Dakshina Kannada ಜಿಲ್ಲೆಯ ಮೊದಲ ಪಿಂಕ್ ಟಾಯ್ಲೆಟ್ ಲೋಕಾರ್ಪಣೆಗೆ ಸಿದ್ಧ!
ಮಂಗಳೂರು: ಮನೆಯಿಂದ ಹೊರಬಂದರೆ ಸಾಕು ಹೆಣ್ಣುಮಕ್ಕಳಿಗೆ ಬರ್ಹಿದೆಸೆಯ ಸಮಸ್ಯೆ ಕಾಡುತ್ತದೆ. ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಮಹಿಳೆಯರು ಪರದಾಡುವುದು ಸಾಮಾನ್ಯ ಸಂಗತಿಯಾಗಿದೆ. ಹಾಗಾಗಿ ಇದೀಗ ಈ ಎಲ್ಲಾ ಮುಜುಗರ, ಸಮಸ್ಯೆಗೆ ಪರಿಹಾರ ನೀಡಲೆಂದು ಮಹಿಳೆಯರಿಗೊಂದು ಸಿಹಿ ಸುದ್ದಿ ಇದೆ. ಮಹಿಳಾ ಅಧಿಕಾರಿಯೊಬ್ಬರ ಕಾರಣದಿಂದ ದಕ್ಷಿಣ ಜಿಲ್ಲೆಯಲ್ಲೇ ಮೊದಲ ಪಿಂಕ್ ಟಾಯ್ಲೆಟ್ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಈ ಪಿಂಕ್ ಟಾಯ್ಲೆಟ್ ಬಂಟ್ವಾಳ ಮಿನಿವಿಧಾನಸೌಧದ ಸನಿಹದಲ್ಲೇ ನಿರ್ಮಾಣವಾಗಿದೆ. ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಪರಿಕಲ್ಪನೆಯಲ್ಲಿ ಈ ಪಿಂಕ್ ಟಾಯ್ಲೆಟ್ ರೂಪ್ ಪಡೆದುಕೊಂಡಿದೆ. ಇದು ವಿಶೇಷವಾಗಿ ಮಹಿಳೆಯರಿಗಾಗಿ ನಿರ್ಮಿಸಲಾಗಿದೆ. ವಿಶ್ರಾಂತಿ ಕೊಠಡಿಯನ್ನೂ ಕೂಡ ಇಲ್ಲಿ ನಿರ್ಮಿಸಲಾಗಿದ್ದು, ಎಸಿ ಕೂಡಾ ಇದಕ್ಕೆ ಅಳವಡಿಸಲಾಗಿದೆ. ಒಳ್ಳೆಯ ಯೋಜನೆ ಎಂದು ಹೇಳಬಹುದು. ಫೀಡಿಂಗ್ ಏರಿಯಾ ಎಂಬುವುದು ಕೂಡಾ ಇಲ್ಲಿ ನಿರ್ಮಿಸಿದ್ದು ನಿಜಕ್ಕೂ ಮಹಿಳೆಯರ ಸಮಸ್ಯೆಗೆ ಇದು ನಿಜಕ್ಕೂ ಸಹಕಾರಿ.
ಅಷ್ಟು ಮಾತ್ರವಲ್ಲದೇ ಇಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ವ್ಯವಸ್ಥೆ ಕೂಡಾ ಇದ್ದು ಅಗತ್ಯ ಸಂದರ್ಭದಲ್ಲಿ ಸಹಕಾರಿ. ತಾಲೂಕು ಕಚೇರಿ, ನ್ಯಾಯಾಲಯ ಸೇರಿದಂತೆ ಹಲವು ಸರಕಾರಿ ಕಚೇರಿಗಳು ಇಲ್ಲಿ ಸುತ್ತಮುತ್ತನೇ ಇರುವುದರಿಂದ, ಹಾಗೂ ಇಲ್ಲಿಗೆ ಬರುವ ಮಹಿಳೆಯರಿಗೆ ಇದು ನಿಜಕ್ಕೂ ಉಪಕಾರಿ. ತೊಟ್ಟಿಲು ಅಳವಡಿಸುವ ಯೋಚನೆ ಕೂಡಾ ಇರುವುದರಿಂದ ಈ ಮೂಲಕ ವೈಯಕ್ತಿಕ ಸಮಸ್ಯೆಗೆ ಪರಿಹಾರ ಒಂದೇ ಸೂರಿನಡಿಯಲ್ಲಿ ಸಿಗುತ್ತದೆ.
26 ಲಕ್ಷ ಅನುದಾನವನ್ನು ಅಮೃತ ನಿರ್ಮಲ ನಗರ ಯೋಜನೆಯಲ್ಲಿ ಬಂಟ್ವಾಳ ಪುರಸಭೆಯು ಈ ಪಿಂಕ್ ಟಾಯ್ಲೆಟ್‌ಗೆ ಬಳಕೆ ಮಾಡಿದೆ. ಕಾಮಗಾರಿ ಅಂತಿಮ ಹಂತದಲ್ಲಿದೆ. ಸಾಮಾನ್ಯ ಮಹಿಳೆಯರ ಕಷ್ಟವನ್ನು ಅರಿತು ನಿರ್ಮಾಣಗೊಂಡ ಈ ಪಿಂಕ್ ಟಾಯ್ಲೆಟ್ ಸದ್ಯ ಲೋಕಾರ್ಪಣೆಯ ಹೊಸ್ತಿಲಿನಲ್ಲಿದೆ.