ಪುತ್ತೂರು: ಕಲ್ಲೆಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಬರ್ಬರ ಹತ್ಯೆ

 

Kallega Akshay murder: ಪ್ರಖ್ಯಾತ ಹುಲಿ ವೇಷದ ತಂಡ ಕಲ್ಲೇಗ ಟೈಗರ್ಸ್ ತಂಡದ ನಾಯಕ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆ ಮಾಡಲಾಗಿದೆ.

ತಡರಾತ್ರಿ ನೆಹರೂನಗರ ಜಂಕ್ಷನ್ ನಲ್ಲಿ ಘಟನೆ ನಡೆದಿದ್ದು, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಡಾ.ಗಾನಾ ಪಿ. ಕುಮಾರ್ ಸಹಿತ ಪೊಲೀಸರು ಭೇಟಿ ನೀಡಿದ್ದು, ಬಂದೋಬಸ್ತ್ ಏರ್ಪಡಿಸಲಾಗಿದೆ.

ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಮಹಜರು ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರಿನ ಖ್ಯಾತ ಹುಲಿ ವೇಷ ಕುಣಿತ ತಂಡ ಟೈಗರ್ಸ್‌ ಕಲ್ಲೇಗ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್‌ ಕಲ್ಲೇಗ ಹತ್ಯೆಯಾದವರು.

ಪುತ್ತೂರಿನ ಅಕ್ಷಯ್‌ ಕಲ್ಲೇಗ 24ರ ಹರೆಯದವರಾಗಿದ್ದು, ಅಲ್ಲಿನ ವಿವೇಕಾನಂದ ಕಾಲೇಜ್‌ ಬಳಿ ನಿವಾಸಿಯಾಗಿದ್ದು, ತಂದೆ ಚಂದ್ರಶೇಖರ, ತಾಯಿ ಕುಸುಮ, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಅವರು ಕಳೆದ ಸುಮಾರು 6 ವರ್ಷಗಳಿಂದ ಕಲ್ಲೇಗ ಟೈಗರ್ಸ್‌ ಎಂಬ ಹುಲಿ ವೇಷ ತಂಡವನ್ನು ನಡೆಸುತ್ತಿದ್ದರು. ಪುತ್ತೂರಿನಲ್ಲಿ ಅವರ ತಂಡ ಈ ದಿನಗಳಲ್ಲಿ ಭಾರೀ ಜನ ಪ್ರಿಯತೆಯನ್ನು ಗಳಿಸಿತ್ತು. ಹುಲಿ ಕುಣಿತದ ಪಂದ್ಯ – ಪಂಥ ಕೂಟಗಳಲ್ಲಿ ಕೂಡಾ ಪ್ರಶಸ್ತಿಗಳನ್ನು ಬಾಚಿತ್ತು. ಈ ತಂಡ ಈ ಮೂಲಕ ಪುತ್ತೂರಿನಲ್ಲಿ ಹುಲಿ ಕುಣಿತ ತಂಡಕ್ಕೆ ಒಂದು ರೀತಿಯ ಸ್ಟಾರ್‌ ಗಿರಿಯನ್ನು ತಂದುಕೊಟ್ಟಿದ್ದರು.

ಮರ್ಡರ್ ಆದದ್ದು ಯಾಕೆ ?

ಹತ್ಯೆಗೆ ಕೆಲವೇ ಕೆಲವು ಗಂಟೆಗಳ ಮೊದಲು ಕ್ಷುಲ್ಲಕ ಕಾರಣವೊಂದಕ್ಕೆ ಅಕ್ಷಯ್‌ ಹಾಗೂ ಕೃತ್ಯ ಎಸಗಿದ ತಂಡದ ಸದಸ್ಯರ ಮಧ್ಯೆ ಮಾತಿನ ವಾಗ್ಯುದ್ಧ ನಡೆದಿತ್ತು. ಅದಾದ ಸ್ವಲ್ಪ ಹೊತ್ತಿನ ನಂತರ ಅಕ್ಷಯ್‌ ರನ್ನು ನೆಹರೂ ನಗರಕ್ಕೆ ಬರಲು ಹೇಳಲಾಗಿತ್ತು. ಅಲ್ಲಿ ಪ್ಲಾನ್ ಮಾಡಿ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಕೃತ್ಯವು ಮಧ್ಯರಾತ್ರಿ ಸುಮಾರು 11.30 ಗಂಟೆ ಸುಮಾರಿಗೆ ಘಟಿಸಿದ ಮಾಹಿತಿಯಿದೆ.

ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹೆದ್ದಾರಿಯ ತುಸು ದೂರದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಬಳಿ ಅಕ್ಷಯ್‌ ಮೇಲೆ ತಂಡ ದಾಳಿ ನಡೆಸಿದೆ. ನಂತರ ಅಲ್ಲಿಂದ ಆತನನ್ನು ಅಟ್ಟಾಡಿಸಿಕೊಂಡು ಬಂದು ತಲವಾರುನಿಂದ ದಾಳಿ ನಡೆಸಿದ್ದಾರೆ. ಮಾಣಿ ಮೈಸೂರು ಹೆದ್ದಾರಿಯನ್ನು ದಾಟಿ ಆಚೆ ಬದಿ ಗಿಡಗಂಟಿಗಳಿಂದ ಅವೃತ್ತವಾದ ಜಾಗದವರೆಗೂ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಾಣಿ ಮೈಸೂರು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ರಕ್ತದ ಕಲೆಗಳಿವೆ.

ಕೇವಲ 2000 ರೂಗೆ ನಡೆದಿತ್ತಾ ಕೊಲೆ ?
ಅಕ್ಷಯ್‌ ಮೃತದೇಹ ಕಾಲೇಜಿಗೆ ಹೋಗುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಹೆದ್ದಾರಿಯ ಅಂಚಿನಲ್ಲಿರುವ ಪೊದೆ ಅವೃತ್ತವಾದ ಖಾಲಿ ಇರುವ ಬಿಸಾಡಿದ ಹಾಗಿತ್ತು. ಕೃತ್ಯ ನಡೆಸಿದ ತಂಡದಲ್ಲಿ ಒಟ್ಟು ಮೂವರು ಇದ್ದರು ಎಂದು ಶಂಕಿಸಲಾಗಿದೆ. ಈ ಪೈಕಿ ಇಬ್ಬರು ಕೃತ್ಯ ನಡೆದ ಕೆಲ ಗಂಟೆಯ ಬಳಿಕ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಇನ್ನೊರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನುವ ಮಾಹಿತಿಯಿದೆ.

ನಿನ್ನೆ ಸಂಜೆ ವೇಳೆ ನಡೆದ ವಾಹನವೊಂದರ ಅಪಘಾತದ ವಿಚಾರದಲ್ಲಿ ಅಕ್ಷಯ್‌ ಹಾಗೂ ಎದುರಾಳಿ ಯುವಕರ ಮಧ್ಯೆ ಸಣ್ಣ ಮನಸ್ತಾಪ ಉಂಟಾಗಿತ್ತು. ಅದರ ರಿಪೇರಿ ಬಗ್ಗೆ ಮಾತನಾಡಲೆಂದು ಅಕ್ಷಯ್ ನನ್ನು ಕರೆಸಿಕೊಂಡ ಅದೇ ತಂಡ ಮಧ್ಯರಾತ್ರಿ ವೇಳೆ ನೆಹರೂ ನಗರ ಬಳಿ ಕರೆದು ಕೃತ್ಯ ಎಸಗಿದೆ ಎನ್ನಲಾಗುತ್ತಿದೆ. ಇದೆಲ್ಲಾ ನಡೆದದ್ದು ಕೇವಲ 2,000 ರೂಪಾಯಿಯ ಸಣ್ಣ ವ್ಯಾಜ್ಯಕ್ಕೆ ಎನ್ನಲಾಗುತ್ತಿದ್ದು ಆಶ್ಚರ್ಯ ಮೂಡಿಸುತ್ತದೆ. ಇಷ್ಟು ಸಣ್ಣ ಮೊತ್ತಕ್ಕೆ ಕೊಲೆಯ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.

ಇದೀಗ ಅಕ್ಷಯ್ ಮೃತ ದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಚೇತನ್, ಮನೀಶ್ ಎಂಬ ಇಬ್ಬರು ಠಾಣೆಗೆ ಬಂದು ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸ್ಫುರದ್ರೂಪಿ ಹುಲಿಯ ಕಣ್ಮರೆ:

ಕಾಂತಾರಾ ಚಿತ್ರದ ಖ್ಯಾತಿಯ ನಂತರ ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ವಿಜೃಂಭಿಸುತ್ತಿವೆ. ಅವುಗಳಲ್ಲಿ ಹುಲಿ ವೇಷ ಕೂಡ ಒಂದು. ದಸರಾ ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಹುಲಿ ವೇಷಗಳು ಇದೀಗ ತಮ್ಮ ಕಾಸ್ತ್ಯೂಮ್ ಅನ್ನು ಬದಲಿಸಿಕೊಂಡು, ಅದಕ್ಕೆ ಪ್ರೊಫೆಷನಲ್ ನೃತ್ಯವನ್ನು ಸೇರಿಸಿಕೊಂಡು ಸ್ಪರ್ಧಾತ್ಮಕವಾಗಿ ಹುಲಿವೇಷ ನಡೆಸುತ್ತಿವೆ. ಅಲ್ಲಲ್ಲಿ, ‘ಹುಲಿ ವೇಷದ ಸ್ಪರ್ಧೆ’, ‘ಹುಲಿ ಪಂಥ’ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆ. ಅಕ್ಷಯ್ ಕಲ್ಲೇಗ ಅಂತಹ ಸ್ಪರ್ಧಾತ್ಮಕ ಹುಲಿ ವೇಷಧಾರಿ. ತಮ್ಮದೇ ಊರಿನ ಹೆಸರನ್ನು ಇಟ್ಟುಕೊಂಡು ಪುತ್ತೂರಿನಲ್ಲಿ ‘ಕಲ್ಲೇಗ ಟೈಗರ್ಸ್’ ಎಂಬ ಹುಲಿ ವೇಷದ ತಂಡವನ್ನು ಆತ ನಿರ್ಮಿಸಿದ್ದ. ಹೋದಲ್ಲೆಲ್ಲ ತನ್ನ ವಿನೂತನ ಪ್ರದರ್ಶನ ಕಲೆಯ ಮೂಲಕ ಪ್ರಶಸ್ತಿ ಗೆದ್ದುಕೊಂಡು ಬರುತ್ತಿದ್ದರು. ಇದೀಗ ಹುಲಿ ಮರೆಯಾಗಿದೆ, ಸ್ಫುರದ್ರೂಪಿ ಯುವಕ ಇನ್ನಿಲ್ಲವಾಗಿದ್ದಾನೆ.

Leave A Reply

Your email address will not be published.