ಮಗುವಿನ ಚಿಕಿತ್ಸೆಗೆ ಅಪರಿಚಿತನಿಂದ ಬಂತು ಬರೋಬ್ಬರಿ 11.6 ಕೋಟಿ ನೆರವು! ಮಾನವೀಯತೆ ಇನ್ನೂ ಇದೆ ಎಂದು ಸಾಬೀತು ಪಡಿಸಿದ ಅನಾಮಧೇಯ ವ್ಯಕ್ತಿ!

Humanity : ಯಾರಿಗಾದರೂ ಅಪಘಾತವಾದಾಗ ಅಥವಾ ತೀವ್ರವಾದ ಆರೋಗ್ಯ ಸಮಸ್ಯೆಗಳು ಉಂಟಾಗಿ ಚಿಕಿತ್ಸೆ ಪಡೆಯಲು ಬೇಕಾಗುವ ಖರ್ಚನ್ನು ಭರಿಸಲು ಸಾಧ್ಯವಾಗದಾಗ ಸ್ನೇಹಿತರು, ಸಂಬಂಧಿಗಳು ಇಲ್ಲ ಯಾರಾದರು ಪರಿಚಯಸ್ಥರು ಅವರ ಆಕೌಂಟ್ ಡಿಟೇಲ್ಸ್ ಎಲ್ಲವನ್ನು ವಾಟ್ಸಪ್ ಸ್ಟೇಟಸ್ಸಿಗೋ ಅಥವಾ ಸೋಷಿಯಲ್ ಮೀಡಿಯಾಗಳಲ್ಲೋ ಅಪ್ಲೋಡ್ ಮಾಡಿ ಸಹಾಯ ಹಸ್ತ ಕೋರುವುದನ್ನು ನಾವು ನೋಡಿದ್ದೇವೆ. ಈ ವೇಳೆ ಅನೇಕರು ತಮ್ಮ ಕೈಲಾದ ಸಣ್ಣ ಪುಟ್ಟ ಸಹಾಯ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಗುವಿನ ಚಿಕಿತ್ಸೆಗಾಗಿ ಬರೋಬ್ಬರಿ 11 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನೀಡಿ ಮಾನವೀಯತೆ (Humanity) ಮೆರೆದಿದ್ದಾನೆ! ಹಾಗಿದ್ರೆ ಯಾರೀತ? ಆ ಮಗುವಿಗೆ ಬಂದ ಆ ಶ್ರೀಮಂತ ಕಾಯಿಲೆಯಾದರೂ ಏನು ಗೊತ್ತಾ?

ಮೂಲತಃ ಕೇರಳದವರಾಗಿ ಸದ್ಯ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನೆಲೆಸಿರುವ ಅದಿತಿ ನಾಯರ್​ ಮತ್ತು ಸಾರಂಗ್​ ಮೆನನ್​ ದಂಪತಿಯ ಒಬ್ಬನೇ ಪುತ್ರ ನಿರ್ವಾಣ್. ಒಂದು ವರ್ಷದ ಈ ಕಂದಮ್ಮ ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್‌ಎಂಎ ಟೈಪ್ 2) ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಸಾರಂಗ್ ದಂಪತಿಯು, ಒಂದು ವರ್ಷದ ತಮ್ಮ ಮಗು ಕುಳಿತುಕೊಳ್ಳಲು ಮತ್ತು ನಿಲ್ಲಲು ಹಿಂದೇಟು ಹಾಕಿದಾಗ ಆತನನ್ನು ಮುಂಬೈನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡುತ್ತಾರೆ. ಈ ವೇಳೆ ಮಗುವಿಗೆ ಎಸ್‌ಎಂಎ ಟೈಪ್ 2 ಇದೆ ಎಂದು ತಿಳಿದು ಬಂದಿದೆ. ಅಂದಹಾಗೆ ಅದರ ಚಿಕಿತ್ಸೆಗೆ ನೊವಾರ್ಟಿಸ್‌ನಿಂದ ತಯಾರಿಸಲ್ಪಟ್ಟ ಝೋಲ್ಗೆನ್ಸ್ಮಾ ಎಂಬ ಡೋಸ್ ನೀಡಬೇಕಾಗಿದ್ದು, ಆ ಡೋಸ್ ಗೆ ಸುಮಾರು 17.5 ಕೋಟಿ ರೂ. ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಮಗನಿಗೆ ಬಂದ ಈ ವಿಚಿತ್ರ ಖಾಯಿಲೆಯಿಂದ ಕಂಗೆಟ್ಟ ಸಾರಂಗ್ ದಂಪತಿ ಮಗನ ಚಿಕಿತ್ಸೆಗಾಗಿ ಭಾರತಕ್ಕೆ ಮರಳಿದ್ದಾರೆ. ಇದರ ನಡುವೆ ಅವರು ತಕ್ಷಣವೇ 17.5 ಕೋಟಿ ಸಂಗ್ರಹಿಸಲು ಕ್ರೌಡ್‌ಫಂಡಿಂಗ್ ಎರಡು ಪ್ಲಾಟ್‌ಫಾರ್ಮ್‌ಗಳಾದ ಮಿಲಾಪ್ ಮತ್ತು ಇಂಪ್ಯಾಕ್ಟ್‌ಗುರುಗಳಲ್ಲಿ ಖಾತೆಗಳನ್ನು ತೆರೆಯುತ್ತಾರೆ. ಬೆನ್ನುಮೂಳೆಯ ಸ್ನಾಯು ಕ್ಷೀಣತೆ (SMA) ಹೊಂದಿರುವ ಮಕ್ಕಳ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಕ್ರೌಡ್‌ಫಂಡಿಂಗ್ ಮಾರ್ಗವನ್ನು ತೆಗೆದುಕೊಳ್ಳುವುದು ಹೊಸದೇನಲ್ಲ. ಆದರೆ ಒಬ್ಬ ವ್ಯಕ್ತಿ ಮಗುವಿನ ಚಿಕಿತ್ಸೆಗಾಗಿ 11 ಕೋಟಿ ರೂಪಾಯಿಗೂ ಹೆಚ್ಚು ಕೊಡುಗೆ ನೀಡುತ್ತಾನೆ ಮತ್ತು ಆತ ತನ್ನ ಹೆಸರನ್ನು ಎಲ್ಲಿಯೂ ಹೇಳದಿರಲು ಬಯಸುತ್ತಾನೆಂಬುದು ಬಲು ಅಪರೂಪ.

ಹೌದು, ತಮ್ಮ 15 ತಿಂಗಳ ಮಗನ ರೋಗಕ್ಕೆ ಚಿಕಿತ್ಸೆ ನೀಡಲು ಹಣವನ್ನು ಹೊಂಚುವ ಸಲುವಾಗಿ ಸಾರಂಗ್ ಹಾಗೂ ಅಧಿತಿ ಕ್ರೌಡ್‌ಫಂಡಿಂಗ್ ನಲ್ಲಿ ಖಾತೆಯನ್ನು ತೆಗೆದಾಗ ಹಲವರು ತಮ್ಮ ಕೈಲಾದ ಸಹಾಯ (Humanity) ಮಾಡುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಸೋಮವಾರದಿನ ಅವರ ಖಾತೆಗೆ ಯಾರೋ ಅನಾಮಧೇಯ ವ್ಯಕ್ತಿ ಬರೋಬ್ಬರಿ $1.4 ಮಿಲಿಯನ್ (ಸುಮಾರು 11 ಕೋಟಿ ರೂ.) ದೇಣಿಗೆ ನೀಡುತ್ತಾರೆ. ಆದರೆ ಅವರು ಯಾರೆಂದು ತಿಳಿಯೋದಿಲ್ಲ. ಈ ಸಂತಸದ ವಿಚಾರವನ್ನು ಸ್ವತಃ ಸಾರಂಗ್ ಅವರೇ ಹಂಚಿಕೊಳ್ಳುತ್ತಾರೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘ನಾವು ಕ್ರೌಡ್‌ಫಂಡಿಂಗ್ ಖಾತೆಗಳನ್ನು ತೆರೆದಾಗಿನಿಂದ, ಅವುಗಳನ್ನು ಪ್ರತಿದಿನ ಪರಿಶೀಲಿಸುತ್ತಿದ್ದೆ. ಎಲ್ಲರೂ ಪಾಪ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಆದರೆ ಫೆಬ್ರವರಿ 19 ರ ಹೊತ್ತಿಗೆ ನಮ್ಮ ಖಾತೆಗೆ ಬರೋಬ್ಬರಿ 5.5 ಕೋಟಿ ರೂಪಾಯಿಗಳು ಒಮ್ಮೆಲೇ ಜಮವಾಯಿತು. ಫೆಬ್ರವರಿ 20 ರಂದು ಮತ್ತೆ ನನ್ನ ಮೊತ್ತದಲ್ಲಿ ಹಠಾತ್ ಭಾರಿ ಏರಿಕೆ ಕಂಡೆ. ಕೂಡಲೇ ನಾನು ಮಿಲಾಪ್ ಆಪರೇಟರ್‌ಗಳೊಂದಿಗೆ ಪರಿಶೀಲಿಸಿದೆ.
ತಾಂತ್ರಿಕ ದೋಷವಾಗಿತ್ತು. ಆದರೆ ಯಾರೋ ಪುಣ್ಯಾತ್ಮ ಅಷ್ಟು ದೊಡ್ಡ ಮೊತ್ತವನ್ನು ದೇಣಿಗೆ ನೀಡಿದ್ದಾರೆ ಎಂದು ಅವರು ನನಗೆ ಹೇಳಿದರು. ಇದು ನಮಗೆ ನಂಬಲು ಸಾಧ್ಯವಾಗಲಿಲ್ಲ. ನಂತರ ನಿಜವೆಂದಾದಮೇಲೆ ನಾವು ಭಾವಪರವಶರಾಗಿದ್ದೇವೆ’ ಎಂದು ತಿಳಿಸಿದ್ದಾರೆ.

ಅಲ್ಲದೆ ಅವರಿಗೆ ವೈಯಕ್ತಿಕವಾಗಿ ಧನ್ಯವಾದ ಹೇಳಲು ಬಯಸಿದ ಸಾರಂಗ್ ದಂಪತಿ ತಕ್ಷಣವೇ ಮಿಲಾಪ್‌ಗೆ ಸಂಪರ್ಕಿಸಿದ್ದಾರೆ. ಆದರೆ ದೇಣಿಗೆ ನೀಡಿದವರು ಎಲ್ಲೂ ತಮ್ಮ ಹೆಸರನ್ನು ಹೇಳಲು ಇಚ್ಚಿಸಿಲ್ಲ (Humanity). ತಾವು ಯಾರೆಂದು ಹೇಳುವುದಿಲ್ಲ ಎಂದಿದ್ದಾರೆಂದು ತಿಳಿಸಿದಾಗ ಅವರು ತುಂಬಾ ಆಶ್ಚರ್ಯಚಕಿತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾರಂಗ್ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ‘ಮಾನವೀಯತೆ (Humanity) ಇನ್ನೂ ಇದೆ, ಪ್ರಪಂಚದ ಯಾವುದೋ ಮೂಲೆಯಲ್ಲಿ ಕುಳಿತಿರುವವರು ನಮ್ಮ ಮಗುವಿಗೆ ಇಷ್ಟೊಂದು ದೊಡ್ಡ ಸಹಾಯ ಹಸ್ತ ಚಾಚಿದ್ದಾರೆಂದರೆ ನಿಜಕ್ಕೂ ಸಂತೋಷ. ಈ ವ್ಯಕ್ತಿ ಯಾರೇ ಆಗಿರಲಿ, ಅವನು ಅಥವಾ ಅವಳು ನಮಗೆ ದೇವರಂತೆ. ಎಂದು ಸಾರಂಗ್ ತಮ್ಮ ಪಾಲಿಗೆ ದೇವರಂತೆ ಬಂದ ಆ ಅನಾಮಧೇಯ ದಾನಿಯ ಔದಾರ್ಯವನ್ನು ಜಗತ್ತಿಗೆ ತಿಳಿಸಿದ್ದಾರೆ.

ಇದೀಗ ಅಷ್ಟೊಂದು ಹಣದ ನೆರವು ನೀಡಿದ ಪುಣ್ಯಾತ್ಮ ಯಾರೆಂದು ಸಣ್ಣ ಸುಳಿವು ಸಿಕ್ಕಿದ್ದು, ಆತ ಅಮೆರಿಕ ಮೂಲದವರು ಎಂದು ತಿಳಿದುಬಂದಿದೆ. ಆದರೆ, ಅವರ ಹೆಸರು ಮಾತ್ರ ಬಹಿರಂಗವಾಗಿಲ್ಲ. ‘ಮಾಧ್ಯಮದ ಮೂಲಕ ಮಗುವಿನ ಆರೋಗ್ಯ ಸ್ಥಿತಿ ತಿಳಿದಾಗ ಮನಸ್ಸಿಗೆ ತುಂಬಾ ನೋವಾಯಿತು. ಏನಾದರೂ ಸಹಾಯ ಮಾಡಬೇಕು ಅನಿಸಿತು. ನಾನು ಖ್ಯಾತಿಗಾಗಿ ಹಣವನ್ನು ನೀಡಿಲ್ಲ. ಮಗುವಿನ ಪಾಲಕರಿಗೂ ಕೂಡ ನನ್ನ ಹೆಸರು ತಿಳಿದಿಲ್ಲ. ಇಲ್ಲಿ ಮಗುವಿನ ಜೀವನ ತುಂಬಾ ಮುಖ್ಯವೇ ಹೊರತು, ನನ್ನ ಹೆಸರಲ್ಲ ಎಂದು ಅಪರಿಚಿತ ವ್ಯಕ್ತಿ ಕ್ರೌಡ್​ಫಂಡಿಂಗ್​ ಏಜೆನ್ಸಿಗೆ ತಿಳಿಸಿದ್ದಾರೆ.

ಸಾರಂಗ್ ಈಗ ಮುಂಬೈನ ಹಿಂದೂಜಾ ಆಸ್ಪತ್ರೆಯ ವೈದ್ಯರೊಂದಿಗೆ ಯುನೈಟೆಡ್ ಸ್ಟೇಟ್ಸ್‌ನಿಂದ ಔಷಧವನ್ನು ಆಮದು ಮಾಡಿಕೊಳ್ಳಲು ಚರ್ಚೆಯನ್ನು ಪ್ರಾರಂಭಿಸಿದ್ದಾರೆ. ಝೋಲ್ಗೆನ್ಸ್ಮಾ ಎಂಬ ಅಮೆರಿಕನ್ ಔಷಧಿ ಬಂದಾಗಲೆಲ್ಲ ಅವರು ಮುಂಬೈನ ಆಸ್ಪತ್ರೆಗೆ ಹೋಗುತ್ತಾರೆ. ವಿಶ್ವದ ಅತ್ಯಂತ ದುಬಾರಿ ಔಷಧ ಎಂದು ಕರೆಯಲ್ಪಡುವ ಇದು ಆರ್ಡರ್ ಮಾಡಿದ ನಂತರ ಭಾರತವನ್ನು ತಲುಪಲು ಸುಮಾರು 20 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದರ ಬಗ್ಗೆ ಮಾತನಾಡಿದ ಅವರು ‘ಕಸ್ಟಮ್ಸ್ ಸುಂಕ ಮತ್ತು ಜಿಎಸ್‌ಟಿಯಲ್ಲಿ ವಿನಾಯಿತಿ ಪಡೆಯಲು ನಾವು ಕೇರಳದ ಕಾಂಗ್ರೆಸ್ ಸಂಸದ ಹೈಬಿ ಈಡನ್ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಪರ್ಕಿಸಿದ್ದೇವೆ. ಕೆಲವು ವರ್ಷಗಳ ಹಿಂದೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಅಂತಹ ಜೀವರಕ್ಷಕ ಔಷಧಿಗಳಿಗೆ ಈಗಾಗಲೇ ಕರ್ತವ್ಯಗಳಿಂದ ವಿನಾಯಿತಿ ನೀಡಲಾಗಿದೆ ಎಂದು ನಮಗೆ ತಿಳಿಸಿದ್ದಾರೆ. ಸದ್ಯ ನಾವೀಗ ಜಿಲ್ಲಾ ವೈದ್ಯಕೀಯ ಅಧಿಕಾರಿಯಿಂದ ಘೋಷಣೆಯನ್ನು ಸಲ್ಲಿಸಬೇಕಾಗಿದೆ’ ಹೇಳಿದರು.

ಅಲ್ಲದೆ ಎಸ್‌ಎಂಎ ರೋಗದ ಬಗ್ಗೆ ಕೇಳಿದ್ದರೂ, ತನ್ನ ಏಕೈಕ ಮಗುವೂ ಅದರಿಂದ ಬಳಲುತ್ತಿದೆ ಎಂದು ತನಗೆ ತಿಳಿದಿರಲಿಲ್ಲ. ನಿರ್ವಾಣ್ ಸರಿಯಾಗಿ ಕುಳಿತುಕೊಳ್ಳಲು ಹೆಣಗಾಡಿದಾಗ, ಅವನು ಹುಟ್ಟಿನಿಂದಲೇ ಬೆನ್ನುಮೂಳೆಯ ವಿರೂಪತೆಯ ಕಾರಣ ಎಂದು ನಾವು ಭಾವಿಸಿದ್ದೆವು. ನಂತರ ವೈದ್ಯರ ಬಳಿ ತೋರಿಸಿದಾಗ ನರವಿಜ್ಞಾನಿಯೊಬ್ಬರು SMA ಕುರಿತು ತಿಳಿಸಿದರು ಎಂದು ಹೇಳಿದ್ದಾರೆ.

ಇನ್ನು ನಿರ್ವಾಣ್‌ನ ರೋಗನಿರ್ಣಯದ ನಂತರ, ಕುಟುಂಬವು ಕೇರಳದ ಎರ್ನಾಕುಲಂ ಜಿಲ್ಲೆಯ ಅಥಣಿಯಲ್ಲಿರುವ ಅದಿತಿಯ ಮನೆಗೆ ಸ್ಥಳಾಂತರಗೊಂಡಿತು.
ಅವರು ಜನವರಿ 25 ರಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಭೇಟಿಯಾದರು ಮತ್ತು ಅವರು ರಾಜ್ಯ ಸರ್ಕಾರದಿಂದ ಸಹಾಯ ಮಾಡುವ ಭರವಸೆ ನೀಡಿದರು. ತಿರುವನಂತಪುರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗವಾದ ಶ್ರೀ ಅವಿತ್ತಮ್ ತಿರುನಾಳ್ ಆಸ್ಪತ್ರೆಯ ಎಸ್‌ಎಂಎ ಕ್ಲಿನಿಕ್‌ಗೆ ಸಾರಂಗ್ ದಂಪತಿ ನಿರ್ವಾಣನನ್ನು ಕರೆದುಕೊಂಡು ಹೋಗುತ್ತಿದ್ದಾರೆ.

ಈ ಮೊದಲು ಸಾರಂಗ್ ಅವರು ಸಹಾಯಕ್ಕಾಗಿ ಸೆಲೆಬ್ರಿಟಿಗಳನ್ನು ಸಂಪರ್ಕಿಸಿದ್ದರು. ನಟ ಅಹಾನಾ ಕೃಷ್ಣ ಸೇರಿದಂತೆ ಹಲವರು ನಿರ್ವಾಣ್ ಅವರ ಚಿಕಿತ್ಸೆಗಾಗಿ ಸಹಾಯ ಕೋರಿ ದಂಪತಿಗಳು ರಚಿಸಿದ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ವಿನಂತಿಯ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಇದೀಗ ವೈದ್ಯಕೀಯ ನೆರವು ನಿಧಿಯಲ್ಲಿ 16 ಕೋಟಿ ರೂ.ಗೂ ಹೆಚ್ಚು ಹಣವಿದೆ. ಕ್ರೌಡ್ ಫಂಡಿಂಗ್ ಏಜೆನ್ಸಿ ಮಿಲಾಪ್ ಮೂಲಕ 15 ಕೋಟಿ ಮತ್ತು ಗುರು ಏಜೆನ್ಸಿ ಮೂಲಕ 1.4 ಕೋಟಿ ರೂ. ಸಂಗ್ರಹವಾಗಿದೆ. ಒಂದು ರೂಪಾಯಿ ಕೊಡಲು ಯೋಚಿಸುವ ಈ ಕಾಲದಲ್ಲಿ ಇಷ್ಟೊಂದು ಹಣದ ನೆರವು ನೀಡಿರುವ ಆ ಪುಣ್ಯಾತ್ಮ ನಿಜಕ್ಕೂ ದೇವರ ಪ್ರತಿರೂಪ ಎಂದರೆ ತಪ್ಪಾಗಲಾರದು.

Leave A Reply

Your email address will not be published.