Arvind Kejriwal : ಅಶಿಕ್ಷಿತ ಪ್ರಧಾನಿ ದೇಶಕ್ಕೆ ಮಾರಕ! ಕೋರ್ಟ್ ತೀರ್ಪಿನ ಬಳಿಕವೂ ಮೋದಿ ಪದವಿ ಬಗ್ಗೆ ಮತ್ತೆ ಚಕಾರವೆತ್ತಿದ ದೆಹಲಿ ಸಿಎಂ!
Arvind Kejriwal : ಪ್ರಧಾನಿ ನರೇಂದ್ರ ಮೋದಿ(PM Modi) ಅವರ ಪದವಿಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಕೋರಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದ ದೆಹಲಿ ಸಿಎಂ(Delhi CM)ಅರವಿಂದ್ ಕೇಜ್ರಿವಾಲ್(Arvind Kejriwal) ಗೆ ಗುಜರಾತ್ ಹೈಕೋರ್ಟ್(Gujarat high court) ದಂಡ ವಿಧಿಸಿದ ಘಟನೆ ಎಲ್ಲರಿಗೂ ಗೊತ್ತಿದೆ. ಇದಾಗಿಯೂ ಮರುದಿನವೇ, ಮತ್ತೆ ಪ್ರಧಾನಿ ಪದವಿ ಬಗ್ಗೆ ಪ್ರಶ್ನೆ ಎತ್ತಿರುವ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಯವರ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಹೈಕೋರ್ಟ್ನ ತೀರ್ಪು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಶಿಕ್ಷಿತ ಅಥವಾ ಅತ್ಯಂತ ಕಡಿಮೆ ಶಿಕ್ಷಣ ಪಡೆದ ಪ್ರಧಾನಿ ದೇಶಕ್ಕೆ ಅಪಾಯಕಾರಿ’ ಎಂದು ಹೇಳಿದ್ದಾರೆ.
ಹೌದು, ಪ್ರಧಾನಿ ಮೋದಿ ಅವರ ಪದವಿ ವಿವರಗಳನ್ನು ಬಿಡುಗಡೆ ಮಾಡುವ ಅಗತ್ಯವಿಲ್ಲ ಎಂದಿರುವ ಗುಜರಾತ್ ಹೈಕೋರ್ಟ್, ಅರವಿಂದ್ ಕೇಜ್ರಿವಾಲ್ ಅವರಿಗೆ 25 ಸಾವಿರ ರೂ ದಂಡ ವಿಧಿಸಿತ್ತು. ಆದರೆ ಗುಜರಾತ್ ಹೈಕೋರ್ಟ್ ಆದೇಶವು ಪ್ರಧಾನಿ ಮೋದಿ ಅವರ ಶಿಕ್ಷಣದ ಕುರಿತು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕೇಜ್ರಿವಾಲ್ ಶನಿವಾರ ಪ್ರತಿಪಾದಿಸಿದ್ದಾರೆ.
ಅಂದಹಾಗೆ ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣಪತ್ರವನ್ನು ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2016ರಲ್ಲಿ ಆರ್‌ಟಿಐ ಕಾಯ್ದೆಯಡಿ ಕೇಳಿದ್ದರು. ಅರವಿಂದ್ ಕೇಜ್ರಿವಾಲ್ ಕೇಳಿದ ದಾಖಲೆಯನ್ನು ನೀಡುವಂತೆ ಮುಖ್ಯ ಮಾಹಿತಿ ಆಯುಕ್ತರು (CIC) ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದರು. ಸಿಐಸಿಯ ಈ ನಿರ್ದೇಶನದ ವಿರುದ್ಧ ಗುಜರಾತ್ ಯೂನಿವರ್ಸಿಟಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತನ್ನ ತೀರ್ಪನ್ನು ಫೆಬ್ರವರಿ 10ರಂದು ಕಾಯ್ದಿರಿಸಿತ್ತು. ಅದರ ತೀರ್ಪನ್ನು ಮಾರ್ಚ್ 31ರಂದು ಹೊರಹಾಕಿದೆ.
ಆದರೂ ಈ ವಿಚಾರವಾಗಿ ಚಕಾರ ಎತ್ತಿರುವ ಅರವಿಂದ್ ಕೇಜ್ರಿವಾಲ್ ‘ಪ್ರಧಾನಿ ಅವರು ಸುಶಿಕ್ಷಿತರಾಗಿರುವುದು ಬಹಳ ಮುಖ್ಯವಾಗಿದೆ. ಏಕೆಂದರೆ ಅವರು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಮಾಹಿತಿಯನ್ನು ನೀಡಲು ಗುಜರಾತ್ ವಿವಿ ಏಕೆ ಸಿದ್ಧವಿಲ್ಲ ಎಂಬುದಕ್ಕೆ ಎರಡು ಕಾರಣಗಳು ಮಾತ್ರ ಇರಲು ಸಾಧ್ಯ. ಇದು ಅವರ ಅಹಂಕಾರ ಕಾರಣಕ್ಕೆ ಇರಬಹುದು, ಇಲ್ಲವೇ ಅವರ ಪದವಿ ನಕಲಿ ಇರಬೇಕು ಎಂದು ಹೇಳಿದ್ದಾರೆ.
ಅಲ್ಲದೆ ಮೊನ್ನೆ ತಾನೆ ಈ ವಿಚಾರಣೆಯನ್ನು ನಡೆಸಿದ್ದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಬೈರೆನ್ ವೈಷ್ಣವ್ ಅವರು ‘ಈಗಾಗಲೇ ಈ ವಿವರಗಳು ಸಾರ್ವಜನಿಕ ವೇದಿಕೆಯಲ್ಲಿ ಲಭ್ಯವಿರುವಾಗ ಮತ್ತೆ ಕೇಳಿರುವುದು ಏಕೆ? ಈಗಾಗಲೇ ಸಾರ್ವಜನಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವಿವರ ಲಭ್ಯ ಇರುವಾಗ ಆರ್‌ಟಿಐ ಮೂಲಕ ಅದನ್ನು ಪಡೆದುಕೊಳ್ಳಲು ಅರವಿಂದ್ ಕೇಜ್ರಿವಾಲ್ ಅವರ ಪಟ್ಟು ಹಿಡಿದಿರುವುದು, ಅವರ ನೈಜತೆ ಮತ್ತು ಉದ್ದೇಶದ ಬಗ್ಗೆ ಅನುಮಾನ ಮೂಡಿಸುತ್ತದೆ’ ಎಂದು ಕೇಜ್ರಿವಾಲ್ ಅವರಿಗೆ 25 ಸಾವಿರ ರೂ ದಂಡ ವಿಧಿಸಿದ್ದರು. ಇದರೊಂದಿಗೆ ನಾಲ್ಕು ವಾರಗಳ ಒಳಗೆ ಅದನ್ನು ಠೇವಣಿ ಇರಿಸುವಂತೆ ಅವರು ಸೂಚಿಸಿದ್ದರು.