Noida: ಕಿಂಗ್ ಫಿಷರ್ ಬಾಟಲಿಗೆ 10 ರೂಪಾಯಿ ಹೆಚ್ಚಿಗೆ ಪಡೆದ ಬಾರ್! ಮಾರಾಟಗಾರನಿಗೆ ಜೈಲು, ಮಾಲೀಕನಿಗೆ 75 ಸಾವಿರ ದಂಡ!
Noida : ಸಾಮಾನ್ಯವಾಗಿ ಅಂಗಡಿ ಮುಂಗಟ್ಟುಗಳಲೆಲ್ಲಾ ವಸ್ತುಗಳ ಮೇಲೆ ಒಂದಿಷ್ಟು ಲಾಭ ಪಡೆಯುವ ಸಲುವಾಗಿ ಮಾಲೀಕರು ಒಂದೆರಡು ರೂಪಾಯಿಗಳನ್ನು ಹೆಚ್ಚಿಗೆ ಹೇಳುತ್ತಾರೆ. ಕೆಲವೊಮ್ಮೆ ಅವರ ಆಸೆ ದುರಾಸೆಯಾಗಿ ಬೇಕಾಬಿಟ್ಟಿ ರೇಟುಗಳು ಬಾಯಿಂದ ಹೊರಬೀಳುವುದುಂಟು. ಒಮ್ಮೊಮ್ಮೆ ಇದು ನಮಗೆ ತಿಳಿದಾಗ ಚರ್ಚೆ ಮಾಡಿಯೋ ಅಥವಾ ಆತನನ್ನು ತರಾಟೆಗೆ ತೆಗೆದುಕೊಂಡೋ ಅಲ್ಲಿಂದ ಜಾಗ ಕಾಲಿಮಾಡುತ್ತೇವೆ. ಆದರೆ ಇಲ್ಲೊಂದೆಡೆ ಬಿಯರ್(beer) ಬಾಟಲಿಗೆ 10 ರೂ.ಗಳನ್ನು ಅಧಿಕವಾಗಿ ತೆಗೆದುಕೊಂಡದಕ್ಕೆ ಮದ್ಯ ಮಾರಾಟಗಾರನನ್ನು ಬುಧವಾರ ಬಂಧಿಸುವುದಲ್ಲದೆ ಬಾರ್ ಓನರ್ ಗೆ 75,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ!
ಹೌದು, ನೋಯ್ಡಾದ(Noida) ಬಿಸ್ರಾಖ್ನ ರೋಜಾ ಜಲಾಲ್ಪುರ್ ಪ್ರದೇಶದಲ್ಲಿರುವ ಬಾರ್ ಒಂದರಲ್ಲಿ ಇಂಥದೊಂದು ಘಟನೆ ನಡೆದಿದ್ದು, ಬಿಯರ್ ಬಾಟಲಿಗೆ ಗ್ರಾಹಕರಿಂದ 10 ರೂ.ಗಳನ್ನು ಅಧಿಕವಾಗಿ ತೆಗೆದುಕೊಂಡದಕ್ಕೆ ಸುರಪಾನ ಮಾರಾಟಗಾರನನ್ನು ಬುಧವಾರ ಪೋಲೀಸರು ಬಂದಿಸಿದ್ದಾರೆ. ಮಾತ್ರವಲ್ಲ ಬಾರ್ ಓನರ್ ಗೆ 75,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ಅಂದಹಾಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ 500 ಎಂಎಲ್ನ ಕಿಂಗ್ಫಿಶರ್ ಸ್ಟ್ರಾಂಗ್ ಬಿಯರ್ ಗೆ 120 ರೂ. ಬೆಲೆ ಇದ್ದು ಅದನ್ನು ಗ್ರಾಹಕರಿಗೆ 130 ರೂ.ಗೆ ಮಾರಾಟ ಮಾಡಲಾಗಿದೆ. ಹೀಗಾಗಿ ಮಾರಾಟಗಾರರು ಹೆಚ್ಚುವರಿಯಾಗಿ 10 ಅಥವಾ 20 ರೂ.ಗಳನ್ನು ವಸೂಲಿ ಮಾಡುತ್ತಿರುವ ಬಗ್ಗೆ ನಮಗೆ ಹಲವು ಜನರಿಂದ ದೂರುಗಳು ಬಂದಿದ್ದವು. ದೂರುಗಳನ್ನು ಸ್ವೀಕರಿಸಿದ ಅಬಕಾರಿ ಇಲಾಖೆ ಮದ್ಯದಂಗಡಿಗೆ ಮಫ್ತಿಯಲ್ಲಿ ಬಂದು ಪರಿಶೀಲನೆ ನಡೆಸಿದೆ.
ಸಾಕ್ಷ್ಯಾಧಾರಗಳ ಆಧಾರದ ಮೇಲೆ, ಮದ್ಯ ಮಾರಾಟಗಾರ ರವಿ ಸಿಂಗ್ ವಿರುದ್ಧ ಅಬಕಾರಿ ಕಾಯ್ದೆಯ ಸೆಕ್ಷನ್ 64 (ಅತಿಯಾದ ಮೌಲ್ಯ ವಿಧಿಸಿದ್ದಕ್ಕೆ ) ಮತ್ತು IPC 408 (ಗುಮಾಸ್ತ ಅಥವಾ ಸೇವಕನಿಂದ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ, ನಂತರ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಅಭಿನವ್ ಶಾಹಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದರೊಂದಿಗೆ ನಿಯಮಗಳ ಉಲ್ಲಂಘನೆಗಾಗಿ ಮದ್ಯದಂಗಡಿಯ ಪರವಾನಗಿದಾರ ಸುರೇಂದರ್ ಸಿಂಗ್ ಎಂಬಾತನಿಗೆ 75,000 ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ರಾಕೇಶ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.
ಇನ್ನು ಈ ಬಾರ್ ಗಳಲ್ಲಿ ಶುಲ್ಕ ಹೆಚ್ಚಳ ಮಾಡುವ ಕುರಿತು ಮಾತನಾಡಿದ ಅವರು “ಪರವಾನಗಿ ಹೊಂದಿರುವ ಮಳಿಗೆಗಳಲ್ಲಿ ಮದ್ಯದ ದರವನ್ನು ಹೆಚ್ಚಿಸಿದರೆ, ಮೊದಲ ಬಾರಿಗೆ ದಂಡ 75,000 ರೂ., ಎರಡನೇ ಬಾರಿ ದಂಡ 1.50 ಲಕ್ಷ ರೂ. ಮತ್ತು ಮೂರನೇ ಬಾರಿಗೆ ಸಂಭವಿಸಿದಲ್ಲಿ, ಅಬಕಾರಿ ಇಲಾಖೆಯು ಮದ್ಯ ಮಾರಾಟದ ಪರವಾನಗಿಯನ್ನು ರದ್ದುಗೊಳಿಸಬಹುದು, ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಗ್ರಾಹಕರಿಂದ ಹೆಚ್ಚು ಶುಲ್ಕ ವಿಧಿಸುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.