

Murder in Mandya: ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇರುವ ಈ ಕಾಲದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂನಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಟೀ ಅಂಗಡಿಯೊಂದರ ಹಿಂಭಾಗದಲ್ಲಿ ಭೀಕರವಾಗಿ ಸತ್ತು ಬಿದ್ದಿರುವ ಈ ಮಹಿಳೆಯ ಹೆಸರು ಗಂಗಾ. ತಮಿಳುನಾಡು ಈಕೆಯ ಮೂಲ. ಅಲೆಮಾರಿ ಜನಾಂಗಕ್ಕೆ ಸೇರಿದವಳು. ಮೂರ್ನಾಲ್ಕು ತಿಂಗಳಿಗೊಮ್ಮೆ ಒಂದೊಂದು ಪ್ರದೇಶಕ್ಕೆ ಹೋಗುತ್ತಿದ್ದ ಈಕೆ, ಇತ್ತೀಚೆಗೆ ಬಂದದ್ದೇ ಶ್ರೀರಂಪಟ್ಟಣದ ಗಂಜಾಂಗೆ. ಮೇ.14ರ ತಡರಾತ್ರಿ ಅಂದರೆ ನಿನ್ನೆ ಯಾರೋ ದುಷ್ಕರ್ಮಿಗಳು ಈಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಂದಿದ್ದಾರೆ (Murder in Mandya).
ಕೊಲೆಯಾದ ಗಂಗಾ ಹಾಗೂ ಆಕೆಯ ಕುಟುಂಬಸ್ಥರು ಇತ್ತೀಚೆಗೆ ಅಂದರೆ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಶ್ರೀರಂಗಪಟ್ಟಣದ ಗಂಜಾಂಗೆ ಬಂದಿದ್ದರು. ಕಾವೇರಿ ನದಿಯಲ್ಲಿ ನಾಣ್ಯ ಹುಡುಕುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಗಂಗಾ ಯಾವಾಗಲೂ ಕಂಠ ಪೂರ್ತಿ ಕುಡಿಯುತ್ತಿದ್ದಳು. ಹಾಗಾಗಿ ಈಕೆಗೆ ಯಾರೋ ಮದ್ಯಪಾನ ಮಾಡಿಸಿ, ನಂತರ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮೃತದೇಹವನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಶ್ರೀರಂಗಪಟ್ಟಣ ಟೌನ್‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮಹಿಳೆಯ ಭೀಕರ ಕೊಲೆಗೆ ಇಡೀ ಶ್ರೀರಂಗಪಟ್ಟಣವೇ ಬೆಚ್ಚಿಬಿದ್ದಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ವಿಧಾನಸಭೆ ಚುನಾವಣೆ ಮುಕ್ತಾಯ, ಬಿಬಿಎಂಪಿ ಎಲೆಕ್ಷನ್‌ಗೆ ಕಾಂಗ್ರೆಸ್ ಚಿತ್ತ! ಯಾವಾಗ?













