Mangaluru: ಮಂಗಳೂರಿನ ಲಾಡ್ಜ್‌ನಲ್ಲಿ ಸಮಾಜಸೇವಕನ ಹನಿಟ್ರ್ಯಾಪ್‌;

Mangaluru: ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೋರ್ವರನ್ನು ಲಾಡ್ಜ್‌ವೊಂದರಲ್ಲಿ ಹನಿಟ್ರ್ಯಾಪ್‌ ಮಾಡಿದ ಪ್ರಕರಣವನ್ನು ಇದೀಗ ಕೇರಳ ಪೊಲೀಸರು ಭೇದಿಸಿದ್ದು, ಇದರಲ್ಲಿ ಇಬ್ಬರು ಮಹಿಳೆಯರ ಸಹಿತ ಏಳು ಮಂದಿಯನ್ನು ಬಂಧನ ಮಾಡಲಾಗಿದೆ.

ಇದನ್ನೂ ಓದಿ: Hanuma Flag: ಮಂಡ್ಯವನ್ನು ಮಂಗಳೂರು ಮಾಡೋಕೆ ಬಿಡಲ್ಲ ಎಂದ ಶಾಸಕ!

ಕಾಸರಗೋಡಿನ 59 ವರ್ಷದ ವ್ಯಕ್ತಿ ಸಂತ್ರಸ್ತ. ಆರೋಪಿಗಳು ಇವರಿಂದ ಐದು ಲಕ್ಷ ರೂ. ಸುಲಿಗೆ ಮಾಡಿದ್ದು, ಮತ್ತೆ 30 ಲಕ್ಷ ರೂ. ಬೇಡಿಕೆ ಇಟ್ಟಿದ್ದರು.

ಆರೋಪಿಗಳ ಪೈಕಿ ಮಾಂಙಾಂಡ್ನ ದಿಲಾದ್‌ ಈ ಪ್ರಕರಣದ ಪ್ರಮುಖ ಆರೋಪಿ. ಆರೋಪಿಗೆ ಸಂತ್ರಸ್ತ ವ್ಯಕ್ತಿಯ ಆರ್ಥಿಕ ಸ್ಥಿತಿ ಹಾಗೂ ಇತರ ಚಟುವಟಿಕೆಗಳ ಕುರಿತು ಮಾಹಿತಿ ಇತ್ತು. ಈ ಮಾಹಿತಿಯನ್ನು ಆಧರಿಸಿ ಆತ ಇತರ ಆರೋಪಿಗಳ ಜೊತೆ ಸೇರಿ ಹನಿಟ್ರ್ಯಾಪ್‌ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆದರೆ ಸಂತ್ರಸ್ತ ವ್ಯಕ್ತಿಯ ಪ್ರಕಾರ ಆರೋಪಿಗಳ ಪೈಕಿ ಯಾರೊಬ್ಬರ ಪರಿಚಯ ಅವರಿಗೆ ಇಲ್ಲ ಎಂದು ಹೇಳಲಾಗಿದೆ. ಜ.23 ರಂದು ಆರೋಪಿ ರುಬೀನಾ ಎಂಬಾಕೆ ಸಂತ್ರಸ್ತ ವ್ಯಕ್ತಿಗೆ ಕರೆ ಮಾಡಿ ತನ್ನನ್ನು ಲುಬ್ನಾ ಎಂದು ಪರಿಚಯಿಸಿ ನಂತರ ಶೈಕ್ಷಣಿಕ ಕಾರ್ಯಕ್ಕಾಗಿ ಲ್ಯಾಪ್‌ಟಾಪ್‌ ಬೇಕೆಂದು ಕೇಳಿದ್ದು, ನಿಮ್ಮ ಸಮಾಜ ಸೇವೆ ಕುರಿತು ತಿಳಿದಿರುವುದಾಗಿ ಹೇಳಿ, ಮನವಿ ಮಾಡಿಕೊಂಡಿದ್ದಳು.

ರುಬೀನಾ ಮತ್ತು ದೂರುದಾರರು ಲ್ಯಾಪ್‌ಟಾಪ್‌ ಖರೀದಿಗೆಂದು ಮಂಗಳೂರಿಗೆ ಹೋಗಿದ್ದರು. ನಂತರ ಇಬ್ಬರೂ ಮಂಗಳೂರಿನ ಹೋಟೆಲ್‌ನಲ್ಲಿ ತಂಗಿದ್ದು, ರುಬೀನಾ ಸಂತ್ರಸ್ತ ವ್ಯಕ್ತಿಯ ನಗ್ನ ಫೊಟೋ ತೆಗೆದಿದ್ದಾರೆ ಎಂದು ಆರೋಪ ಮಾಡಲಾಗಿದೆ. ನಂತರ ಉಳಿದ ಆರೋಪಿಗಳ ಈ ಫೊಟೋ ಬಳಸಿ ಹಣಕ್ಕಾಗಿ ಬ್ಲಾಕ್ಮೇಲ್‌ ಮಾಡಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಆದರೆ ಸಂತ್ರಸ್ತ ವ್ಯಕ್ತಿ ಹೇಳಿದ್ದು ಈ ರೀತಿ ಇದೆ; ಜ.23 ರಂದು ರುಬಿನಾ ನನ್ನನ್ನು ಸಂಪರ್ಕ ಮಾಡಿದ್ದು ನಿಜ. ಆದರೆ ಆಕೆ ದಿಲ್ಶಾದ್‌ ಮತ್ತು ಸಿದ್ದಿಕ್‌ ಇವರಿಬ್ಬರನ್ನು ಪರಿಚಯ ಮಾಡಿಸಿ, ರಿಯಲ್‌ ಎಸ್ಟೇಟ್‌ ಬ್ರೋಕರ್‌ಗಳೆಂದು ತಿಳಿಸಿದ್ದಾಳೆ. ನಂತರ ಜ.25 ರಂದು ಮಾರಾಟಕ್ಕಿದ್ದ ಕಟ್ಟಡವನ್ನು ತೋರಿಸಲೆಂದು ದಿಲ್ಶಾದ್‌ ಮತ್ತು ಸಿದ್ದಿಕ್‌ ನನ್ನನ್ನು ಮಂಗಳೂರಿಗೆ ಕರೆದುಕೊಂಡು ಹೋದರು, ಅಲ್ಲಿ ರುಬಿನಾ ಬಂದಿದ್ದಾಳೆ. ಒಟ್ಟು ನಾಲ್ಕು ಜನ ಹತ್ತಿರದ ರೆಸ್ಟೋರೆಂಟ್‌ಗೆ ಉಪಹಾರಕ್ಕೆಂದು ಹೋದಾಗ, ಚಹಾ ಸೇವಿಸುತ್ತಾಗ ರುಬಿನಾ ಅವಳನ್ನು ಬಿಟ್ಟು ಎಲ್ಲರೂ ಹೊರಟು ಹೋಗಿದ್ದಾರೆ. ಆ ರೆಸ್ಟೋರೆಂಟ್‌ನ ಮೊದಲನೇ ಮಹಡಿಯಲ್ಲಿ ಲಾಡ್ಜ್‌ ಇದ್ದು ರುಬಿನಾ ನನ್ನನ್ನೂ ಕರೆದುಕೊಂಡು ಹೋಗಿದ್ದಾಳೆ.

ಅಲ್ಲಿ ನನ್ನ ನಗ್ನಗೊಳಿಸಿ ಒಂದು ಫೋಟೋ, ಆಕೆಯ ಜೊತೆಗಿರುವ ಒಂದು ಫೊಟೋ ತೆಗೆದಿದ್ದಾಳೆ. ಈ ಕೃತ್ಯದಲ್ಲಿ ಲಾಡ್ಜ್‌ ಮಾಲೀಕ ಕೂಡಾ ಭಾಗಿಯಾಗಿರುವ ಕುರಿತು ಶಂಕೆ ಇದೆ ಎಂದು ಸಂತ್ರಸ್ತ ವ್ಯಕ್ತಿ ಆರೋಪ ಮಾಡಿದ್ದಾರೆ.

ನಂತರ ಆರೋಪಿಗಳು ಹಣಕ್ಕಾಗಿ ನನ್ನನ್ನು ಬ್ಲಾಕ್‌ಮೇಲ್‌ ಮಾಡಿದ್ದಾರೆ. ಐದು ಲಕ್ಷದಿಂದ ಬೇಡಿಕೆ ಇಟ್ಟಿದ್ದು, ಕೊಡದಿದ್ದಲ್ಲಿ ಕುಟುಂಬ ಸದಸ್ಯರ ಹಾಗೂ ನೆರೆಹೊರೆಯವರಿಗೆ ಫೋಟೋ ತೋರಿಸುವುದಾಗಿ ಬೆದರಿಕೆ ಹಾಕಿದ್ದರು. ಅವರ ಒತ್ತಡಕ್ಕೆ ನಾನು ಹತ್ತು ಸಾವಿರ ರೂಪಾಯಿಯನ್ನು ಗೂಗಲ್‌ ಪೇ ಮಾಡಿ, ಉಳಿದ 4,90,000 ನಗದಿನ ರೂಪದಲ್ಲಿ ನೀಡಿರುವುದಾಗಿ ಹೇಳಿದ್ದಾರೆ.

ನಾಲ್ಕು ದಿನಗಳ ನಂತರ ಮತ್ತೆ ಮೂವತ್ತು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ನಾನು ಕೂಡಲೇ ಪೊಲೀಸರ ಮೊರೆ ಹೋಗಿರುವುದಾಗಿ ಅವರು ತಿಳಿಸಿದ್ದಾರೆ. ಠಾಣಾ ಎಸ್‌ಐ ಸುರೇಶ್‌ ಮತ್ತು ಅರುಣ್‌ ಮೋಹನ್‌ ಎಲ್ಲಾ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಬಹುತೇಕ ಮಂದಿ ಕ್ರಿಮಿನಲ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಲಿಕೋಟೆ ಪೆರುಮಣ್ಣ ನಿವಾಸಿ ಪಿ.ಫೈಝಲ್‌ (37), ಪತ್ನಿ ಕುಟ್ಟಿಕ್ಕಾಟೂರು ನಿವಾಸಿ ರುಬೀನಾ ಎಂ.ಪಿ (29), ಕಾಸರಗೋಡು ಶಿರಿಬಾಗಿಲು ನಿವಾಸಿ ಎನ್‌.ಸಿದ್ದಿಕ್‌ (48), ಮಾಙಾಡ್ನ ದಿಲಾದ್‌ (40), ಮುಟ್ಟತ್ತೋಡಿಯ ನಫೀಸರ್‌ ಮಿಸ್ರಿಯ (40), ಮಾಙಾಡ್ನ ಅಬ್ದುಲ್ಲ ಕುಂಞ (32), ಪಡನ್ನಕ್ಕಾಡ್ನ ರಫೀಕ್‌ (42) ಬಂಧಿತರು. ಈ ಏಳು ಮಂದಿಯನ್ನು ಮೇಲ್ಪರಂಬ ಪೊಲೀಸರು ಬಂಧನ ಮಾಡಿದ್ದಾರೆ.

Leave A Reply

Your email address will not be published.