ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆದಿತ್ಯವಾರ ಬಿಸಿಸಿಐ ಕಾರ್ಯದರ್ಶಿ ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಪುತ್ರ ಜಯ್‌ಷಾ ಭೇಟಿ- ಅಮಿತ್ ಶಾ ಹೆಸರಿನಲ್ಲಿ ಅನ್ನದಾನಕ್ಕೆ ದೇಣಿಗೆ

 

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಿಸಿಸಿಐ ಕಾರ್ಯದರ್ಶಿ ಮತ್ತು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಪುತ್ರ ಜಯ್‌ಷಾ ಜು.30ರಂದು ಭೇಟಿ ನೀಡಿ ದೇವಳಕ್ಕೆ ದೇವರಿಗೆ ಆಶ್ಲೇಷಬಲಿ ಸೇವೆ ಸಮರ್ಪಿಸಿದರು.ಇವರೊಂದಿಗೆ ಅವರ ಪತ್ನಿ ರಿಷಿತಾ ಷಾ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಶ್ರೀ ದೇವಸ್ಥಾನದ ಅರ್ಚಕ ಸತ್ಯನಾರಾಯಣ ನೂರಿತ್ತಾಯರು ಜಯ್‌ಷಾ ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಬಳಿಕ ಹೊರಾಂಗಣದಲ್ಲಿರುವ ಶ್ರೀಹೊಸಳಿಗಮ್ಮ ದೇವಿಯ ದರುಶನ ಪಡೆದ ಅವರು ಪೂಜೆ ಸಲ್ಲಿಸಿದರು.ಬಳಿಕ ಶ್ರೀ ದೇವಳದಲ್ಲಿ ಷಾ ಕುಟುಂಬಸ್ಥರು ಪ್ರಸಾದ ಭೋಜನ ಸ್ವೀಕರಿಸಿದರು. ನಂತರ ಕೇಂದ್ರ ಗೃಹ ಮಂತ್ರಿ ಅಮಿಷಾ ಅವರ ಹೆಸರಿನಲ್ಲಿ ಶ್ರೀ ದೇವಳದಲ್ಲಿ ನಡೆಯುವ ನಿತ್ಯ ಅನ್ನ ದಾಸೋಹಕ್ಕೆ ದೇಣಿಗೆ ನೀಡಿ ಪ್ರಸಾದ ಸ್ವೀಕರಿಸಿದರು.

ಗೌರವಾರ್ಪಣೆ
ದೇವರ ದರ್ಶನದ ಬಳಿಕ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿಗೆ ಭೇಟಿ ನೀಡಿದ ಜಯ್‌ಷಾ ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರು ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು.

ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮತ್ತು ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ, ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್ ಹಾಗೂ ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್.ಟಿ ಸೂಕ್ತ ಬಂದೋಬಸ್ತ್ ಮಾಡಿದ್ದರು.

ಶ್ರೀ ದೇವರ ದರುಶನದಿಂದ ಅತೀವ ಸಂತಸ: ಜಯ್‌ಷಾ

ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಶ್ರೀ ದೇವರ ದರುಶನ ಪಡೆದದ್ದು ಅತೀವ ಸಂತಸ ತಂದಿದೆ.ಮುಂದೆ ಅನೇಕ ಬಾರಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರುಶನ ಪಡೆಯುವ ಕನಸು ಹೊಂದಿದ್ದು,ಇದನ್ನು ಶ್ರೀ ದೇವರು ನೆರವೇರಿಸುತ್ತಾರೆ ಎಂಬ ನಂಬಿಕೆ ನನ್ನದು ಎಂದು
ಜಯ್‌ ಷಾ ಹೇಳಿದರು.

Leave A Reply

Your email address will not be published.