ಧರ್ಮಸ್ಥಳ ಸೌಜನ್ಯಳ ಪಾಂಗಾಳ ಮನೆಗೆ ಬೆಳ್ತಂಗಡಿ ಶಾಸಕ ಪೂಂಜಾ ಭೇಟಿ, ಆಹ್ವಾನ | ಆ.27 ರ ಬಿಜೆಪಿಯ ಸಭೆಗೆ ತಾಯಿ ಕುಸುಮಾವತಿ, ತಿಮರೋಡಿ ಬರ್ತಾರಾ?; ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆ ಭಾಗಿ ಆಗ್ತಾರಾ?!
ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ (Harish Poonja) ಅವರ ನೇತೃತ್ವದಲ್ಲಿ ಕೆಲ ಬಿಜೆಪಿ ಮುಖಂಡರುಗಳು ಸೌಜನ್ಯ ರ ತಾಯಿ ಕುಸುಮಾವತಿ ಅವರನ್ನು ಭೇಟಿಯಾಗಿದ್ದಾರೆ. ಇವತ್ತು ಆಗಸ್ಟ್ 24 ರಂದು ದಿವಂಗತ ಸೌಜನ್ಯ ಗೌಡರ ಪಾಂಗಾಳದ ಮನೆಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕುಟುಂಬದ ಜೊತೆ ಮಾತುಕತೆ ನಡೆಸಿದರು. ಸೌಜನ್ಯ ಬಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಭೇಟಿ ಕುತೂಹಲ ಕೆರಳಿಸಿದೆ.
ಸೌಜನ್ಯ ಅತ್ಯಾಚಾರ ಮತ್ತು ಹತ್ಯಾ ಪ್ರಕರಣದ ನೈಜ ಆರೋಪಿಗಳ ಪತ್ತೆಗಾಗಿ ಆಗ್ರಹಿಸಿ ಆಗಸ್ಟ್ 27 ರಂದು ಭಾರತೀಯ ಜನತಾ ಪಾರ್ಟಿಯು, ತನ್ನ ಎಲ್ಲಾ ಕರಾವಳಿಯ ಶಾಸಕರುಗಳೊಂದಿಗೆ ಸಂಸದರೊಂದಿಗೆ ಮತ್ತು ವಿಧಾನ ಪರಿಷತ್ ಸದಸ್ಯರೊಂದಿಗೆ ಬೆಳ್ತಂಗಡಿಯಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿದೆ ಎನ್ನುವ ವಿಷಯ ಎಲ್ಲರಿಗೂ ತಿಳಿದ ವಿಷಯವೇ. ಈ ಪ್ರತಿಭಟನಾ ಹೋರಾಟದಲ್ಲಿ ಭಾಗಿಯಾಗುವಂತೆ ಸೌಜನ್ಯ ತಾಯಿ ಕುಸುಮಾವತಿ (Soujanya mother) ಅವರನ್ನು ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾರವರು ಆಹ್ವಾನಿಸಿದ್ದಾರೆ.
ಬರುವ ಆಗಸ್ಟ್ 27 ರಂದು ಬೆಳ್ತಂಗಡಿಯ ಪ್ರತಿಭಟನಾ ರ್ಯಾಲಿಯಲ್ಲಿ ಕುಮಾರಿ ಸೌಜನ್ಯ ಅವರ ತಾಯಿ ಕುಸುಮಾವತಿಯವರು ಭಾಗವಹಿಸುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಹಜವಾಗಿ ಸೌಜನ್ಯ ಹೋರಾಟದ ಬೃಹತ್ ಸಮಾವೇಶಗಳಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯ ಪ್ರಕರಣದ ಹೋರಾಟದ ರೂವಾರಿ ಮಹೇಶ್ ಶೆಟ್ಟಿ ತಿಮರೋಡಿಯವರು ಭಾಗವಹಿಸುತ್ತಾರೆ. ಆದರೆ, 27 ರ ಬಿಜೆಪಿ ಉದ್ದೇಶಿಸಿರುವ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲು ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಆಹ್ವಾನವಿಲ್ಲ ಎನ್ನುವ ಬ್ರೇಕಿಂಗ್ ಸುದ್ದಿ ಇದೀಗ ಲಭ್ಯವಾಗಿದೆ.
ದಕ್ಷಿಣ ಕನ್ನಡ ಉಡುಪಿಯ ಬಿಜೆಪಿಯ ಎಲ್ಲಾ ಶಾಸಕರುಗಳು ಮತ್ತು ಪರಿಷತ್ ಸದಸ್ಯರು ಸಂಸತ್ ಸದಸ್ಯರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುತ್ತಾರೆ. ಆ ಸಭೆಯಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆಯವರು ಭಾಗವಹಿಸುತ್ತಾರಾ ಎನ್ನುವುದು ತಣಿಯದ ಕುತೂಹಲದ ವಿಚಾರ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಸೀತಾರಾಮ್ ಬೆಳಾಲು ಮತ್ತು ಜಯಂತ ಗೌಡ ಗುರಿಪಳ್ಳ ಇದ್ದರು.