Arecanut: ಹೊಸ ವರ್ಷದಂದೇ ಅಡಿಕೆ ಬೆಳೆಗಾರರಿಗೆ ಅಘಾತ – ಅಡಿಕೆ ದರದಲ್ಲಿ ಭಾರಿ ಕುಸಿತ, ಕಾರಣ ಕೇಳಿದ್ರೆ ಶಾಕ್ ಆಗೋದು ಖಂಡಿತ !!

Arecanut: ಅಡಿಕೆ ಬೆಳೆಗಾರರಿಗೆ ಹೊಸ ವರ್ಷದ ಆರಂಭದಲ್ಲೇ ದೊಡ್ಡ ಅಘಾತ ಎದುರಾಗಿದೆ. ಯಾಕೆಂದರೆ ಮಾರುಕಟ್ಟೆಗೆ ನಕಲಿ ಅಡಿಕೆ ಬರುತ್ತಿದ್ದು, ಇದರಿಂದ ಅಡಿಕೆ ಬೆಲೆಯಲ್ಲಿ ಇಳಿಕೆಯಾಗುವ ಆತಂಕ ಎದುರಾಗಿದೆ.
ಹೌದು, ನಕಲಿ ಅಡಿಕೆಯು(Arecanut) ವಿದೇಶಗಳಿಂದ ಭಾರತದ ಮಾರುಕಟ್ಟೆ ಪ್ರವೇಶಿಸತೊಡಗಿದೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಬೆಳೆಗಾರರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಅಡಿಕೆಯನ್ನೇ ಹೋಲುವಂತಹ ನಕಲಿ ಅಡಿಕೆ ಭಾರತದ ಮಾರುಕಟ್ಟೆಯಲ್ಲಿ ಸೇರಿಕೊಂಡಿರುವುದು ಬೆಳೆಗಾರರಿಗೆ, ವ್ಯಾಪಾರಿಗಳಿಗೆ ಹಾಗೂ ಗ್ರಾಹಕರೆಲ್ಲರಲ್ಲೂ ತಲೆನೋವು ಸೃಷ್ಟಿಸಬಹುದು ಎಂದು ತಿಳಿಸಿದೆ.
ಅಂದಹಾಗೆ, ಪಶ್ಚಿಮ ಬಂಗಾಲದಲ್ಲಿ ಲಾರಿಯಲ್ಲಿ ಸಾಗಾಟ ಮಾಡುವಾಗ ಈ ಅಡಿಕೆ ಪತ್ತೆಯಾಗಿದೆ. ಸುಮಾರು 950 ಕಿಲೋ ಅಡಿಕೆಯನ್ನು ಕಸ್ಟಂಸ್ ಪ್ರಿವೆಂಟಿವ್ ಯುನಿಟ್‌ನವರು ಪತ್ತೆ ಮಾಡಿದ್ದು, ಅದರ ಗುಣಮಟ್ಟ ಪರಿಶೀಲನೆಗೆ ಮಾದರಿಯನ್ನು ಮಂಗಳೂರಿನ ಅಡಿಕೆ ಸಂಶೋಧನ ಪ್ರತಿಷ್ಠಾನಕ್ಕೆ ಕಳುಹಿಸಿದ್ದಾರೆ.
ಇದು ಹೊರಗಿನಿಂದ ಕೆಂಪು ಅಡಿಕೆ ಬೆಟ್ಟೆ ಹೋಲುವ ರೀತಿಯಲ್ಲಿದೆ. ಅಡಿಕೆಗೆ ಕಂದು ರೀತಿಯ ಒಳಭಾಗದ ವಿಶಿಷ್ಟ ರಚನೆ ಇಲ್ಲ, ಒಳಭಾಗ ಪೂರ್ತಿ ಬಿಳಿ ಬಣ್ಣ ಇದೆ ಹಾಗೂ ದೊರಗು ರಚನೆ ಇಲ್ಲ, ಅಡಿಕೆ ಒಳಗೆ ಮಧ್ಯ ಭಾಗ ತಿರುಳೂ ಇಲ್ಲ. ಹೊರಭಾಗಕ್ಕೆ ಅಡಿಕೆ ಚೊಗರಿನಿಂದ ಮುಳುಗಿಸಿ ಒಣಗಿಸಿದ ಹಾಗಿದೆ.
ಇನ್ನು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಡಾ. ಕೇಶವ ಭಟ್ ಅವರು ಅದನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಅಸಲಿಗೆ ಅದು ಅಡಿಕೆಯೇ ಆಗಿರಲಿಲ್ಲ. ಯಾವುದೋ ಬೇರೆ ಕಾಯಿಯನ್ನು ತುಂಡರಿಸಿ ಅದಕ್ಕೆ ಅಡಿಕೆ ಚೊಗರು ಲೇಪಿಸಿರುವುದು ಕಂಡುಬಂದಿದೆ. ಅದು ಒಳಗೆ ಅಡಿಕೆಯಂತೆ ಇರದೆ ಕೇವಲ ಬಿಳಿ ಬಣ್ಣದಿಂದ ಇತ್ತು ಎನ್ನುವುದು ಗೊತ್ತಾಗಿದೆ. ಇಂತಹ ನಕಲಿ ಅಡಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವವರು ಇರುವುದು ಅಡಿಕೆ ಬೆಳೆಗಾರರಲ್ಲಿ ಆತಂಕ ತಂದಿದೆ. ಅಡಿಕೆ ವರ್ತಕರು, ಕೆಂಪಡಿಕೆ ವ್ಯವಹಾರ ಮಾಡುವವರು ಜಾಗರೂಕತೆ ವಹಿಸಬೇಕು. ಇಂತಹ ಬೆಳವಣಿಗೆಯಿಂದ ಮಾರುಕಟ್ಟೆಯಲ್ಲಿ ಅಡಿಕೆ ದರ ಕುಸಿತವಾಗುವ ಆತಂಕ ಎದುರಾಗಿದೆ ಎಂದು ಹೇಳಲಾಗಿದೆ.