Indian Railways kavach: ‘ಕವಚ್’ ಇದ್ದಿದ್ದರೆ ಒಡಿಶಾ ರೈಲು ಅಪಘಾತವನ್ನು ತಪ್ಪಿಸಬಹುದಿತ್ತೇ? ಏನಿದು ಭಾರತೀಯ ರೈಲ್ವೆಯ ಕವಚ್? ರೈಲು ದುರಂತವನ್ನು ಇದು ಹೇಗೆ ತಪ್ಪಿಸುತ್ತೆ?
Indian railways kavach how does it prevent train accident
Indian railways kavach: ಒಡಿಶಾದ(Odisha) ಬಾಲಸೋರ್(Balasor) ಜಿಲ್ಲೆಯ ಬಹನಾಗಾ(Bahanaga) ನಿಲ್ದಾಣದ ಬಳಿ ಕಳೆದ ರಾತ್ರಿ ಮೂರು ರೈಲುಗಳು ಡಿಕ್ಕಿ ಹೊಡೆದು, 260ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದು ಇಡೀ ದೇಶವೆ ಕಂಡು ಕೇಳರಿಯದ ಭೀಕರ ಅಪಘಾತವಾಗಿದೆ. ಈ ಘಟನೆಯ ಬಳಿಕ ದೇಶದಲ್ಲಿ ರೈಲು ಅಪಘಾತಗಳನ್ನು ತಡೆಗಟ್ಟಲು ಭಾರತೀಯ ರೈಲ್ವೇ ಅಭಿವೃದ್ಧಿಪಡಿಸಿದ ‘ಕವಚ್'(automatic train protection (ATP) system) ಸಿಸ್ಟಂ ಹೆಚ್ಚು ಸುದ್ದಿ ಮಾಡುತ್ತಿದೆ.
ಹೌದು, ಒಡಿಶಾದ ರೈಲು ಅಪಘಾತದ ಬೆನ್ನಿಗೆ ಕವಚ್ ಎಂಬ ಸ್ವದೇಶಿ ಆಟೋಮ್ಯಾಟಿಕ್ ಟ್ರೇನ್ ಪ್ರೊಟೆಕ್ಷನ್ (ಎಟಿಪಿ-ATP) ಕವಚ್ ಸಿಸ್ಟಮ್ ಎಲ್ಲರ ಗಮನ ಸೆಳೆದಿದೆ. ಚರ್ಚೆಯ ಕೇಂದ್ರಬಿಂದುವೂ ಆಗಿದೆ. ಈ ಸಿಸ್ಟಮ್ ಇದ್ದರೂ ಯಾಕೆ ಅಪಘಾತ ತಡೆಯುವುದು ಸಾಧ್ಯವಾಗಿಲ್ಲ ಎಂಬ ಮಾತು ಕೂಡ ಕೇಳಿಬಂದಿದೆ. ಹಾಗಿದ್ರೆ ಈ ಕವಚ್ (Indian railways kavach) ಅಂದ್ರೆ ಏನು? ಇದರ ಉಪಯೋಗ ಏನು? ಅದು ಯಾವ ರೀತಿ ಕೆಲಸ ಮಾಡುತ್ತದೆ?ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ರೈಲ್ವೆ ಸಚಿವಾಲಯವು(Ministry of indian railway)2022ರ ಮಾರ್ಚ್ 23ರಂದು ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಮೂರು ಭಾರತೀಯ ಮಾರಾಟಗಾರರ ಸಹಯೋಗದೊಂದಿಗೆ ಕವಚ್ ಎಂಬ ಸ್ವದೇಶಿ ನಿರ್ಮಿತ ಆಟೋಮ್ಯಾಟಿಕ್ ಟ್ರೇನ್ ಪ್ರೊಟೆಕ್ಷನ್ (ಎಟಿಪಿ) ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿ ಬಳಕೆಗೆ ಶುರುಮಾಡಿತು. ಇದು ಭಾರತದಲ್ಲಿ ರೈಲು ಸಂಚಾರದ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದೂ ಅದು ಘೋಷಿಸಿತು.
ಕವಚ್ ಸಿಸ್ಟಂ(Kavach System) ಭಾರತೀಯ ರೈಲ್ವೇಗಳಿಗೆ ರಾಷ್ಟ್ರೀಯ ATP ಸಿಸ್ಟಂ ಆಗಿ ಅಳವಡಿಸಲಾಗಿದೆ. ಕವಚ್ ಅನ್ನು ಲೋಕೋಮೋಟಿವ್ ಪೈಲಟ್‌ಗಳಿಗೆ ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್(Signal passing-ಎಸ್‌ಪಿಎಡಿ) ಮತ್ತು ಅತಿ ವೇಗವನ್ನು ತಪ್ಪಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ದಟ್ಟವಾದ ಮಂಜಿನಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ರೈಲು ಕಾರ್ಯಾಚರಣೆಗಳಿಗೆ ಬೆಂಬಲವನ್ನು ನೀಡುತ್ತದೆ. ಅಗತ್ಯವಿದ್ದಾಗ ಆಟೋಮ್ಯಾಟಿಕ್ ಆಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ, ಸಿಸ್ಟಮ್ ರೈಲಿನ ವೇಗದ ಮೇಲೆ ಉತ್ತಮ ನಿಯಂತ್ರಣವನ್ನು ಖಚಿತಪಡಿಸುತ್ತದೆ.
ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್ (ಎಸ್‌ಪಿಎಡಿ) ಮತ್ತು ಅತಿ ವೇಗವನ್ನು ತಪ್ಪಿಸುವಲ್ಲಿ ಲೋಕೋಮೋಟಿವ್ ಪೈಲಟ್‌ಗಳಿಗೆ ಸಹಾಯ ಮಾಡುವಂತೆ ಕವಚ್ ಅನ್ನು ವಿನ್ಯಾಸಗೊಳಿಸಲಾಗಿದೆ. ದಟ್ಟವಾದ ಮಂಜಿನಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ರೈಲು ಸಂಚಾರಕ್ಕೆ ಇದು ಬೆಂಬಲವನ್ನು ನೀಡುತ್ತದೆ. ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ, ಸಿಸ್ಟಮ್ ರೈಲಿನ ವೇಗದ ಮೇಲೆ ಉತ್ತಮ ನಿಯಂತ್ರಣವನ್ನು ಖಚಿತಪಡಿಸುತ್ತದೆ ಮತ್ತು ಸಂಭಾವ್ಯ ಅಪಘಾತಗಳನ್ನು ತಡೆಯುತ್ತದೆ ಎಂಬುದು ಇದರ ಫೀಚರ್ಸ್‌ನಲ್ಲಿ ಪ್ರಾಮುಖ್ಯವಾದುದು. ಒಟ್ಟಾರೆಯಾಗಿ ಹೇಳುವುದಾದರೆ ಚಾಲಕನು ಸರಿಯಾದ ಸಮಯಕ್ಕೆ ಬ್ರೇಕ್ ಹಾಕಲು ವಿಫಲವಾದಲ್ಲಿ ಸ್ವಯಂಚಾಲಿತವಾಗಿ ಬ್ರೇಕ್ ಮಾಡುವ ಮೂಲಕ ಕವಚ್ ರೈಲಿನ ವೇಗವನ್ನು ನಿಯಂತ್ರಿಸುತ್ತದೆ.
ಕವಚ ವೈಶಿಷ್ಯವೇನು?
* ಸಿಗ್ನಲ್ ನೀಡಿ ಅಪಾಯವನ್ನು ತಪ್ಪಿಸುತ್ತದೆ.
* ಚಲನೆಯ ಸಂದರ್ಭದಲ್ಲಿ ಕಾಲಕಾಲಕ್ಕೆ ಅಪ್‍ಡೇಟ್ ನೀಡುತ್ತೆ.
* ಅತಿ ವೇಗವನ್ನು ತಡೆಗಟ್ಟಲು ಸ್ವಯಂಚಾಲಿತ ಬ್ರೇಕಿಂಗ್
* ಲೆವೆಲ್ ಕ್ರಾಸಿಂಗ್ ಗೇಟ್ಸ್ ಸಮೀಪಿಸುತ್ತಿರುವಾಗ ಸಿಗ್ನಲ್, ಶಬ್ಧ ಹೊಮ್ಮುವುದು.
* ನೆಟ್‍ವರ್ಕ್ ಮಾನಿಟರ್ ಸಿಸ್ಟಮ್ ಮೂಲಕ ರೈಲು ಚಲನೆಗಳ ಕೇಂದ್ರೀಕೃತ ನೇರ ಮೇಲ್ವಿಚಾರಣೆ.
ರೈಲ್ವೆಯ ಪ್ರಕಾರ, ಒಟ್ಟು 2000 ಕಿ. ಮೀ. ರೈಲು ಜಾಲವನ್ನು ಸ್ಥಳೀಯ ವಿಶ್ವ ದರ್ಜೆಯ ತಂತ್ರಜ್ಞಾನದ ಕವಚ್ ಅಡಿಯಲ್ಲಿ ತರಲು ಯೋಜಿಸಲಾಗಿದೆ. 250 ಕಿಲೋಮೀಟರ್‌ಗಳ ಪ್ರಾಯೋಗಿಕ ವಿಭಾಗದ ಜೊತೆಗೆ, ದಕ್ಷಿಣ ಮಧ್ಯ ರೈಲ್ವೆಯ 1200 ರೂಟ್ ಕಿ.ಮೀಗಳಲ್ಲಿ ಕವಚ್ ಅನುಷ್ಠಾನದಲ್ಲಿದೆ. ಅಲ್ಲದೆ ಈ ಯೋಜನೆಗೆ 16.88 ಕೋಟಿ ವೆಚ್ಚವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini vaishnav) ಅವರು ಲೋಕಸಭೆಗೆ ಕಳೆದ ಬಾರಿ ಮಾಹಿತಿ ನೀಡಿದ್ದರು.
ಮೊದಲ ಬಾರಿಗೆ ‘ಕವಚ’ ಪ್ರಯೋಗ ಆಗಿದ್ದು ಯಾವಾಗ?: ಮಾರ್ಚ್ 4, 2022 ರಂದು, ದಕ್ಷಿಣ ಮಧ್ಯ ರೈಲ್ವೆಯ ಗುಲ್ಲಗುಡ-ಚಿಟ್ಗಿಡ್ಡಾ ರೈಲು ನಿಲ್ದಾಣಗಳ ನಡುವೆ ‘ಕವಚ’ದ ಯಶಸ್ವಿ ಪ್ರಯೋಗ ನಡೆಸಲಾಯಿತು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಪ್ರಯೋಗವನ್ನು ಪರಿಶೀಲಿಸಿದರು. ಒಂದೇ ಹಳಿಯಲ್ಲಿ ಕವಚ ವ್ಯವಸ್ಥೆಯಿರುವ ಎರಡು ರೈಲುಗಳನ್ನು ಚಲಾಯಿಸಲಾಯಿತು. ರೈಲುಗಳು ಹತ್ತಿರವಾಗುತ್ತಿದ್ದಂತೆ ಅಪಾಯದ ಸೂಚನೆ ಅರಿತು ಕವಚ ವ್ಯವಸ್ಥೆಯು ಸ್ವಯಂಚಾಲಿತವಾಗಿ ಬ್ರೇಕಿಂಗ್ ಕಾರ್ಯ ಮಾಡುತ್ತದೆ. ಆಗ ಎರಡು ರೈಲುಗಳು 380 ಮೀಟರ್ ಅಂತರದಲ್ಲಿ ನಿಂತುಕೊಳ್ಳುತ್ತವೆ. ಇದಲ್ಲದೆ, ಲೊಕೊಮೊಟಿವ್ ಲೂಪ್ ಲೈನ್ ಅನ್ನು ಪ್ರವೇಶಿಸಿದಾಗ KAVACH ಸ್ವಯಂಚಾಲಿತವಾಗಿ ವೇಗವನ್ನು 60 ಕಿ.ಮೀ. ನಿಂದ 30 ಕಿ.ಮೀ. ಗೆ ಕಡಿಮೆ ಮಾಡುತ್ತದೆ. ಹೀಗೆ ಕವಚದ ಯಶಸ್ವಿ ಪ್ರಯೋಗ ನಡೆಸಲಾಯಿತು.
ಇಷ್ಟೇ ಅಲ್ಲದೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಖುದ್ದು ‘ಕವಚ್’ ವ್ಯವಸ್ಥೆಯನ್ನು ಪರೀಕ್ಷಿಸಿದ್ದರು. ಹಿಂಭಾಗಕ್ಕೆ ಬಡಿದ ಪರೀಕ್ಷೆ ಯಶಸ್ವಿಯಾಗಿದೆ. ಮುಂಭಾಗದಲ್ಲಿ 380 ಮೀಟರ್‌ಗಿಂತ ಮುಂಚಿತವಾಗಿ ಕವಚ್ ಸ್ವಯಂಚಾಲಿತವಾಗಿ ಇಂಜಿನ್ ಅನ್ನು ನಿಲ್ಲಿಸಿತು ಎಂದು ವೈಷ್ಣವ್ ಕಳೆದ ವರ್ಷ ಮಾರ್ಚ್‌ನಲ್ಲಿ ಟ್ವೀಟ್ ಮಾಡಿದ್ದರು.
ಕವಚ ವ್ಯವಸ್ಥೆಯಿಂದ ಒಡಿಶಾ ರೈಲು ದುರಂತ ತಪ್ಪುತ್ತಿತ್ತೆ?: ಮೂರು ರೈಲುಗಳ ಡಿಕ್ಕಿಯಿಂದಾಗಿ ಒಡಿಶಾ ರೈಲು ದುರಂತ ಸಂಭವಿಸಿದೆ. ಪರಿಣಾಮವಾಗಿ 260ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಮಾರ್ಗದಲ್ಲಿ ಕವಚ ತಂತ್ರಜ್ಞಾನ ವ್ಯವಸ್ಥೆ ಲಭ್ಯವಿರಲಿಲ್ಲ’ ಎಂದು ಭಾರತೀಯ ರೈಲ್ವೆ ಇಲಾಖೆ ವಕ್ತಾರ ಅಮಿತಾಭ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.
ಎರಡು ರೈಲು ಒಂದೇ ಹಳಿಯಲ್ಲಿ ಸಾಗಿದಾಗ, ಕವಚ ತಂತ್ರಜ್ಞಾನ ವ್ಯವಸ್ಥೆ ಇದ್ದರೆ ರೈಲು ಅಪಘಾತವನ್ನು ತಪ್ಪಿಸಬಹುದು. ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿರುವ ಈ ಕವಚ ರೈಲುಗಳು 380 ಮೀಟರ್ ಅಂತರದಲ್ಲಿ ನಿಂತುಕೊಳ್ಳುವಂತೆ ಮಾಡುತ್ತದೆ. ಆಗ ಅಪಘಾತ ತಪ್ಪುತ್ತದೆ. ಆದರೆ ಒಡಿಶಾ ರೈಲು ದುರಂತದವನ್ನು ಗಮನಿಸಿದಾಗ 3 ಹಳಿಗಳಲ್ಲಿ ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿದೆ. ಒಂದು ಹಳಿಯಲ್ಲಿ ಸಾಗುತ್ತಿದ್ದ ರೈಲು ಹಳಿತಪ್ಪಿದ್ದು, ಅದರ ಕೆಲ ಬೋಗಿಗಳು ಮುರಿದು ಮತ್ತೊಂದು ಹಳಿ ಮೇಲೆ ಬಿದ್ದಿವೆ. ಈ ವೇಳೆ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ರೈಲು ತನ್ನ ಹಳಿ ಮೇಲೆ ಬಿದ್ದದ್ದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ದುರಂತ ಸಂಭವಿಸಿ, ಅಪಾರ ಸಾವು ನೋವಾಗಿದೆ. ಈ ದುರಂತಕ್ಕೆ ಕವಚ ತಂತ್ರಜ್ಞಾನ ವ್ಯವಸ್ಥೆ ಎಷ್ಟು ಸಹಕಾರಿಯಾಗುತ್ತಿತ್ತು ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತದೆ.
ಇನ್ನು ಕಳೆದ ಮೂರು ವರ್ಷಗಳಿಂದ ಒಂದೇ ಒಂದು ರೈಲು ಅಪಘಾತ ಆಗಿರಲಿಲ್ಲ ಎಂಬುದರ ಕಡೆಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Prahalhad joshi) ಗಮನಸೆಳೆದಿದ್ದರು. ಹಾಗಾದರೆ ಈ ಅಪಘಾತ ತಡೆಯುವಲ್ಲಿ ಕವಚ್ ವಿಫಲವಾಯಿತೇ? ಎಂಬಿತ್ಯಾದಿ ಚರ್ಚೆ ನಡೆಯುತ್ತಿದೆ.