12 ಕ್ಕೂ ಮಿಕ್ಕಿ ಬಿಜೆಪಿಯ ಹಾಲಿ ಶಾಸಕರಿಗೆ ಟಿಕೇಟ್ ಕೈ ತಪ್ಪುವ ಸಾಧ್ಯತೆ : ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಚರ್ಚೆ
Union Homeminister Amit shah : ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಶತಾಯಗತಾಯ ಅಧಿಕಾರ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ಇತ್ತ ಆಡಳಿತಾರೂಢ ಬಿಜೆಪಿಯಲ್ಲೂ ಅಭ್ಯರ್ಥಿ ಆಯ್ಕೆ ಹಾಗೂ ಗೆಲುವಿನ ರೂಪುರೇಷೆಯ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ(Union Homeminister Amit shah) ನೇತೃತ್ವದಲ್ಲಿ ರಾಜ್ಯದಲ್ಲಿ ಟಿಕೆಟ್ ಹಂಚಿಕೆ ಕುರಿತು ಮೊದಲ ಹಂತದ ಸಭೆ ನಡೆದಿದ್ದು, ಸಭೆಯಲ್ಲಿ ಶಾಸಕರ ಕಾರ್ಯನಿರ್ವಹಣೆ ಕುರಿತು ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ಹಾಗೂ ವಿವಿಧ ಕ್ಷೇತ್ರದ ಶಾಸಕರ ಬಗ್ಗೆ ಇರುವ ಪ್ರತಿಕೂಲ ಅಭಿಪ್ರಾಯಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಸಭೆಯಲ್ಲಿ 12ಕ್ಕೂ ಅಧಿಕ ಶಾಸಕರಿಗೆ ಟಿಕೆಟ್ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ಹಿಂದುತ್ವದ ಭದ್ರಕೋಟೆ ಕರಾವಳಿ ಜಿಲ್ಲೆಗಳಲ್ಲೂ ಕೆಲವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಆಯ್ದ ಕೆಲವೇ ವ್ಯಕ್ತಿಗಳು ಮಾತ್ರ ಭಾಗಿಯಾಗಿದ್ದರು.ಈ ಸಭೆಯಲ್ಲಿ ಪಕ್ಷದ ಇತ್ತೀಚಿನ ವಿದ್ಯಮಾನಗಳು ಹಾಗೂ ಸಮೀಕ್ಷಾ ವರದಿಗಳನ್ನು ಆಧರಿಸಿ ಚರ್ಚೆ ನಡೆದಿದೆ.
ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಕೆಲವು ದಿನಗಳ ಹಿಂದೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.ಇದು ವರಿಷ್ಠರ ಸೂಚನೆಯ ಮೇರೆಗೆ ಬಹಿರಂಗ ಪಡಿಸಲಾಗಿದ್ದು ಎನ್ನಲಾಗಿದೆ.
ಬಿಜೆಪಿ ಮೂಲಗಳ ಪ್ರಕಾರ ಪ್ರತಿ ತಿಂಗಳೂ ಅಮಿತ್ ಶಾ (Union Homeminister Amit shah)ರಾಜ್ಯದ ಬೆಳವಣಿಗೆಗೆ ಸಂಬಂಧಪಟ್ಟಂತೆ ವರದಿ ತರಿಸಿಕೊಳ್ಳುತ್ತಿದ್ದಾರೆ. ಎಲ್ಲ ವಿಧಾನಸಭಾ ಕ್ಷೇತ್ರದ ಬಗ್ಗೆಯೂ ಅವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರ ಆಧಾರದ ಮೇಲೆ ಶಾಸಕರಿಗೆ ವಿರೋಧಿ ಅಲೆ ಇರುವುದು ದೃಢಪಟ್ಟಿದೆ. ವಿಭಾಗೀಯ ಪ್ರಮುಖರಿಂದ ಪ್ರತ್ಯೇಕ ವರದಿ ಸಂಗ್ರಹಕ್ಕೂ ಪಕ್ಷ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಕರಾವಳಿಯಲ್ಲಿ ಇಬ್ಬರು ಮಹಿಳೆಯರಿಗೆ ಟಿಕೇಟ್
ದಕ್ಷಿಣಕನ್ನಡ,ಉಡುಪಿ,ಉತ್ತರಕನ್ನಡ ಜಿಲ್ಲೆಗಳು ಸೇರಿದಂತೆ ಇಬ್ಬರು ಮಹಿಳೆಯರಿಗೆ ಟಿಕೇಟ್ ನೀಡಲೂ ಸಭೆಯಲ್ಲಿ ವರಿಷ್ಠರೂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಇದರಲ್ಲಿ ಒಂದು ಹಾಲಿ ಶಾಸಕರಿಗೆ ಸಿಗಲಿದೆ ಎನ್ನಲಾಗಿದೆ.ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಈ ಬಾರಿಯೂ ಟಿಕೆಟ್ ಸಿಗಲಿದೆ.ಉಳಿದ ಒಬ್ಬರನ್ನು ದಕ್ಷಿಣಕನ್ನಡ ಅಥವಾ ಉಡುಪಿಯಿಂದ ಆಯ್ಕೆ ಮಾಡಬೇಕಾಗಬಹುದು.