American Airlines: ದಂಪತಿಗಳ ಮೈಯಿಂದ ಬಂತು ‘ಆ ಟೈಪ್’ ವಾಸನೆ – ಕೂಡಲೇ ವಿಮಾನದಿಂದ ಕೆಳಗಿಳಿಸಿದ ಏರ್ ಲೈನ್ಸ್ ಸಿಬ್ಬಂದಿ
American Airlines: ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣದ ವೇಳೆ ಅನೇಕ ವಿಚಿತ್ರ ಘಟನೆಗಳು ನಡೆದಿರುವ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಅಂತೆಯೇ ಇದೀಗ ಅಮೆರಿಕನ್ ಏರ್ಲೈನ್ಸ್ ನಲ್ಲಿ(American Airlines) ವಿಚಿತ್ರ ಘಟನೆ ನಡೆದಿದೆ. ಆದರೆ ಇದು ಇದುವರೆಗೂ ನಡೆದ ಘಟನೆಗಳಿಗಿಂತ ಸ್ವಲ್ಪ ವಿಭಿನ್ನವಾದ ಘಟನೆಯಾಗಿದ್ದು, ಕೇವಲ ಮನುಷ್ಯನ ಬೆವರಿನ ವಾಸನೆಗಾಗಿ ದಂಪತಿಯೊಂದನ್ನು ವಿಮಾನದಿಂದ ಇಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಕೆಲ ದಿನಗಳ ಹಿಂದೆ ವಿಮಾನದಲ್ಲಿ ಈರುಳ್ಳಿ ವಾಸನೆಯಿಂದಾಗಿ ಶಾರ್ಜಾಗೆ ಹೊರಟಿದ್ದ ವಿಮಾನ ಕೊಚ್ಚಿಗೆ ವಾಪಾಸ್ ಬಂದ ಘಟನೆ ಸುದ್ದಿಯಾಗಿತ್ತು. ಅಷ್ಟೇ ಅಲ್ಲದೇ, ನಾಯಿ ಬಿಡ್ತಿದ್ದ ಗ್ಯಾಸ್ ವಾಸನೆಗೆ ಬೇಸತ್ತ ದಂಪತಿ ಟಿಕೆಟ್ ಹಣ ವಾಪಸ್ ಪಡೆದಿದ್ದರು. ಈಗ ಮನುಷ್ಯರ ಬೆವರಿನ ವಾಸನೆ ನೆಪ ಒಡ್ಡಿ ದಂಪತಿಗೆ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಿಲ್ಲ. ಎಲ್ಲರ ಮುಂದೆ ಅವಮಾನಿಸಿ ಅವರನ್ನು ವಿಮಾನದಿಂದ ಕೆಳಗೆ ಇಳಿಸಲಾಗಿದೆ. ಸದ್ಯ ಅವಮಾನ ಎದುರಿಸದ ದಂಪತಿ ಏರ್ಲೈನ್ಸ್ ವಿರುದ್ಧ ದೂರು ನೀಡಿದ್ದಾರೆ.
ಏನಿದು ಘಟನೆ?
ಪ್ರಯಾಣದ ವೇಳೆ ಪರ್ಪ್ಯೂಮ್ ವಾಸನೆ, ಬೆವರಿನ ವಾಸನೆ ಬರೋದು ಕಾಮನ್. ಆದ್ರೆ ಕೆಲವರ ಬೆವರಿನ ವಾಸನೆ ಮಾತ್ರ ಇನ್ನೊಬ್ಬರಿಗೆ ತಲೆನೋವು ಬರುವಂತೆ ಮಾಡುತ್ತದೆ. ಅಂತೆಯೇ ಯೋಸ್ಸಿ ಆಡ್ಲರ್ ಹಾಗೂ ಅವರ ಹೆಂಡತಿ ಜೆನ್ನಿ ಅಮೆರಿಕ (America) ದ ಡೆಟ್ರಾಯಿಟ್ ನಿವಾಸಿಗಳು. ಅವರು ತಮ್ಮ 19 ತಿಂಗಳ ಮಗಳೊಂದಿಗೆ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇವರಿಬ್ಬರು ಪ್ರಯಾಣ ಬೆಳೆಸುವವರಿದ್ದರು. ದಂಪತಿ ತಮ್ಮ ಮನೆಗೆ ಹೋಗುತ್ತಿದ್ದರು. ಆಗ ಮಹಿಳೆಯ ದೇಹದಿಂದ ಕೆಟ್ಟ ಬೆವರು ವಾಸನೆ ಬರುತ್ತಿದೆ ಎನ್ನುವ ಕಾರಣಕ್ಕೆ ವಿಮಾನ ಸಿಬ್ಬಂದಿ ದಂಪತಿಯನ್ನು ವಿಮಾನದಿಂದ ಕೆಳಗೆ ಇಳಿಸಿದ ಘಟನೆ ನಡೆದಿದೆ. ಈ ಘಟನೆ ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ನಡೆದಿದೆ. ಅಮೆರಿಕನ್ ಏರ್ಲೈನ್ಸ್ ವಿರುದ್ಧ ದಂಪತಿ ದೂರು ದಾಖಲಿಸಿದ್ದಾರೆ.
ಆಡ್ಲರ್ ಹೇಳಿದ್ದೇನು?
ವಿಮಾನದಿಂದ ಕೆಳಗೆ ಇಳಿಸುವ ವೇಳೆ ಯಾವುದೇ ಕಾರಣವನ್ನು ಹೇಳಿರಲಿಲ್ಲ ಎಂದು ದಂಪತಿ ಆರೋಪ ಮಾಡಿದ್ದಾರೆ. ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಅವರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಕೊನೆಯಲ್ಲಿ ಈ ವಿಷಯ ತಿಳಿದಿದೆ. ಇನ್ನು ವಿಮಾನದಿಂದ ಇಳಿಸಲು ಇದು ಅಸಲಿ ಕಾರಣವೇ ಅಲ್ಲ ಎನ್ನುತ್ತಾರೆ ಆಡ್ಲರ್ : ಪತ್ನಿ ದೇಹದಿಂದ ಬೆವರಿನ ವಾಸನೆ ಬರ್ತಿದೆ ಎನ್ನುವ ಕಾರಣಕ್ಕೆ ನಮ್ಮನ್ನು ವಿಮಾನದಿಂದ ಇಳಿಸಿಲ್ಲ. ವಾಸ್ತವವಾಗಿ ಆಕೆ ದೇಹದಿಂದ ಯಾವುದೇ ಬೆವರಿನ ವಾಸನೆ ಬರ್ತಾ ಇರಲಿಲ್ಲ. ಇದಕ್ಕೆ ಬೇರೆಯದೇ ಕಾರಣವಿದೆ ಎಂದು ಆಡ್ಲರ್ ದೂರಿದ್ದಾರೆ. ಆಡ್ಲರ್ ಪ್ರಕಾರ, ಅವರು ಯಹೂದಿಯಾಗಿರುವುದೇ ವಿಮಾನದಿಂದ ಕೆಳಗೆ ಇಳಿಸಲು ಕಾರಣವೆಂದು ಹೇಳಿದ್ದಾರೆ.
ಅಮೆರಿಕಾ ಏರ್ಲೈನ್ಸ್ ಹೇಳಿದ್ದೇನು?
ಅಮೆರಿಕದ ವಿಮಾನಯಾನ ಸಂಸ್ಥೆಗಳು ಕೂಡ ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸ್ಪಷ್ಟನೆ ನೀಡಿದೆ. ದಂಪತಿ ವಿಮಾನ ಹತ್ತುವಾಗ ಅನೇಕ ಪ್ರಯಾಣಿಕರು ಅವರ ದೇಹದ ವಾಸನೆಯ ಬಗ್ಗೆ ದೂರು ನೀಡಿದ್ದರು. ಹಾಗಾಗಿ ಅವರನ್ನು ವಿಮಾನದಿಂದ ಇಳಿಸಲಾಯ್ತು. ಏರ್ಲೈನ್ಸ್ ಬರೀ ಅವರನ್ನು ವಿಮಾನದಿಂದ ಕೆಳಗೆ ಇಳಿಸಿಲ್ಲ, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಿತ್ತು, ಹೊಟೇಲ್ ರೂಮ್ ಹಾಗೂ ಆಹಾರ ಚೀಟಿಗಳನ್ನು ಸಹ ನೀಡಲು ಮುಂದಾಗಿತ್ತು. ಆದ್ರೆ ದಂಪತಿ ಇದನ್ನು ಒಪ್ಪಿಕೊಳ್ಳಲಿಲ್ಲ ಎಂದು ಏರ್ಲೈನ್ಸ್ ಹೇಳಿದೆ.