Veerendra Heggade: ವೀರೇಂದ್ರ ಹೆಗ್ಗಡೆಯವರನ್ನು ಸಂಸದ ಸ್ಥಾನದಿಂದ ಕಿತ್ತು ಹಾಕೋದು ಯಾವಾಗ ? – BJP ಮತ್ತು ಪರಿವಾರದ ನಾಯಕರೇ ಉತ್ತರಿಸಿ, ನಂತರ ನಿಮ್ಮ ‘ಶೌರ್ಯ ಪ್ರದರ್ಶನ’ !

Dakshina Kannada news When will Veerendra Heggade be removed from the seat of MP quetion from people

Veerendra Heggade: ಅತ್ತ ವಿಧಾನಸಭೆಯಲ್ಲಿ ಕರಾವಳಿಯಲ್ಲಿ ಬಿಜೆಪಿ ಮತ್ತೆ ತನ್ನ ಪ್ರಾಬಲ್ಯ ಸಾಧಿಸಿ ದಕ್ಷಿಣ ಕನ್ನಡದಲ್ಲಿ 6 ಬಿಜೆಪಿ ಮತ್ತು 2 ಕಾಂಗ್ರೆಸ್ ಸ್ಥಾನಗಳನ್ನು ಪಡಕೊಂಡರೆ, ಉಡುಪಿಯಲ್ಲಿ ಕರಾವಳಿಯ 4 ಮಂದಿ ಶಾಸಕರಿದ್ದಾರೆ. ಈಗ ಸಿಟ್ಟಿಂಗ್ ಸಂಸದ ಆಗಿರೋದು ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಪಕ್ಕದ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ. ಇದಲ್ಲದೆ, ಬಿಜೆಪಿಯ ರಾಜ್ಯಸಭಾ ಸಂಸದರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿದ್ದಾರೆ. (Veerendra Heggade) ಇದು ಕರಾವಳಿಯ ರಾಜಕೀಯ ಪರಿಸ್ಥಿತಿ. ಹೀಗಿರುವಾಗ ಇದೀಗ ಸಂಸದ ಶ್ರಿ ವೀರೇಂದ್ರ ಹೆಗ್ಗಡೆಯವರ ಪದಚ್ಯುತಿ ಯಾವಾಗ ಅನ್ನುವ ಕೂಗು ಎದ್ದಿದೆ.

ಈ ಸಲ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗಳು ಬಚಾವ್ ಆಗಿ, ಇದ್ದ ಓರ್ವ ಅಪರಾಧಿ ಕೂಡಾ ಆರೋಪ ಮುಕ್ತನಾದ ನಂತರ ದೊಡ್ಡ ಮಟ್ಟದ ಅನುಮಾನ ಮತ್ತು ಆರೋಪಗಳು ಹಳೆಯ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಕೇಳಿ ಬರುತ್ತಿವೆ. ಇವತ್ತಿಗೂ ಬಿಜೆಪಿ ತೋರಿಸುತ್ತಿರುವ ನಿಗೂಢ ಮೌನ ಕರಾವಳಿಯ ಜನರ ತಲೆಕೆಡಿಸಿದೆ. ಇಂತಹಾ ಸಂದರ್ಭದಲ್ಲಿಯೇ ಇದೀಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೇಲೆ ಸಾವಿರಾರು ಎಕರೆ ಭೂ ಪ್ರದೇಶಗಳ ಆಕ್ರಮ ಭೂ ಕಬಳಿಕೆ ಆರೋಪ ಹೊರಿಸಲಾಗಿದೆ. ಅನೇಕ ಸಾಮಾಜಿಕ ಹೋರಾಟಗಾರರ ಪರವಾಗಿ ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ ಸಂಸ್ಥೆಯು, ‘ಮಾತನಾಡುವ ಮಂಜುನಾಥನಿಗೆ 100 ಪ್ರಶ್ನೆಗಳು’ ಎಂದು ದಾಖಲೆಗಳನ್ನು ಎದುರಿಗಿಟ್ಟು ಉತ್ತರಿಸಲು ಹೇಳಿತ್ತು. ಮಾತನಾಡುವ ಮಂಜುನಾಥನ ಬಾಯಿ ಮತ್ತು ಮಾತು ಕಟ್ಟಿದ ಹಾಗಾಗಿದೆ. ಯಾಕೆಂದರೆ, ಈ ಕಾನೂನು ತಂಡ ಎದುರಿಗೆ ಇಟ್ಟದ್ದು ಸರ್ಕಾರ ಮತ್ತು ಕೋರ್ಟುಗಳು ನೀಡಿದ ದಾಖಲೆಗಳನ್ನೇ. ಹಾಗಾಗಿ, ಮೌನo ಸಮ್ಮತಿ ಲಕ್ಷಣ ಅನ್ನುವ ಹಾಗೆ ಅದನ್ನವರು ಒಪ್ಪಿಕೊಳ್ಳಲೇ ಬೇಕಾದ ಧರ್ಮ ಸಂಕಟ ಎದುರಾಗಿದೆ. ಅದಕ್ಕೇ ಇರಬೇಕು, ಅವರು ಮೌನದ ಶರಣಾಗಿದ್ದಾರೆ.

ಇಂತಹಾ ಪರಿಸ್ತಿತಿಯಲ್ಲಿ ಶ್ರೀ ವೀರೇಂದ್ರ ಹೆಗ್ಗಡೆಯವರು ಬಿಜೆಪಿಯ ಸಂಸದರಾಗಿದ್ದಾರೆ. ಎಲ್ಲಾ ಗೊತ್ತಿದ್ದೂ, ತನ್ನನ್ನು ಎಂದೂ ಕೈ ಬಿಡದೆ ಬೆಂಬಲಿಸಿಕೊಂಡು ಬಂದ ಕರಾವಳಿಯ ಮತದಾರರರಿಗೆ ಬಿಜೆಪಿ ಪಕ್ಷವು ದ್ರೋಹ ಬಗೆದಿದೆ. ದೊಡ್ಡ ಪ್ರಮಾಣದ ಹೋರಾಟಗಳು ನಡೆದ ನಂತರ ಕೂಡ ಕಳಂಕಿತ ಆರೋಪಿತನನ್ನು ಏಕಾಏಕಿ ನಾಮ ನಿರ್ದೇಶನ ಮಾಡಿ ಆಯ್ಕೆ ಮಾಡಿ ಕಳಿಸಿದ ಬಿಜೆಪಿ ನಾಯಕತ್ವಕ್ಕೆ ಜನರು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಹಿಂದಿನಂತೆ ಇದೀಗ ಪ್ರಶ್ನೆ ಮಾಡದೆ ಒಪ್ಪಿಕೊಳ್ಳುವ ಜಾಯಮಾನ ಈಗಿನ ಹಿಂದೂ ಯುವಕರಲ್ಲಿ ಇಲ್ಲ, ಅವರಲ್ಲಿ ಪ್ರಶ್ನಿಸುವ ಗುಣ ಹೆಚ್ಚುತ್ತಿದೆ. ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭಾ ಸಂಸದರನ್ನಾಗಿ ಮಾಡಿದ್ದು ಯಾರು ಮತ್ತು ಯಾಕೆ ಎನ್ನುವ ಕಾಮನ್ ಪ್ರಶ್ನೆ ಈಗ ಈ ಭಾಗದ ಜನರದ್ದು.

ಕರಾವಳಿಯಲ್ಲಿ ಓರ್ವ ವ್ಯಕ್ತಿ, ತಾನು ದೈವಿಕ ಸ್ವರೂಪ ಅಂತ ಪೂಜಿಸಿಕೊಂಡು ಬಂದು, ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ಚಾಚಿ, ಕಾನೂನು ರೂಲ್ಸ್ ಅಂತ ಪಾಲಿಸಿ ಬದುಕಿದ್ದರೆ, ಆಗ ಆತನನ್ನು ಅದೇ ದೈವತ್ವದ ಮಟ್ಟದಲ್ಲೇ ನೋಡುತ್ತಾ ಇರಬಹುದಿತ್ತು. ಆದ್ರೆ ಇರುವ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ವರ್ತಿಸಲು ವ್ಯಕ್ತಿಯೊಬ್ಬ ಪ್ರಾರಂಭ ಮಾಡಿದಾಗ ಜನ ಸಹಜವಾಗಿ ತಿರುಗಿ ಬೀಳಲು ಶುರುಮಾಡಿದ್ದಾರೆ. ಜನ ಪ್ರತಿಭಟನೆ ಮಾಡಿದರೂ, ಕ್ಯಾರೇ ಎನ್ನದೆ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭಾ ಸಂಸದರನ್ನಾಗಿ ಬಿಜೆಪಿ ಮಾಡಿತು. ಅವರನ್ನು ಹಾಗೆ ಆಯ್ಕೆ ಮಾಡಲು ಮುಂದೆ ನಿಂತವರು ಯಾರು ಎನ್ನುವುದು ಈಗಿನ ಪ್ರಶ್ನೆ. ಸಹಜವಾಗಿ, ರಾಜ್ಯ ಬಿಜೆಪಿಯಲ್ಲಿ ಈಗ ಬಿ ಎಲ್ ಸಂತೋಷ್ ಅವರ ಯುಗ (ಸೋಲಿನ ಯುಗ !). ವೀರೇಂದ್ರ ಹೆಗ್ಗಡೆ ಆಯ್ಕೆಯಲ್ಲಿ ಯಾರ ಕೈವಾಡ ಇರೋದು ? ಬಿ. ಎಲ್. ಸಂತೋಷ್ ಅಥವಾ ನಳಿನ್ ಕಟೀಲ್ ಕರಾವಳಿ ರಾಜಕೀಯದ ಪ್ರಮುಖ ಹೆಸರುಗಳು. ಅದರಲ್ಲೂ ಸಂತೋಷ್ ಜಿ ಅಂತ ಕರೆಸಿಕೊಳ್ಳುವ ಬಿ ಎಲ್ ಸಂತೋಷ್ ಇದೀಗ ರಾಜ್ಯ ಬಿಜೆಪಿಯ ಅನಭಿಷಿಕ್ತ ದೊರೆ. ಅವರ ಮತ್ತು ವೀರೇಂದ್ರ ಹೆಗ್ಗಡೆಯವರ ಮಧ್ಯೆ ನಡೆದ ಗುಪ್ತ ಒಪ್ಪಂದಗಳ ಪರಿಣಾಮ ಅವರಿಗೆ ಈ ಸಂಸದ ಸ್ಥಾನ ದೊರಕಿದೆ ಎನ್ನಲಾಗಿದೆ. ಹಾಗಾಗಿ, ಸ್ಪಷ್ಟವಾಗಿ ಕರಾವಳಿಯ ಜನರ ಮನಸ್ಸಿನ ವಿರುದ್ಧವಾಗಿ ಬಿಜೆಪಿ ನಡೆದುಕೊಂಡಿದೆ. ಅದಕ್ಕೆ ಸದ್ಯೋಭವಿಷ್ಯದಲ್ಲಿ ಬಿಜೆಪಿ ಭಾರಿ ಬೆಲೆ ತೆರಲಿದೆ.

‘ಶೌರ್ಯ’ ವಂತರೇ ಎಲ್ಲಿದ್ದೀರಿ ?

ಅಲ್ಲದೆ, ವೀರೇಂದ್ರ ಹೆಗ್ಗಡೆಯವರ ಜತೆ ಸ್ಥಳೀಯ ಶಾಸಕ ಹರೀಶ್ ಪೂಂಜಾ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ಅವರಿಬ್ಬರ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲದೇ ಇದ್ದರೂ, ಹಿಂದೆ ಪದೇ ಪದೇ ಹೋಗಿ ಹೆಗ್ಗಡೆ ಕಾಲಿಗೆ ಬಿದ್ದವರೇ ಈ ಪೂಂಜಾ ! ಅಷ್ಟೇ ಅಲ್ಲದೆ, ಇತರ ಯಾರೇ ಕರಾವಳಿಯ ಬಿಜೆಪಿ ಶಾಸಕರಿಗೆ ಹೆಗ್ಗಡೆ ವಿರುದ್ಧ ಮಾತನಾಡುವ ಮನಸ್ಸು, ಧೈರ್ಯ ಮತ್ತು ಸತ್ಯದ ಪರ ನಿಲ್ಲಬಲ್ಲ ಇಚ್ಚಾ ಶಕ್ತಿ ಇಲ್ಲ. ಅತ್ತ ಜನರು ಹಲವು ಪ್ರಕರಣಗಳನ್ನು ಎತ್ತಿಕೊಂಡು ಹೋರಾಟ ನಡೆಸುತ್ತಾ ಇದ್ದರೂ ಜನರಿಂದ ದೂರ ನಿಂತು ಬಿಜೆಪಿ ಮಜಾ ನೋಡುತ್ತಿದೆ. ಸಂಘ ಪರಿವಾರದ ಬಹಳ ಸ್ಟ್ರಾಂಗ್ ಅನ್ನುವ ಲೀಡರ್ ಗಳೆಂದು ಫೋಸ್ ನೀಡುವ ಯಾರಿಗೂ ವೀರೇಂದ್ರ ಹೆಗ್ಗಡೆ ತಂಡದ ಎದುರು ಮಾತಾಡುವ ಬ್ಯಾಟರಿ ಇಲ್ಲ. ಒಂದು ಸಣ್ಣ ಕೋಳಿ ಜಗಳ – ಹಿಂದೂ ಮತ್ತು ಮುಸ್ಲಿಂ ಹುಡುಗರ ಮಧ್ಯೆ ನಡೆದರೆ ಸಾಕು, ಸಾಲು ಸಾಲು ಸ್ಟೇಟ್ ಮೆಂಟ್ ಗಳು ಹೊರಬರುತ್ತವೆ. ಅತ್ತ ಮೈಸೂರಿನ ಪ್ರತಾಪ್ ಸಿಂಹ, ಬೆಂಗಳೂರಿನ ತೇಜಸ್ವಿ ಸೂರ್ಯ, ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ, ಹಿಂದೂ ಹೋರಾಟದ ಉತ್ಸಾಹಿ ಹುಡುಗ ಶರಣ್ ಪಂಪ್ ವೆಲ್, ಹಿಂದೂ ಹೃದಯ ಸಾಮ್ರಾಟ್ ನಾಮಾಂಕಿತ ಅರುಣ್ ಪುತ್ತಿಲ, ಮುಂದಿನ ಬಾರಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಿಶೋರ್ ಬೊಟ್ಯಾಡಿ, ಕಾಮಿಡಿ ಸ್ಟಾರ್ ಪ್ರತಾಪ್ ಸಿಂಹ ನಾಯಕ, ನಳಿನ್ ಕುಮಾರ್ ಕಟೀಲ್- ಎಲ್ಲಿದೆ ನಿಮ್ಮ ಶೌರ್ಯ ಪ್ರದರ್ಶನ ? ಇಲ್ಲಿ ಹಿಂದೂಗಳು ಸಂತ್ರಸ್ತರಾಗಿ ದೀನ ಭಾವದಿಂದ ನಿಮ್ಮತ್ತ ನೋಡುತ್ತಿದ್ದಾರೆ. ನಿಮ್ಮದೇ ಸಮುದಾಯವನ್ನು, ನಿಮ್ಮದೇ ಮತದಾರರನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿ ಶೋಷಿಸುತ್ತಿರುವ ವ್ಯಕ್ತಿಯ ಮೇಲೆ ಯಾಕೆ ನೀವಿನ್ನೂ ಪ್ರತಿಭಟಿಸುವ ಮನಸ್ಸು ಮಾಡಿಲ್ಲ ?

ಇವತ್ತು ಹಿಂದೂ ಧರ್ಮದ ಆಧಾರದಲ್ಲಿ ಕರಾವಳಿಯಲ್ಲಿ ಓಟು ಕೇಳುವ ಬಿಜೆಪಿ ಮತ್ತು ಸಂಘ ಪರಿವಾರ ಸೌಜನ್ಯಾ ಹೋರಾಟದಲ್ಲಿ ಜನರ ವಿರುದ್ಧವಾಗಿ ಕೆಲಸ ಮಾಡಿದೆ, ಮಾಡುತ್ತಿದೆ. ವೀರೇಂದ್ರ ಹೆಗ್ಗಡೆಯವರ ದಾಸ್ಯದಲ್ಲಿ ಬಿಜೆಪಿ ಮತ್ತು ಪರಿವಾರ ಸಿಕ್ಕಿಕೊಂಡು ನರಳುತ್ತಿದೆ. ಇಂತಹಾ ಕಠಿಣ ಸಂದರ್ಭದಲ್ಲಿಯೂ ಯಾವುದೇ ನಾಯಕರುಗಳು ಹೋರಾಟಕ್ಕೆ ಮುಂದೆ ಬರುತ್ತಿಲ್ಲ. ಆಟೋ ಡ್ರೈವರ್ ಗಳು, ಕೂಲಿ ಕಾರ್ಮಿಕರು, ಫಿಟ್ಟರ್ ಎಲೆಕ್ಟ್ರಿಷಿಯನ್, ಗ್ಯಾರೇಜಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುವವರು, ಮುಖ್ಯವಾಗಿ ಕೃಷಿಕರು, ಅಸಹಾಯಕರು, ತಮ್ಮದೇ ನೂರಾರು ಬದುಕಿನ ಬವಣೆಗಳಲ್ಲಿ ಬೆಂದು ಹೋಗುತ್ತಿರುವವರು ತಮ್ಮ ಬದುಕಿನ ಕಷ್ಟಗಳ ನಡುವೆಯೂ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಕೊನೆಗೆ ಹಿಂದುಗಳ ಸಾಂಪ್ರದಾಯಿಕ ವಿರೋಧಿಗಳು ಎಂದು ಬಿಂಬಿಸಲಾಗಿರುವ ಮುಸ್ಲಿಮರು ಮತ್ತು ಕ್ರಿಶ್ಚನ್ ರು ಕೂಡಾ ಸೌಜನ್ಯ ಹೋರಾಟಗಳಿಗೆ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಅಲ್ಲಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ಹೆಸರಿನ ಮಾಧ್ಯಮಗಳು ಜಾಹೀರಾತಿನ ಎಂಜಲು ಕಾಸಿಗೆ ಜೊಲ್ಲು ಸುರಿಸಿ ಪೆನ್ನು ಮತ್ತು ಮನಸ್ಸು ಮಡಚಿಕೊಂಡು ಅಕಾಲಿಕ ವೈಧವ್ಯ ಬರಿಸಿಕೊಂಡು ಮೂಲೆಯಲ್ಲಿ ಕುಳಿತಿವೆ. ಇಂತಹ ಸಂದರ್ಭದಲ್ಲಿ ನಾವೆಲ್ಲ ಇದ್ದ ಶಕ್ತಿಯನ್ನು ಒಗ್ಗೂಡಿಸಿಕೊಂಡು ಒಂದು ಪ್ರಶ್ನೆ ಮಾಡಬೇಕಿದೆ. ಬಿಜೆಪಿ ನಾಯಕರುಗಳೇ, ‘ಸಂಸದ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಸಂಸದ ಸ್ಥಾನದಿಂದ ಕಿತ್ತು ಹಾಕುವುದು ಯಾವಾಗ ?’. ಹೌದು, ಬಿಜೆಪಿ ಸಂಸದ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭಾ ಸ್ಥಾನದಿಂದ ಕಿತ್ತು ಹಾಕಿದ ನಂತರ ಮತ್ತೆ ಓಟು ಕೇಳಲು ಬನ್ನಿ ಅಂತ ಬಿಜೆಪಿ ಮತದಾರರು ಗಟ್ಟಿಯಾಗಿ ಕೇಳಬೇಕಿದೆ. ಅಲ್ಲದೆ, ಆ ಕೆಲಸ ಮೊದಲು ಮಾಡಿ. ನಂತರ ನಿಮ್ಮ ‘ಶೌರ್ಯ ಪ್ರದರ್ಶನ’ ಮಾಡಿ- ಎಂದು ಹಿಂದೂ ನಾಯಕರನ್ನು ಜನ ಒತ್ತಾಯಿಸಲು ಆರಂಭಿಸಿದ್ದಾರೆ. ಕೌಂಟ್ ಡೌನ್ ಶುರು ಆಗಿದೆ !

ವೀರೇಂದ್ರ ಹೆಗ್ಗಡೆಯಿಂದ ಬಿಜೆಪಿಗೆ ಬಿಗ್ ಲಾಸ್ !

ಅಲ್ಲದೆ, ವೀರೇಂದ್ರ ಹೆಗ್ಗಡೆಯಿಂದ ಬಿಜೆಪಿಗೆ ಯಾವುದೇ ಲಾಭವಿಲ್ಲ. ಈಗಾಗಲೇ ಕರಾವಳಿಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಇಮೇಜ್ ನಿಕೃಷ್ಟ ಮಟ್ಟಕ್ಕೆ ತಲುಪಲು ಕಾರಣ ಇದೇ ವೀರೇಂದ್ರ ಹೆಗ್ಗಡೆಯವರನ್ನು ಬೆಂಬಲಿಸಿದ ಪರಿವಾರದ ನಡೆ ಕಾರಣ. ಅವರು ಬಿಜೆಪಿಗೆ ನುಂಗಲಾರದ ಉಗಿಯಲಾರದ ಕಹಿ ತುತ್ತು. ಅಲ್ಲದೆ ಸಂಘಟನಾತ್ಮಕವಾಗಿ ಕೂಡ ವೀರೇಂದ್ರ ಹೆಗ್ಗಡೆಯವರಿಂದ ಬಿಜೆಪಿಗೆ ಯಾವುದೇ ಲಾಭವಿಲ್ಲ. ಇವರ ನಾಮ ನಿರ್ದೇಶನದಿಂದ ಬಿಜೆಪಿಗೆ ಏನೇನೂ ಲಾಭವಾಗಿಲ್ಲ. ಬೇರೆ ಯಾವುದೇ ವ್ಯಕ್ತಿಗೆ ನೀಡುತ್ತಿದ್ದರೂ, ಪಕ್ಷದ ಪರವಾಗಿ ಬೂತ್ ಮಟ್ಟಕ್ಕೆ ಇಳಿದು ಕೆಲಸ ಮಾಡುತ್ತಿದ್ದರು ಎನ್ನುವುದು ಸಾಮಾನ್ಯ ಕಾರ್ಯಕರ್ತನ ಅಭಿಪ್ರಾಯ. ದಿನದಿಂದ ದಿನಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದ ಇಮೇಜ್ ಹಾಳಾಗುತ್ತಿದೆ. ಬೇಗ ಸರಿ ಮಾಡಿಕೊಳ್ಳಿ ಎನ್ನುವುದು ನಮ್ಮ ಎಚ್ಚರಿಕೆಯ ಕರೆಗಂಟೆ. ತಾಳ್ಮೆಯಿಂದ ಕೇಳಿಸಿಕೊಂಡು ಕಾರ್ಯೋನ್ಮುಖ ಆಗುವವನಿಗೆ ಭವಿಷ್ಯ ಇರುತ್ತೆ ಅನ್ನೋದು ಕೊನೆಯಲ್ಲಿ ನಾವು ಹೇಳುವ ಕಿವಿಮಾತು.

ಈಗ ಬಿಜೆಪಿಯನ್ನು ತೀರಾ ಒತ್ತಾಯ ಮಾಡೋ ಬರಗೆಟ್ಟ ಸ್ಥಿತಿ ಮತದಾರರಿಗೆ ಇಲ್ಲ: ಕಾರಣ, ಹಲವು ಉಚಿತ -ಖಚಿತಗಳನ್ನು ನೀಡಿ ಬಲವರ್ಧನೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಜನರ ಮುಂದೆ ಹೊಸ ರೂಪದಿಂದ ಸ್ಪಷ್ಟ ಆಯ್ಕೆಯಾಗಿ ಬಂದು ನಿಂತಿದೆ. ಅಲ್ಲದೆ, ಕಾಂಗ್ರೆಸ್ ನ ಹಲವು ನಾಯಕರುಗಳು ಕಾಲದಿಂದ ಕಾಲಕ್ಕೆ ಸೌಜನ್ಯ ಹೋರಾಟ ಮತ್ತು ಇತರ ಸಂದರ್ಭಗಳಲ್ಲಿ ಜನರ ಮತ್ತು ಸಂತ್ರಸ್ತ ಕುಟುಂಬದ ಪರವಾಗಿ ನಿಂತಿದ್ದಾರೆ. ಕಾಂಗ್ರೆಸ್ ನ ಕೆಲವರು ತಮ್ಮದೇ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಇನ್ನು ಕೂಡಾ ಸುಮ್ಮನೆ ಕೂತರೆ ನಿಮ್ಮನ್ನು – ನಮ್ಮನ್ನು ಆ ಮಾತನಾಡದ ಮಂಜುನಾಥ ಕೂಡಾ ಕ್ಷಮಿಸಲಾರ. ಪ್ರಶ್ನಿಸಲು ಪ್ರಾರಂಭಿಸಿ. ನಿಮ್ಮನ್ನು ಭೇಟಿಯಾಗುವ ಪ್ರತಿ ಬಿಜೆಪಿ ನಾಯಕರುಗಳನ್ನು ಮತ್ತು ಹಿಂದೂ ಮುಖಂಡರುಗಳನ್ನು – ‘ವೀರೇಂದ್ರ ಹೆಗ್ಗಡೆಯವರ ಪದಚ್ಯುತಿ ಯಾವಾಗ ಎಂದು ಪ್ರಶ್ನಿಸಿ. ಒಂದು ಜನಾಂದೋಲನ ನಿಮ್ಮಿಂದಲೇ ಆರಂಭವಾಗಲಿ !!!

Leave A Reply

Your email address will not be published.