ ರೋಗಗಳಿಗೂ ಪರಿಹಾರ ಕ್ರಮಗಳಿಗಿಂತ ಹತೋಟಿ ಕ್ರಮ ಬಹಳ ಮುಖ್ಯವಾದದ್ದು. ಮೇಲೆ ತಿಳಿಸಲಾಗಿರುವ ಔಷಧಿಗಳನ್ನು ವಾತಾವರಣಕ್ಕೆ, ಮತ್ತು ಭೂಮಿಗೆ ಅನುಗುಣವಾಗಿ ನೀಡಬೇಕು. ಸ್ವಲ್ಪ ಏರುಪೇರಾದರೂ ಗಿಡಗಳಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ..,.

Leave A Reply

Your email address will not be published.