ಈ ಗ್ರಾಮದಲ್ಲಿ ಹೆಂಗಸರು ನೈಟಿ ಧರಿಸಿದರೆ ಗಂಡಸರಿಗೆ ಬೀಳುತ್ತೆ ದಂಡದ ಬರೆ, ಯಾಕೀ ವಿಚಿತ್ರ ನಿಯಮ ?!
ನೈಟಿ ! ಅದರ ಹೆಸರೇ ಸೂಚಿಸುವಂತೆ ಅದು ರಾತ್ರಿಯ ಉಡುಗೆ. ಕನ್ನಡದಲ್ಲಿ ಅದನ್ನು ಕರೆಯಬೇಕೆಂದರೆ, ಮೇಲಿನಿಂದ ಕೆಳಗಿನವರೆಗೆ ಬಿಡುವ ಉದ್ದ ನಿಲುವಂಗಿ ಅಂತ ಕರೆಯಬಹುದು. ಈಗೀಗ ಅದನ್ನು ರಾತ್ರಿ ಮಾತ್ರವಲ್ಲ ಹಗಲು ಕೂಡಾ ಮಹಿಳೆಯರು ಉಡುವುದಿದೆ. ಆಂಟಿಯರಿಗಂತೂ ನೈಟಿ ಅಂದರೆ ಅಚ್ಚುಮೆಚ್ಚು. ಆಂಟಿಯರಿಗೆ ಹೇಳಿ ಮಾಡಿಸಿದ ಡ್ರೆಸ್ ಈ ನೈಟಿ. ಆದರೆ ಆ ಊರಿನಲ್ಲಿ ಹಗಲು ನೈಟಿ ಉಡುವುದು ನಿಷಿದ್ಧ. ಅದ್ಯಾವ ಊರು, ಅದ್ಯಾಕೆ ಅಲ್ಲಿ ನೈಟಿ ನಿಷಿದ್ಧ ಗೊತ್ತಾ ?
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತೋಕಲಪಲ್ಲಿ ಗ್ರಾಮದಲ್ಲಿ ಹಗಲು ಹೊತ್ತಿನಲ್ಲಿ ಮಹಿಳೆಯರು ನೈಟಿ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಯಾವುದೇ ಮಹಿಳೆ ನೈಟಿ ಧರಿಸಬಾರದು ಹಾಗೂ ಯಾರಾದರೂ ನಿಯಮ ಪಾಲಿಸದೆ ನೈಟಿಯಲ್ಲಿ ಅಡ್ಡಾಡುವುದು ಕಂಡು ಬಂದರೆ ಅವರಿಗೆ 2000 ರೂಪಾಯಿ ದಂಡ ವಿಧಿಸಲು ಅಲ್ಲಿನ ಗ್ರಾಮದ ಹಿರಿಯರು ನಿರ್ಧರಿಸಿದ್ದಾರೆ.
ನೈಟಿ ಹಾಕಿಕೊಂಡು ಪ್ರತ್ಯಕ್ಷ ಆಗುವ ಯುವತಿಯರಿಗೆ 2000 ರೂಪಾಯಿ ದಂಡ ವಿಧಿಸಲಾಗುತ್ತದೆ. ಅದೇ ದೇವಸ್ಥಾನಗಳಿಗೆ ನೈಟಿ ಹಾಕಿಕೊಂಡು ಬರುವ ಮಹಿಳೆಯರಿಗೆ ಇನ್ನೂ ಹೆಚ್ಚಿನ ಮೊತ್ತದ ದಂತ ಪ್ರಯೋಗ ಮಾಡಲಾಗುತ್ತದೆ. ದೇವಸ್ಥಾನಕ್ಕೆ ನೈಟಿ ಹೇರಿಕೊಂಡು ಬರುವ ಮಹಿಳೆಯರಿಗೆ ಬರೋಬ್ಬರಿ 5000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ನಿಯಮವು ಇಡೀ ಹಳ್ಳಿಗೂ ಅನ್ವಯಿಸುತ್ತಿದೆ. ಒಂದು ವೇಳೆ ಮಹಿಳೆಯರು ನೈಟಿ ಧರಿಸಿ ಹೋದರೆ ಆ ಮನೆಯ ಪುರುಷರಿಗೆ ಬೀಳತ್ತೆ ದಂಡದ ಬರೆ. ಈ ದಂಡದ ಮೂಲಕ ಸಂಗ್ರಹವಾಗುವ ಹಣವನ್ನು ಆ ಹಳ್ಳಿಯ ಒಟ್ಟು 11,000 ಕುಟುಂಬಗಳ ಸುಮಾರು 36,000 ಜನಸಂಖ್ಯೆ ಹೊಂದಿರುವ ಗ್ರಾಮದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಹೇಳಲಾಗುತ್ತಿದೆ.
ಅಚ್ಚರಿಯ ವಿಷ್ಯ ಏನಪ್ಪಾ ಅಂದ್ರೆ ಅಲ್ಲಿನ ನೈಟಿ ಬ್ಯಾನ್ ಬಗ್ಗೆ ಯಾವ ಮಹಿಳೆಯೂ ಊರಿನ ಆ ನಿರ್ಧಾರವನ್ನು ವಿರೋಧಿಸಲು ಮುಂದಾಗಿಲ್ಲ ಎನ್ನುವುದು. ”ನಮ್ಮ ಗ್ರಾಮದ ಎಲ್ಲ ಮಹಿಳೆಯರು ಸೇರಿ ರೂಪಿಸಿದ ನಿಯಮಾವಳಿಗಳನ್ನು ಪಾಲಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ನಮ್ಮ ಸಂಪ್ರದಾಯವನ್ನು ಗೌರವಿಸಲು ಮತ್ತು ಅನುಸರಿಸಲು ನಾವೆಲ್ಲರೂ ಒಟ್ಟಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ” ಎಂದು ಅಲ್ಲಿನ ಮಹಿಳೆಯರು ಹೇಳಿದ್ದಾರೆ. ಆದರೆ, ಅಲ್ಲಿನ ನೈಟಿ ಬ್ಯಾನ್ ಬಗ್ಗೆ ಖುಷಿ ಪಟ್ಟವರು ಅಲ್ಲಿನ ಪುರುಷ ಪುಂಗವರಂತೆ. ಯಾವತ್ತೂ ಕಿತ್ತು ಹೋಗಿರೋ ನೈಟಿ ಹಾಕ್ಕೊಂಡು, ಹರಿದ ಕಡೆ ಪಿನ್ ಚುಚ್ಕೊಂಡು, ನೈಟಿಯ ಬಲಬದಿಗೆ ಕೈ ಒರೆಸಿಕೊಂಡು ಸದಾ ಒದ್ದೆ ಮಾಡಿಕೊಂಡಿರುವ ಆಂಟಿಯರು ಈಗ ಲಕ್ಷಣವಾಗಿ ಸೀರೆಯಲ್ಲಿ ಸೆರಗು ಬಿಗಿದು, ದುಡಿಯಲು ಹೋಗಿ ಬರುವ ಗಂಡಂದಿರನ್ನು ಬಿಸಿ ಬಿಸಿ ಕಾಫಿ ಕಪ್ಪಿನ ಜತೆ ಬರಮಾಡಿಕೊಳ್ಳುತ್ತಿದ್ದಾರಂತೆ. ಮಹಿಳೆಯರ ನೈಟಿ ಬ್ಯಾನ್ ನ ಹಿಂದೆ ರಸಿಕ ಪುರುಷರ ಕೈವಾಡ ಇರಬಹುದೇ ?!