ಮಂಗಳೂರು ಪೊಲೀಸ್‌ ಆಯುಕ್ತ ಶಶಿಕುಮಾರ್‌ ವರ್ಗಾವಣೆ

Mangalore News : ಸರ್ಕಾರ ಪ್ರಮುಖ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಎನ್. ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸದ್ಯ, ಶಶಿಕುಮಾರ್ ಅವರನ್ನು ರೈಲ್ವೇ ಇಲಾಖೆ ಪೊಲೀಸ್ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಳಗಾವಿ ಲೋಕಾಯುಕ್ತ ಎಸ್.ಪಿ. ಯಶೋಧಾ ವಂಟಗೋಡಿ ಅವರನ್ನು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. (Mangalore News ) ಸರ್ಕಾರ ಬೆಂಗಳೂರು ಪಶ್ವಿಮ ಸಂಚಾರ ವಿಭಾಗದ ಡಿಸಿಪಿ ಆಗಿ ಕಾರ್ಯ ನಿರ್ವಹಿಸಿದ ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರಾಗಿ ನಿಯೋಜಿಸಿದೆ.

ಎರಡು ವರ್ಷಗಳಿಂದ ಹಲವಾರು ಘಟನೆಗಳನ್ನು ನಿಯಂತ್ರಣಕ್ಕೆ ತಂದಿದ್ದರು ಎಂಬ ಹೆಗ್ಗಳಿಕೆ ಇದ್ದರೂ, ಸಾರ್ವಜನಿಕರಿಂದ ಹಲವು ಆರೋಪಗಳು ಕೇಳಿ ಬಂದಿದ್ದವು ಎಂದು ವರದಿಯಾಗಿದೆ. ಅಂದ ಹಾಗೆ ಒಂದು ಆರೋಪ ಕೇಳಿ ಬಂದಿರುವ ಕಾರಣ ಲೋಕಾಯುಕ್ತ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಚುನಾವಣೆ ಹತ್ತಿರ ಇರುವಾಗ ಶಶಿಕುಮಾರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಹೊಸ ಕಮೀಷನರ್‌ ಮುಂದಿನ ಎರಡು ದಿನಗಳಲ್ಲಿ ಅಧಿಕಾರ ವಹಿಸಲಿದ್ದಾರೆ. ಈ ವರ್ಗಾವಣೆ ಬಗ್ಗೆ ಶಶಿಕುಮಾರ್‌ ಅವರಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಯಾಗಿದೆ.

ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅರುಣಾಂಶುಗಿರಿ ಅವರನ್ನು ಸಿಎಆರ್ ಬೆಂಗಳೂರು ಡಿಸಿಪಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ವೈರ್ಲೆಸ್ ಎಸ್.ಪಿಯಾಗಿ ಕಾರ್ಯ ನಿರ್ವಹಿಸಿದ ಡಿ.ಕಿಶೋರ್ ಬಾಬು ಅವರನ್ನು ಗುಪ್ತದಳ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಮುಹಮ್ಮದ್ ಸುಜೀತಾ ಎಂ.ಎಸ್. ಅವರನ್ನು ಬೆಂಗಳೂರು ಸಿಎಆರ್ ಡಿಸಿಪಿಯಿಂದ ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೆಎಸ್ ಆರ್ ಪಿ ಬೆಂಗಳೂರು ಕಮಾಂಡೆಂಟ್ ಆಗಿದ್ದ ಕೆ.ವಂಶಿಕೃಷ್ಣ ಅವರನ್ನು ಬೆಂಗಳೂರು ವೈರ್ಲೆಸ್ ಎಸ್.ಪಿಯಾಗಿ ವರ್ಗಾವಣೆ ಮಾಡಲಾಗಿದೆ.

Leave A Reply

Your email address will not be published.