ಪುತ್ತೂರು: 2008 ರಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಹಿಳೆಯ ಕೊಲೆ ಪ್ರಕರಣ!!ರಕ್ಕಸ ಕೃತ್ಯ ಎಸಗಿದ್ದ ಆರೋಪಿಯ ಬಿಡುಗಡೆಗೆ ಸಜ್ಜು-ತೀವ್ರ ಆಕ್ಷೇಪ
ಪುತ್ತೂರು:ಸುಮಾರು 15 ವರ್ಷಗಳ ಹಿಂದೆ ಸಂಬಂಧಿಕರ ಮದುವೆಗೆ ತೆರಳಿ ನಾಪತ್ತೆಯಾಗಿದ್ದ ಮಹಿಳೆ ಪುತ್ತೂರು ತಾಲೂಕಿನ ಕೋಡಿಂಬಾಡಿಯ ಶೀನಪ್ಪ ಪೂಜಾರಿ ಎಂಬವರ ಪತ್ನಿ ವಿನಯ ಭೀಕರ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ತುಂಬೆ ನಿವಾಸಿ ದಯಾನಂದ ಪೂಜಾರಿಯ ಬಿಡುಗಡೆಗೆ ಕುಟುಂಬ ಸಹಿತ ಪೋಲಿಸ್ ಇಲಾಖೆ ಆಕ್ಷೇಪ ಸಲ್ಲಿಸಿದೆ. 2008 ರ ಸೆಪ್ಟೆಂಬರ್ 12 ರಂದು ನಡೆದಿದ್ದ ಭೀಕರ ಕೊಲೆ ಪ್ರಕರಣ ಇಡೀ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿ, ಪ್ರತಿಭಟನೆಗೆ ಕಾರಣವಾಗಿತ್ತು.
ಏನಿದು ಪ್ರಕರಣ?
2008 ರ ಸೆಪ್ಟೆಂಬರ್ 12 ರಂದು ಪುತ್ತೂರು ತಾಲೂಕಿನ ಕೋಡಿಂಬಾಡಿ ಪರನೀರು ನಿವಾಸಿ ಶೀನಪ್ಪ ಪೂಜಾರಿ ಎಂಬವರ ಪತ್ನಿ ವಿನಯ ಎಂಬವರು ಮುರದಲ್ಲಿರುವ ಸಭಾಭವನವೊಂದರಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆಗೆ ತೆರಳಿದ್ದು, ಆ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಫೀಲ್ಡ್ ಗಿಳಿದ ಪೊಲೀಸರು ಮಹಿಳೆಯ ಪತ್ತೆಗಾಗಿ ಎಲ್ಲೆಡೆ ಹುಡುಕಾಟ ಆರಂಭಿಸಿದ್ದರು.
ಪೊಲೀಸರ ತನಿಖೆಯಲ್ಲಿ ಪ್ರಗತಿ ಕಾಣದೆ ಇದ್ದಾಗ ಮಹಿಳಾ ಸಂಘಟನೆ ಸಹಿತ ಇನ್ನಿತರ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದ್ದು, ಅಂದಿನ ಶಾಸಕ,ಸಂಸದ ಸಚಿವರಿಂದಲೂ ಪೊಲೀಸರಿಗೆ ಶೀಘ್ರ ತನಿಖೆಗೆ ಆದೇಶ ಬಂದಿತ್ತು.ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮುಂದುವರಿದ ತನಿಖೆಯಲ್ಲಿ ಕಾಲ್ ಲಿಸ್ಟ್ ನಲ್ಲಿದ್ದ ಅದೊಂದು ನಂಬರ್ ತನಿಖೆಯ ಹಾದಿಯನ್ನೇ ಬದಲಾಯಿಸಿದ್ದು,ಆಕೆಯ ಮೊಬೈಲ್ ಗೆ ಬಂದಿದ್ದ ಅತೀ ಹೆಚ್ಚು ಕರೆಗಳು ತುಂಬೆಯ ದಯಾನಂದ ಪೂಜಾರಿಯದ್ದಾಗಿದ್ದರಿಂದ ಆತನ ಮೇಲೆಯೇ ಅನುಮಾನ ಹೆಚ್ಚಾಗಿ ಪೊಲೀಸರ ಜೀಪು ತುಂಬೆಯತ್ತ ಹೊರಟು ನಿಂತಿತ್ತು.
ತುಂಬೆ ಸಹಿತ ಬಂಟ್ವಾಳ ತಾಲೂಕಿನಾದ್ಯಂತ ಶೋಧ ನಡೆಸಿದ್ದ ಪೊಲೀಸರ ತಂಡ ಅಲ್ಲಿ ಆತನ ಸುಳಿವು ಸಿಗದೇ ವಾಪಸ್ಸಾಗಿತ್ತು. ಬಳಿಕ ಸೆಪ್ಟೆಂಬರ್ 17ರಂದು ದಯಾನಂದನನ್ನು ವಶಕ್ಕೆ ಪಡೆದು ಟ್ರೀಟ್ ಮೆಂಟ್ ಶುರುಮಾಡಿದ್ದರು.ಪೊಲೀಸರ ತನಿಖೆಯಲ್ಲಿ ಅಸ್ಪಷ್ಟ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆತ ನಿರಪರಾಧಿ ಎನ್ನುವ ಅನುಮಾನ ಮೂಡಿತ್ತು. ಮೂರು ದಿನಗಳ ಕಾಲ ನಡೆದಿದ್ದ ಹೆಚ್ಚಿನ ವಿಚಾರಣೆಯಲ್ಲಿ ನಿಜ ಬಯಲಾಗಿದ್ದು, ಆಕೆಯನ್ನು ಕೊಲೆ ಮಾಡಿ ಮಣ್ಣಿನಲ್ಲಿ ಹೂತು ಹಾಕಿರುವುದಲ್ಲದೇ, ಆಕೆಯ ಮೈಮೇಲಿದ್ದ ಒಡವೆಗಳನ್ನು ದೋಚಿ ಸ್ವಲ್ಪ ಮಾರಿರುವುದನ್ನು ಒಪ್ಪಿಕೊಂಡಿದ್ದಾನೆ.
ಆತನ ಹೇಳಿಕೆಯಂತೆ ಶವದ ಪತ್ತೆಗೆ ಬಂಟ್ವಾಳ ತಾಲೂಕಿನ ಪುದು-ತುಂಬೆ ಗ್ರಾಮಗಳ ಮಧ್ಯೆ ಇರುವ ಮಾರಿಪಳ್ಳ ಸಮೀಪದ ಕುಮ್ಡೇಲು ಬಳಿಯ ನಿರ್ಜನ ಪ್ರದೇಶಕ್ಕೆ ತೆರಳಿದ ಪೊಲೀಸರ ತನಿಖಾ ತಂಡ ಮಣ್ಣಿನಡಿಯಲ್ಲಿ ಹೂತು ಹಾಕಿದ್ದ ಶವವನ್ನು ಸ್ಥಳೀಯ ತಹಶೀಲ್ದಾರ್ ಸಮ್ಮುಖದಲ್ಲಿ ಹೊಂಡದಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು,ಬಳಿಕ ಶವ ಹೂತು ಹಾಕಲು ಆತನಿಗೆ ಸಹಕಾರ ನೀಡಿದ್ದಾನೆ ಎನ್ನುವ ಆರೋಪದಲ್ಲಿ ಪೊನ್ಮಲ ನಿವಾಸಿ ಆನಂದ ಪೂಜಾರಿ ಎಂಬಾತನನ್ನು ಬಂಧಿಸಲಾಗಿತ್ತು.ಮಹಿಳೆಯನ್ನು ಬಲಾತ್ಕಾರ ಮಾಡಿ ಆಕೆಯ ಒಡವೆಗಳನ್ನು ದೋಚಿ ಕೊಲೆ ನಡೆಸಿದ್ದು, ಸ್ವಲ್ಪ ಒಡವೆಗಳನ್ನು ಮಾರಿ ಉಳಿದವುಗಳನ್ನು ತನ್ನೊಂದಿಗೆ ಇರಿಸಿಕೊಂಡಿರುವುದಾಗಿ ಆರೋಪಿ ದಯಾನಂದ ಪೊಲೀಸರ ಮುಂದೆ ಸತ್ಯ ಕಕ್ಕಿದ್ದ.
ಆರೋಪಿಯ ಬಂಧನವಾಗುತ್ತಿದ್ದಂತೆ ಆಕ್ರೋಷಿತ ಸಂಘಟನೆಗಳು ಆತನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದು,2013 ರಲ್ಲಿ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಇನ್ನೋರ್ವ ಆರೋಪಿ ಆನಂದ ಪೂಜಾರಿಯನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿತ್ತು. ಸದ್ಯ ಸನ್ನಡತೆ ಆಧಾರದಲ್ಲಿ ದಯಾನಂದನ ಬಿಡುಗಡೆಗೆ ನ್ಯಾಯಾಲಯ ಕುಟುಂಬ ಸಹಿತ ಇಲಾಖೆಯ ಅಭಿಪ್ರಾಯ ಕೇಳಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸಂತ್ರಸ್ತ ಕುಟುಂಬದ ಅಭಿಪ್ರಾಯ ಸಂಗ್ರಹಿಸಿ ಆತನ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದೆ.