Killer CEO: ತನ್ನ ಮಗುವನ್ನೇ ಕೊಂದ ಹಂತಕಿ ಸಿಇಒ; ಗಂಡನ ಮೇಲಿನ ಸಿಟ್ಟಿಗೆ ಮಗು ಬಲಿಯೇ?
A1 Startup CEO Suchana Seth: ಎಐ ಸ್ಟಾರ್ಟಪ್ ಕಂಪನಿಯ ಸಿಇಒ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಪುಟ್ಟ ಮಗುವನ್ನು ಅತ್ಯಂತ ಭಯಾನಕವಾಗಿ ಕೊಂದು ಹಾಕಿದ ಘಟನೆಯ ಕುರಿತು ಇದೀಗ ಒಂದೊಂದು ಸತ್ಯಗಳು ಹೊರ ಬೀಳುತ್ತಿದೆ. ಬೆಂಗಳೂರಿನಲ್ಲಿದ್ದ ಈಕೆ ತನ್ನ ಮಗನನ್ನು ಗೋವಾಗೆ ಕರೆದುಕೊಂಡು ಹೋಗಿ ಅಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಗುವನ್ನು ಕೊಂದು ಖಾಸಗಿ ಟ್ಯಾಕ್ಸಿ ಮೂಲಕ ಒಬ್ಬಳೇ ಹಿಂದಿರುಗುವಾಗ ಚಿತ್ರದುರ್ಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಇದೀಗ ವಿಚಾರಣೆಯ ಸಂದರ್ಭ ಈಕೆ ಹಲವು ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ. ಒಂದು ಮೂಲದ ಪ್ರಕಾರ ಈಕೆ ತನ್ನ ಮೊದಲ ಗಂಡನ ಮೇಲಿನ ಸಿಟ್ಟಿಗೆ ಮಗುವನ್ನು ಕೊಂದಿದ್ದಾಳೆ ಎನ್ನಲಾಗಿದೆ.
ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ತನ್ನ ಮಗನೊಂದಿಗೆ ಭೇಟಿ ನೀಡಿದ ಈಕೆ ಸೋಮವಾರ ಒಬ್ಬಂಟಿಯಾಗಿ ಚೆಕ್‌ಔಟ್ ಮಾಡಿದ್ದಾಳೆ. ಅಲ್ಲಿನ ಸಿಬ್ಬಂದಿಗಳಗಿಗೆ ಸಂಶಯ ಬಂದು, ಪೊಲೀಸರಿಗೆ ಮಾಹಿತಿ ನೀಡಿ ನಂತರ ಚಿತ್ರದುರ್ಗ ಠಾಣೆಗೆ ಮಾಹಿತಿ ನೀಡಿ ಆಕೆಯನ್ನು ವಶಪಡಿಸಿಕೊಳ್ಳಲಾಯಿತು.
ತನ್ನ ಮಗುವನ್ನು ಕೊಂದ ಬಳಿಕ ಏನೂ ಆಗಿಲ್ಲ ಎನ್ನುವ ರೀತಿಯಲ್ಲಿ ಕಾರಿನಲ್ಲಿ ಹೊರಟಿದ್ದಳು. ಆದರೆ ಸುಚನಾ ಸೇಠ್ ಅಪಾರ್ಟ್‌ಮೆಂಟ್‌ಗೆ ಬಂದಾಗ ಆಕೆಯ ಜೊತೆ ಮಗು ಇರುವುದು ಸಿಬ್ಬಂದಿ ಗಮನಿಸಿದ್ದರು. ಆದರೆ ಹೊರಗೆ ಬಂದಾಗ ಮಗು ಕಾಣಲಿಲ್ಲ. ಮಗು ಎಲ್ಲಿ ಎಂದು ಕೇಳಿದಾಗ ಸ್ನೇಹಿತನ ಜೊತೆ ಇದ್ದಾನೆ ಎಂದು ಹೇಳಿ ವಿಳಾಸ ನೀಡಿದ್ದಳು. ಇಷ್ಟರಲ್ಲಿ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿಯನ್ನು ನೀಡಿಯಾಗಿತ್ತು. ಪೊಲೀಸರು ವಿಳಾಸವನ್ನು ಚೆಕ್ ಮಾಡಿದಾಗ ಅದು ನಕಲಿ ಎಂದು ತಿಳಿದು ಬಂತು.
ನಂತರ ಪೊಲೀಸರು ಚಾಲಕನಿಗೆ ಕರೆ ಮಾಡಿ ಸುಚನಾಗೆ ಅರ್ಥವಾಗದ ಕೊಂಕಣಿ ಭಾಷೆಯಲ್ಲಿ ಮಾತನಾಡಿ ಕ್ಯಾಬನ್ನು ಚಿತ್ರದುರ್ಗದ ಪೊಲೀಸ್ ಠಾಣೆಗೆ ತಿರುಗಿಸಲು ಹೇಳಿದ್ದರು. ಕಾರು ಅಲ್ಲಿಗೆ ಬಂದಾಗ ಸುಚನಾಳನ್ನು ಪೊಲೀಸರನ್ನು ಈಕೆಯನ್ನು ಬಂಧಿಸಿದ್ದು, ಬ್ಯಾಗ್ ಪರಿಶೀಲಿಸಿದಾಗ ಆಕೆಯ ಮಗನ ಶವ ಅಲ್ಲಿ ಪತ್ತೆಯಾಗಿತ್ತು.
ಸುಚನಾ ಸೇಠ್ಗೆ ಎರಡು ಮದುವೆಯಾಗಿದೆ. ಈಗ ಇರುವುದು ಮೊದಲನೇ ಗಂಡನಿಂದ ಹುಟ್ಟಿದ ಮಗು. ಮಗು ಹುಟ್ಟಿದ ಮೇಲೆ ಗಂಡ ಹೆಂಡತಿ ನಡುವೆ ಜಗಳ ಉಂಟಾಗಿ ಇಬ್ಬರೂ ಬೇರೆಯಾಗಿದ್ದರು. ಮಗು ಸುಚನ ಬಳಿ ಇತ್ತು. ಅನಂತರ ಈಕೆ ವೆಂಕಟರಾಮನ್ ಎಂಬ ಟೆಕ್ಕಿಯನ್ನು ಮದುವೆಯಾಗಿದ್ದಳು. ಅವರು ಇಂಡೋನೇಷ್ಯದ ಜಕಾರ್ತದಲ್ಲಿದ್ದಾರೆ. ಮೊದಲ ಗಂಡ ಮಗುವನ್ನು ನೋಡಲು ಆಗಾಗ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಇದು ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಹೀಗಾಗಿ ಮೊದಲ ಗಂಡನ ಮೇಲಿನ ಸಿಟ್ಟಿನಲ್ಲಿ ಸುಚನಾ ತನ್ನ ಮಗುವನ್ನೇ ಕೊಂದು ಹಾಕಿದ್ದಾಳೆ ಎನ್ನುವುದ ಪ್ರಾಥಮಿಕ ಮಾಹಿತಿ.
ಮಗುವಿನ ಕತ್ತಿನ ಭಾಗದ ನರಗಳು ಕಪ್ಪು ವರ್ಣಕ್ಕೆ ತಿರುಗಿದ್ದು, ಸುಚನಾ ಮಗುವನ್ನು ಕತ್ತು ಹಿಸುಕಿ ಕೊಂದಿರುವ ಶಂಕೆ ಇದೆ. ರಕ್ತದ ಕಲೆಯೂ ಕಂಡು ಬಂದಿರುವುದರಿಂದ ಚೂರಿ ಹಾಕಿ ಸಾಯಿಸಿರುವ ಸಾಧ್ಯತೆ ಇದೆ. ಗೋವಾ ಪೊಲೀಸರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವರದಿಯಾಗಿದೆ.